ನ್ಯೂಸ್

ಕೋವಿಡ್​ ನಡುವೆಯೂ ರಜೆಯ ಮೋಜು ಅನುಭವಿಸಲು ಕಂಡುಕೊಂಡರು ಮಾರ್ಗ!

vinaymk1969

ನವದೆಹಲಿ: ಈಗ ಕೋವಿಡ್​-19 ಪಿಡುಗು ವಿಶ್ವಾದ್ಯಂತ ಹಬ್ಬಿದೆ. ವಿದೇಶಗಳಿಗೆ ಹೋಗಿ ಬೇಸಿಗೆ ರಜೆಯ ಮೋಜು ಅನುಭವಿಸುತ್ತಿದ್ದವರಿಗೆ ಕಾಲುಕಟ್ಟಿ ಹಾಕಿದ ಅನುಭವ. ಸೋಂಕು ಪ್ರಸರಣವಾಗುವ ಭೀತಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಕೂಡ ರದ್ದಾಗಿದೆ. ಸುತ್ತಮುತ್ತಲ ಪ್ರದೇಶಗಳಿಗೆ ಪ್ರವಾಸ ಹೋಗೋಣ ಎಂದರೆ ಕರೊನಾ ಸೋಂಕು ತಗಲುವ ಭಯ. ಹಾಗಾಗಿ ಜನರು ಮನೆಗೇ ಸೀಮಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಿದ್ದೂ ಬೆಲ್ಜಿಯಂನ ಜನತೆ ಸೋಂಕಿನ ಭೀತಿ ಇಲ್ಲದೆ, ಹೋಟೆಲ್​ ಕೋಣೆ ಬುಕ್​ ಮಾಡುವ ಗೋಜು ಇಲ್ಲದೆ ತಮ್ಮದೇ ಆದ ರೀತಿಯಲ್ಲಿ ರಜೆಯ ಮೋಜು ಅನುಭವಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಅದುವೇ ಸ್ಟೇಕೇಷನ್ಸ್​!

ಸ್ಟೇಕೇಷನ್ಸ್​ ಎಂದರೆ, ಮರಗಳಿಗೆ ನೀರಿನ ಹನಿಯಾಕಾರದ ಟೆಂಟ್​ಗಳನ್ನು ಇಳಿಬಿಟ್ಟು, ಅದರಲ್ಲಿ ಜನರನ್ನು ಇರಿಸುವುದಾಗಿದೆ. ಭೂಮಿಯಿಂದ ಎತ್ತರದ ಪ್ರದೇಶದಲ್ಲಿ ಇರುವುದರಿಂದ, ಸೋಂಕಿನ ಭೀತಿಯೂ ಇರುವುದಿಲ್ಲ. ಖಾಸಗಿತನಕ್ಕೂ ಧಕ್ಕೆ ಒದಗುವುದಿಲ್ಲ.

ಇದು ಡಚ್​ ಕಲಾವಿದ ಡ್ರೇ ಪ್ಯಾಪಿನಾರ್​ ಎಂಬುವರ ಪರಿಕಲ್ಪನೆ. ಮರದ ಕೊಂಬೆಗಳಿಗೆ ಜೋತು ಬಿದ್ದಿರುವ ಟೆಂಟ್​ಗಳು ಕಲಾಕೃತಿಗಳಂತೆ ತೋರುತ್ತವೆ. ಹಾಗಾಗಿ ಅವು ವಾಣಿಜ್ಯ ಬಳಕೆಗೆ ಬಳಸುವ ಸಾಮಾನ್ಯ ಟೆಂಟ್​ಗಳಿಗಿಂತ ಭಿನ್ನವಾಗಿ ಕಾಣುತ್ತವೆ.

ಈ ಟೆಂಟ್​ಗಳಲ್ಲಿ ಇಬ್ಬರು ಇರಲು ಸ್ಥಳಾವಕಾಶವಿದೆ. ಶೌಚಗೃಹ ಮತ್ತು ಅಡುಗೆಮನೆಗಳೂ ಇರುವುದರಿಂದ, ಪರಿಸರದೊಂದಿಗೆ ಬೆರೆತು ಇಬ್ಬರು ಆರಾಮವಾಗಿ ಇರಬಹುದಾಗಿದೆ. ಒಂದು ರಾತ್ರಿಗೆ 5,962 ರೂ. ಶುಲ್ಕ ನಿಗದಿಪಡಿಸಲಾಗಿದೆ. ಸರ್ಕಾರಗಳು ನಮ್ಮ ಸುತ್ತಮುತ್ತಲ ಪ್ರದೇಶಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಜನರು ಇಂಥ ತಾಣಗಳಿಗಾಗಿ ಅರಸಲಾರಂಭಿಸಿದರು. ನಮ್ಮ ಟೆಂಟ್​ಗಳು ಲಭ್ಯ ಇವೆ ಎಂಬುದು ಗೊತ್ತಾದ ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಮುಂಗಡವಾಗಿ ಕಾಯ್ದಿರಿಸಲ್ಪಟ್ಟವು. ಇನ್ನಷ್ಟು ಟೆಂಟ್​ಗಳು ಇದ್ದಿದ್ದರೆ ಅವು ಕೂಡ ಬುಕ್​ ಆಗಿರುತ್ತಿದ್ದವು ಎಂದು ಬೆಲ್ಜಿಯಂನ ಬೋರ್​ಗ್ಲೂನ್​ ಎಂಬ ಪ್ರವಾಸಿತಾಣದ ಕ್ಯಾಥರೀನ್​ ಹೌಬೆ ಹೇಳುತ್ತಾರೆ.