ಮುಂಬೈ: 2023ರ ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ, ಒಟ್ಟು ಸರಾಸರಿ ಮಾರುಕಟ್ಟೆ ಬಂಡವಾಳವು (ಅಂದರೆ, ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಒಟ್ಟು ಷೇರುಗಳ ಮೊತ್ತ) 321.8 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿ ಹೊಸ ಗರಿಷ್ಠ ಮಟ್ಟ ಮುಟ್ಟಿದೆ ಎಂದು ಬ್ರೋಕರೇಜ್ ಸಂಸ್ಥೆ ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ವರದಿ ಹೇಳಿದೆ. ಹಿಂದಿನ 6 ತಿಂಗಳುಗಳಿಗೆ (2023ರ ಜನವರಿಯಿಂದ ಜೂನ್ವರೆಗೆ) ಹೋಲಿಸಿದರೆ ಇದು ಶೇಕಡಾ 17.7ರಷ್ಟು ಏರಿಕೆಯಾಗಿದೆ.
ಸ್ಮಾಲ್‌ಕ್ಯಾಪ್‌ಗಳಲ್ಲಿ 38.6 ಪ್ರತಿಶತದ ಏರಿಕೆಯೊಂದಿಗೆ ಅತ್ಯಂತ ಗಮನಾರ್ಹವಾದ ಬೆಳವಣಿಗೆ ಇದಾಗಿದೆ. ಮಿಡ್‌ಕ್ಯಾಪ್‌ಗಳು 26 ಪ್ರತಿಶತದಷ್ಟು ಏರಿಕೆ ಕಂಡಿದ್ದರೆ, ಲಾರ್ಜ್‌ಕ್ಯಾಪ್‌ಗಳು 11 ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿವೆ ಎಂದು ವರದಿ ತಿಳಿಸಿದೆ.
ಈ ಅವಧಿಯ ಮಾರುಕಟ್ಟೆಯಲ್ಲಿ 8 ಮಿಡ್‌ಕ್ಯಾಪ್‌ಗಳು ಲಾರ್ಜ್‌ಕ್ಯಾಪ್‌ಗಳಾಗಿ ಪರಿವರ್ತನೆಯಾಗಿದ್ದರೆ, 12 ಸ್ಮಾಲ್‌ಕ್ಯಾಪ್‌ಗಳು ಮಿಡ್‌ಕ್ಯಾಪ್ ವರ್ಗಕ್ಕೆ ಮುನ್ನಡೆದಿವೆ.
2023 ರ ದ್ವಿತೀಯಾರ್ಧದಲ್ಲಿ ಲಾರ್ಜ್ ಕ್ಯಾಪ್ಗಳಾಗಿ ಬದಲಾದ ಮಿಡ್‌ಕ್ಯಾಪ್‌ಗಳೆಂದರೆ ಪವರ್ ಫೈನಾನ್ಸ್ ಕಾರ್ಪ್, ಐಆರ್‌ಎಫ್‌ಸಿ, ಮ್ಯಾಕ್ರೋಟೆಕ್ ಡೆವಲಪರ್ಸ್, ಪಾಲಿಕ್ಯಾಬ್ ಇಂಡಿಯಾ, ಆರ್‌ಇಸಿ, ಶ್ರೀರಾಮ್ ಫೈನಾನ್ಸ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್.
ಏತನ್ಮಧ್ಯೆ, ಮಿಡ್‌ಕ್ಯಾಪ್‌ಗೆ ತಿರುಗಿದ ಸ್ಮಾಲ್-ಕ್ಯಾಪ್‌ಗಳೆಂದರೆ ಮಜಗಾಂವ್ ಡಾಕ್, ಸುಜ್ಲಾನ್ ಎನರ್ಜಿ, ಲಾಯ್ಡ್ಸ್ ಮೆಟಲ್ಸ್, ಎಸ್‌ಜೆವಿಎನ್, ಕಲ್ಯಾಣ್ ಜ್ಯುವೆಲರ್ಸ್, ಕೆಇಐ ಇಂಡಸ್ಟ್ರೀಸ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ, ಎಕ್ಸೈಡ್ ಇಂಡ್, ನಿಪ್ಪಾನ್ ಲೈಫ್, ಅಜಂತಾ ಫಾರ್ಮಾ, ನಾರಾಯಣ ಹೃದಯಾಲಯ ಮತ್ತು ಜೆನ್‌ಮಾರ್ಕ್ ಫಾರ್ಮಾ.
ಇದಕ್ಕೆ ವ್ಯತಿರಿಕ್ತವಾಗಿ, 8 ಲಾರ್ಜ್‌ಕ್ಯಾಪ್‌ಗಳು ಕುಸಿತವನ್ನು ಅನುಭವಿಸಿದ್ದು, ಮಿಡ್‌ಕ್ಯಾಪ್‌ಗಳಾಗಿ ಪರಿವರ್ತಿತವಾಗಿವೆ.. 15 ಮಿಡ್‌ಕ್ಯಾಪ್‌ಗಳು ಸ್ಮಾಲ್‌ಕ್ಯಾಪ್‌ಗಳಾಗಿ ಹಿನ್ನಡೆ ಕಂಡಿದೆ.
ಇದಲ್ಲದೆ, ಒಂದು ವಿಭಜಿತ ಘಟಕ (ಜಿಯೋ ಫೈನಾನ್ಷಿಯಲ್ ಸರ್ವಿಸಸ್) ಕೂಡ ದೊಡ್ಡ ಕ್ಯಾಪ್ ವಿಭಾಗಕ್ಕೆ ಸೇರಿದೆ ಎಂದು ಬ್ರೋಕರೇಜ್ ಸಂಸ್ಥೆಯ ವರದಿ ಹೇಳಿದೆ.
3 ಇನಿಷಿಯಲ್ ಪಬ್ಲಿಕ್ ಆಫರ್ಗಳು (ಐಪಿಒಗಳು) ಮಿಡ್‌ಕ್ಯಾಪ್ ವಿಭಾಗದಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ. ಟಾಟಾ ಟೆಕ್, ಜೆಎಸ್‌ಡಬ್ಲ್ಯು ಇನ್‌ಫ್ರಾ ಮತ್ತು ಐಆರ್‌ಇಡಿಎ ಈ ಸಂಸ್ಥೆಗಳಾಗಿವೆ.
ಈ ಅವಧಿಯಲ್ಲಿ 50ಕ್ಕೂ ಹೆಚ್ಚು ಐಪಿಒಗಳ ಮೂಲಕ ಮಾರುಕಟ್ಟೆ ಬಂಡವಾಳೀಕರಣಕ್ಕೆ ಅಂದಾಜು 3.48 ಲಕ್ಷ ಕೋಟಿ ರೂಪಾಯಿ ಸೇರ್ಪಡೆಯಾಗುವುದರೊಂದಿಗೆ ಹೊಸ ಬಂಡವಾಳದ ಒಳಹರಿವು ಸ್ಪಷ್ಟವಾಗಿದೆ. ಈ ಬಂಡವಾಳದಲ್ಲಿ 33% ಮಿಡ್‌ಕ್ಯಾಪ್‌ಗಳಿಗೆ ಹಾಗೂ 67% ಸ್ಮಾಲ್‌ಕ್ಯಾಪ್‌ಗಳಿಗೆ ಹರಿದುಹೋಗಿದೆ.
20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮಾರುಕಟ್ಟೆ ಬಂಡವಾಳೀಕರಣ ಇರುವ ಕಂಪನಿಯನ್ನು ಲಾರ್ಜ್ ಕ್ಯಾಪ್ ಕಂಪನಿ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಒಂದು ಕಂಪನಿ ಎಲ್ಲ ಷೇರುಗಳ ಮೌಲ್ಯವು 20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಇರಬೇಕು. 20 ಸಾವಿರ ಕೋಟಿ ರೂಪಾಯಿಗಿಂತ ಕಡಿಮೆ ಮತ್ತು 5 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮಾರುಕಟ್ಟೆ ಬಂಡವಾಳೀಕರಣ ಇರುವ ಕಂಪನಿಯನ್ನು ಮಿಡ್ ಕ್ಯಾಪ್ ಕಂಪನಿ ಎಂದು ಹೇಳುತ್ತಾರೆ. ಇನ್ನು 5 ಸಾವಿರ ಕೋಟಿ ರೂಪಾಯಿಗಳಿಗಿಂತ ಕಡಿಮೆ ಮಾರುಕಟ್ಟೆ ಬಂಡವಾಳೀಕರಣ ಇರುವ ಕಂಪನಿಯನ್ನು ಸ್ಮಾಲ್ ಕ್ಯಾಪ್ ಕಂಪನಿ ಎನ್ನುತ್ತಾರೆ.