ನ್ಯೂಸ್

ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟು ಇನ್ನೂ ಇದೆಯಾ?; ಹಾಗಿದ್ದರೆ ಹುಷಾರು!

Webdesk - Ravikanth

ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ನಿಮ್ಮ ಬಳಿ ಇನ್ನೂ ಇದೆಯಾ? ಹಾಗಿದ್ದರೆ ಹುಷಾರು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆದಿರುವ ಈ ನೋಟುಗಳನ್ನು ಬದಲಿಸಿಕೊಳ್ಳಲು ವಿಧಿಸಲಾದ ಅಂತಿಮ ಗಡುವು ಹತ್ತಿರ ಬಂದಿದೆ.

ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಮೇ 19ರಂದು ಘೋಷಣೆ ಮಾಡಿತ್ತು. ಅಲ್ಲದೆ, ಮೇ 23ರಿಂದಲೇ ನೋಟನ್ನು ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದಕ್ಕಾಗಿ ಸೆ. 30ರ ಗಡುವು ಕೂಡ ವಿಧಿಸಿದೆ. ಆ ಪ್ರಕಾರ ಈ ತಿಂಗಳಲ್ಲಿ ನೋಟು ಹಿಂದಿರುಗಿಸಲು ಇರುವ ಗಡುವು ಮುಗಿಯಲಿದೆ.

ಸೆ. 30 ಅಂದರೆ ಹೆಚ್ಚೂಕಡಿಮೆ ಇನ್ನೂ ಒಂದು ತಿಂಗಳು ಇದೆ ಎಂದು 2 ಸಾವಿರ ರೂ. ನೋಟು ಇರುವವರು ಸುಮ್ಮನಾಗಬೇಡಿ. ಏಕೆಂದರೆ ಈ ತಿಂಗಳಲ್ಲಿ ವಿವಿಧ ಹಬ್ಬ, ಸರ್ಕಾರಿ ರಜೆಗಳನ್ನು ಸೇರಿ ಒಟ್ಟು 16 ದಿನ ಬ್ಯಾಂಕ್ ರಜೆ ಇರಲಿದೆ. ಹೀಗಾಗಿ 2 ಸಾವಿರ ರೂ. ನೋಟು ಹಿಂದಿರುಗಿಸಲು ತಡ ಮಾಡಿದಷ್ಟೂ ಸಮಸ್ಯೆ ಆಗುವ ಸಾಧ್ಯತೆ ಅಧಿಕವಿದೆ.

ನೋಟು ಹಿಂಪಡೆದಿರುವುದನ್ನು ಘೋಷಿಸಿದ ಸಂದರ್ಭದಲ್ಲಿ 2 ಸಾವಿರ ರೂ. ನೋಟುಗಳು 3.32 ಲಕ್ಷ ಕೋಟಿ ರೂಪಾಯಿಯಷ್ಟು ಇದ್ದವು. ಈಗ ಆ. 31ರ ಲೆಕ್ಕದ ಪ್ರಕಾರ ಅದರ ಪ್ರಮಾಣ 0.24 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅಂದರೆ ಒಟ್ಟು ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 93 ಹಿಂದಿರುಗಿಸಲ್ಪಟ್ಟಿವೆ. ಆ ಪೈಕಿ ಶೇ. 87ರಷ್ಟು ನೋಟುಗಳು ಠೇವಣಿ ಆಗಿದ್ದು, ಇನ್ನು ಶೇ. 13ರಷ್ಟನ್ನು ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಲಾಗಿದೆ.