ಹಾಸನಕ್ಕೂ ಬೇಡ, ಚಿಕ್ಕಮಗಳೂರಿಗೂ ಬೇಡ...ರಾಜಕೀಯ ಮೇಲಾಟದ ಮಧ್ಯೆ ಮೂಕ ಪ್ರಾಣಿಗಳ ಗೋಳು ಕೇಳೋರ್ಯಾರು? 
ರಾಜ್ಯ

ಹಾಸನಕ್ಕೂ ಬೇಡ, ಚಿಕ್ಕಮಗಳೂರಿಗೂ ಬೇಡ...ರಾಜಕೀಯ ಮೇಲಾಟದ ಮಧ್ಯೆ ಮೂಕ ಪ್ರಾಣಿಗಳ ಗೋಳು ಕೇಳೋರ್ಯಾರು? Elephant Politics

ಹೌದು, ರಾಜ್ಯದಲ್ಲಿ ಸದ್ಯ ಆನೆ ರಾಜಕಾರಣ ಸಖತ್​ ಸದ್ದು ಮಾಡುತ್ತಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿಗೆ 64 ವರ್ಷದ ಫೀಜ್ ಉರ್ ರೆಹಮಾನ್ ಬಲಿಯಾದರು. ಇದಕ್ಕೂ ಮುನ್ನ ಬೇಲೂರಿನ ಪಾಳುಬಿದ್ದ ಕೃಷಿ ಜಮೀನೊಂದರಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ 65 ವರ್ಷದ ಜಯಮ್ಮ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.

ಹಾಸನ/ಚಿಕ್ಕಮಗಳೂರು/ಬೆಂಗಳೂರು: ಒಂದೆಡೆ ತುತ್ತು ಅನ್ನಕ್ಕಾಗಿ ಬೆವರು ಸುರಿಸುವ ರೈತನಿಗೆ ಪ್ರಾಣಭಯ, ಮತ್ತೊಂದೆಡೆ ಹಸಿರು ಕಾಡನ್ನೇ ಕಳೆದುಕೊಂಡು ದಿಕ್ಕು ತೋಚದೆ ಅಲೆಯುತ್ತಿರುವ ಮೂಕ ಪ್ರಾಣಿಗಳ ಆಕ್ರಂದನ... ಆದರೆ, ಈ ಎರಡೂ ಜೀವಗಳ ನೋವಿನ ನಡುವೆ ಈಗ 'ರಾಜಕೀಯ'ದ ಮೇಲಾಟ ( Elephant Politics ) ಶುರುವಾಗಿದೆ. ಹಾಸನದ ತೋಟಗಳಲ್ಲಿ ಹೆಜ್ಜೆ ಇಟ್ಟರೆ ಸಾವಿನ ಭಯ, ಚಿಕ್ಕಮಗಳೂರಿನ ಮಡಿಲಿಗೆ ಕಳುಹಿಸಿದರೆ ಅಲ್ಲಿನ ಜನರ ಆಕ್ರೋಶ! ಮನುಷ್ಯನ ದುರಾಸೆಗೆ ಬಲಿಯಾಗಿ ತನ್ನದೇ ತವರುಮನೆಯನ್ನು ಕಳೆದುಕೊಂಡ ಆನೆಗಳಿಗೆ ಇಂದು ಎಲ್ಲಿಯೂ ನೆಲೆಯಿಲ್ಲದಂತಾಗಿದೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪ, ರಾಜೀನಾಮೆ ಬೆದರಿಕೆಗಳ ನಡುವೆ "ನಮ್ಮ ಬದುಕಿಗೆ ಎಲ್ಲಿ ಜಾಗವಿದೆ?" ಎಂದು ಮೂಕವೇದನೆಯಿಂದ ಕೇಳುತ್ತಿರುವ ಗಜಪಡೆಗಳ ಅಸಹಾಯಕತೆಯ ಕಥೆಯಿದು.

ಹೌದು, ರಾಜ್ಯದಲ್ಲಿ ಸದ್ಯ ಆನೆ ರಾಜಕಾರಣ ಸಖತ್​ ಸದ್ದು ಮಾಡುತ್ತಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿಗೆ 64 ವರ್ಷದ ಫೀಜ್ ಉರ್ ರೆಹಮಾನ್ ಬಲಿಯಾದರು. ಇದಕ್ಕೂ ಮುನ್ನ ಬೇಲೂರಿನ ಪಾಳುಬಿದ್ದ ಕೃಷಿ ಜಮೀನೊಂದರಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ 65 ವರ್ಷದ ಜಯಮ್ಮ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಇದಿಷ್ಟೇ ಅಲ್ಲದೆ, ಆನೆ ದಾಳಿಯಿಂದ ಸ್ಥಳೀಯವಾಗಿ ಸಾಕಷ್ಟು ಬೆಳೆಗಳು ಹಾನಿಯಾಗಿದ್ದು, ನಿರಂತರ ದಾಳಿಯಿಂದ ಬೇಸತ್ತ ಬೇಲೂರಿನ ಜನತೆ ಆನೆಗಳನ್ನು ಸ್ಥಳಾಂತರ ಮಾಡಿ ಎಂದು ಪ್ರತಿಭಟಿಸಿದರು. ಆನೆಗಳ ಹಿಂಡಿನಿಂದಾಗಿ ಬದುಕುವುದೇ ಕಷ್ಟವಾಗಿದೆ. ಹೇಗಾದರೂ ಮಾಡಿ ಬೇರೆಡೆಗೆ ವರ್ಗಾಯಿಸಿ ಎಂದು ಅರಣ್ಯ ಇಲಾಖೆ ಮುಂದೆ ಪಟ್ಟು ಹಿಡಿದಿದ್ದರು.

ಇಷ್ಟಕ್ಕೆ ಸುಮ್ಮನಾದ ಹಾಸನ ಮಂದಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಲಿಂಗೇಗೌಡರ ಮುಂದೆಯೂ ಆಕ್ರೋಶ ಹೊರಹಾಕಿದ್ದರು. ಕೊನೆಗೆ ಸಚಿವರ ಕೋರಿಕೆಯ ಮೇರೆಗೆ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲಿಗೆ ಹಾಸನ ಮಂದಿಗೆ ಒಂದು ರಿಲೀಫ್​ ಎನ್ನಬಹುದು. ಸರ್ಕಾರಕ್ಕೂ ಒಂದು ಪರಿಹಾರ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಇದೀಗ ಎದುರಾಗಿದೆ. ಹಾಸನ ಬೆನ್ನಲ್ಲೇ ಇದೀಗ ಚಿಕ್ಕಮಗಳೂರಿನ ಜನತೆ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಸ್ಥಳೀಯ ಜನರು ಮಾತ್ರವಲ್ಲ ಅಲ್ಲಿನ ರಾಜಕೀಯ ಜನಪ್ರತಿನಿಧಿಗಳು ಕೂಡ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಆನೆಗಳನ್ನು ಸ್ಥಳಾಂತರ ಮಾಡುವ ವಿಚಾರ ಇದೀಗ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ಚಿಕ್ಕಮಗಳೂರಿನ ಜನತೆಯ ಆಕ್ರೋಶಕ್ಕೆ ಕಾರಣ ಏನೆಂದರೆ, ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿರುವುದು. ಈ ಭದ್ರಾ ಅಭಯಾರಣ್ಯ ಚಿಕ್ಕಮಗಳೂರಿನಲ್ಲಿ ಹೆಚ್ಚು ಹರಡಿಕೊಂಡಿದೆ. ಈಗ ಆನೆಗಳನ್ನು ಸ್ಥಳಾಂತರ ಮಾಡುತ್ತಿರುವುದರಿಂದ ಅಲ್ಲಿನ ಕಾಡಂಚಿನಲ್ಲಿರುವ ಜನತೆಗೆ ಪ್ರಾಣ ಭಯ ಶುರುವಾಗಿದೆ. ಹೀಗಾಗಿ, ಅಲ್ಲಿನ ಜನರು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ದಯವಿಟ್ಟು ನಮ್ಮಲ್ಲಿಗೆ ಆನೆಗಳನ್ನು ಸ್ಥಳಾಂತರ ಮಾಡಬೇಡಿ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ನಯನಾ ಮೋಟಮ್ಮ ರಾಜೀನಾಮೆ

ಇನ್ನೂ ಅರಣ್ಯ ಇಲಾಖೆಯ ಈ ನಡೆ ಕೇವಲ ಸ್ಥಳೀಯ ಜನರ ಆಕ್ರೋಶಕ್ಕೆ ಮಾತ್ರವಲ್ಲ ಅಲ್ಲಿನ ಜನಪತ್ರಿನಿಧಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಅದರಲ್ಲೂ ಮೂಡಿಗೆರೆಯ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಜನತೆಯ ಪರವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದು (ನ.23) ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ನಯನಾ, ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ, ರಾಜೀನಾಮೆ ನೀಡುವುದಾಗಿ ತಿಳಿಸಿದರು. ತಮ್ಮ ರಾಜೀನಾಮೆ ಪತ್ರದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಶಾಸಕರ ಗಮನಕ್ಕೆ ತಾರದೆ ಮತ್ತು ಸ್ಥಳೀಯ ಜನಪ್ರತಿನಿಧಿಯಾದ ತಮ್ಮೊಂದಿಗೆ ಸಮಾಲೋಚನೆ ನಡೆಸದೆ, ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿರುವ 50-60 ಕಾಡಾನೆಗಳ ಹಿಂಡನ್ನು ತಮ್ಮ ಕ್ಷೇತ್ರದ ತಕ್ಕೋಳ ಮೀಸಲು ಅರಣ್ಯಕ್ಕೆ ಏಕಾಏಕಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿರುವುದು ನೋವಿನ ಸಂಗತಿ. ಈ ಹಿಂದೆ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಬಿಡಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಈಗಾಗಲೇ ಕಾಡಾನೆ ಮತ್ತು ಕಾಡುಕೋಣಗಳ ಹಾವಳಿಯಿಂದ ತತ್ತರಿಸಿ ಹಲವು ಜೀವಗಳನ್ನು ಕಳೆದುಕೊಂಡಿರುವ ತಮ್ಮ ಕ್ಷೇತ್ರಕ್ಕೆ, ಈಗಾಗಲೇ 36 ಆನೆಗಳನ್ನು ಕಾರ್‌ಬೈಲ್‌ವರೆಗೆ ಡ್ರೈವ್ ಮಾಡಿ ತಕ್ಕೋಳ ಅರಣ್ಯಕ್ಕೆ ಬಿಡಲು ಸಿದ್ಧತೆ ನಡೆಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ನಯಾನಾ ಮೋಟಮ್ಮ ಬೇಸರ ಹೊರಹಾಕಿದ್ದಾರೆ.

ರಾಜೀನಾಮೆ ಅಂಗೀಕರಿಸಲು ಮನವಿ

ಬೇಲೂರಿನಿಂದ ತಕ್ಕೋಳ ಅರಣ್ಯಕ್ಕೆ ಆನೆಗಳು ಸಾಗಿಬರುವ ಮಾರ್ಗದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳು ಚದುರಿ ಹೋಗುವುದರಿಂದ ಸಣ್ಣ ಮತ್ತು ಮಧ್ಯಮ ರೈತರು ಕಷ್ಟಪಟ್ಟು ಬೆಳೆಸಿರುವ ಕಾಫಿ, ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳು ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ. ಇದರ ಜತೆಗೆ ಪ್ರವಾಸೋದ್ಯಮವನ್ನು ನಂಬಿರುವವರಿಗೂ ತೊಂದರೆಯಾಗಲಿದ್ದು, ಆನೆಗಳ ಹಿಂಡು ಜನವಸತಿ ಪ್ರದೇಶಗಳಿಗೆ ನುಗ್ಗಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಅಪಾಯ ದಟ್ಟವಾಗಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆಯ ಈ ಏಕಪಕ್ಷೀಯ ಹಾಗೂ ಜನವಿರೋಧಿ ನಿರ್ಣಯವನ್ನು ತೀವ್ರವಾಗಿ ಖಂಡಿಸುತ್ತಾ, ಕ್ಷೇತ್ರದ ಜನರ ಹಿತರಕ್ಷಣೆಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಇದನ್ನು ತಕ್ಷಣವೇ ಅಂಗೀಕರಿಸಬೇಕೆಂದು ನಯನಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿದ್ದು, ಸ್ಪೀಕರ್​ ಕಚೇರಿಗೆ ಸಲ್ಲಿಸಿದ್ದಾರೆ.

ಅರಣ್ಯ ಸಚಿವರು ಹೇಳಿದ್ದೇನು?

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಬೇಲೂರು ತಾಲ್ಲೂಕಿನಲ್ಲಿ 2019ರಲ್ಲಿ ಕೇವಲ 7 ಆನೆಗಳಿದ್ದು, ಈಗ ಅವುಗಳ ಸಂಖ್ಯೆ ಸುಮಾರು 55ಕ್ಕೆ ಏರಿಕೆಯಾಗಿದೆ, ಆದರೆ ಅಲ್ಲಿ ಕಾಫಿ ತೋಟಗಳ ಮಧ್ಯೆ ಚದುರಿಹೋಗಿರುವ ಕೇವಲ 13,917 ಎಕರೆ ಅರಣ್ಯ ಪ್ರದೇಶ ಮಾತ್ರ ಇರುವುದರಿಂದ ಆನೆಗಳು ನಾಡಿಗೆ ಬಂದು ಬೆಳೆ ಹಾಗೂ ಪ್ರಾಣಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆನೆಗಳನ್ನು 1.41 ಲಕ್ಷ ಎಕರೆ ವಿಸ್ತೀರ್ಣದ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದ್ದು, ಅರಣ್ಯಕ್ಕೆ ಬಿಟ್ಟ ಆನೆಗಳು ಮತ್ತೆ ನಾಡಿಗೆ ಬರದಂತೆ ಬಿಗಿ ಬಂದೋಬಸ್ತ್ ಮಾಡುವ ಭರವಸೆ ನೀಡಿದ್ದರೂ ಚಿಕ್ಕಮಗಳೂರು ಭಾಗದ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಶಾಸಕರ ಸಭೆ ಕರೆದು ಚರ್ಚಿಸಲಾಗುವುದು ಮತ್ತು ಎರಡೂ ಭಾಗದ ಜನರಿಗೆ ತೊಂದರೆಯಾಗದಂತೆ ಶಾಸಕರೇ ಸೂಕ್ತ ಪರಿಹಾರ ಸೂಚಿಸಿದರೆ ಸರ್ಕಾರ ಅದರಂತೆ ನಡೆದುಕೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ನೆಲೆ ಕಳೆದುಕೊಂಡ ಆನೆಗಳು ಏನು ಮಾಡಬೇಕು?

ಈ ರಾಜಕೀಯ ಮೇಲಾಟದ ಮಧ್ಯೆ ನಿಜಕ್ಕೂ ಅನಾಥವಾಗಿರುವುದು ಆನೆಗಳು ಎಂದರೆ ತಪ್ಪಾಗಲಾರದು. ಒಂದೆಡೆ ಹಾಸನ ಮಂದಿ ನಮಗೆ ಬೇಡ ಅಂದರೆ ಇನ್ನೊಂದೆಡೆ ಚಿಕ್ಕಮಗಳೂರಿನ ಮಂದಿ ನಮ್ಮಿಲ್ಲಿಗೆ ಬೇಡ ಅಂತಾ ಪಟ್ಟು ಹಿಡಿದಿದ್ದಾರೆ. ಹಾಗಾದರೆ, ತಮ್ಮ ನೆಲೆಯನ್ನೇ ಕಳೆದುಕೊಂಡ ಆನೆಗಳು ಎಲ್ಲಿ ಹೋಗಬೇಕು? ಶತಮಾನಗಳಿಂದ ಕಾಡಾನೆಗಳು ತಮ್ಮ ಆಹಾರ, ನೀರು ಮತ್ತು ಸಂತಾನೋತ್ಪತ್ತಿಗಾಗಿ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಸಂಚರಿಸುತ್ತಿದ್ದ ಸಾಂಪ್ರದಾಯಿಕ 'ಆನೆ ಕಾರಿಡಾರ್'ಗಳು ಇಂದು ಮನುಷ್ಯನ ದುರಾಸೆಗೆ ಬಲಿಯಾಗಿವೆ. ಕಾಫಿ ಎಸ್ಟೇಟ್‌ಗಳ ವಿಸ್ತರಣೆ, ರೆಸಾರ್ಟ್‌ಗಳು, ರಸ್ತೆಗಳು, ರೈಲ್ವೆ ಹಳಿಗಳು ಮತ್ತು ಅಕ್ರಮ ಒತ್ತುವರಿಗಳಿಂದಾಗಿ ಆನೆಗಳ ಓಡಾಟದ ದಾರಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹೀಗೆ ತಮ್ಮ ಸಹಜ ಆವಾಸಸ್ಥಾನ ಮತ್ತು ಸಂಚಾರ ಮಾರ್ಗವನ್ನು ಕಳೆದುಕೊಂಡಿರುವ ಆನೆಗಳಿಗೆ ಈಗ ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದಂತಾಗಿದೆ. ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಎದುರಾದಾಗ ಸಹಜವಾಗಿಯೇ ಅವು ತಮ್ಮ ಹಳೆಯ ದಾರಿಯನ್ನೇ ಹುಡುಕಿಕೊಂಡು ಬರುತ್ತವೆ, ಆದರೆ ಅಲ್ಲಿ ಈಗ ತೋಟಗಳು ಮತ್ತು ಜನವಸತಿ ಪ್ರದೇಶಗಳು ತಲೆಎತ್ತಿರುವುದರಿಂದ ಅನಿವಾರ್ಯವಾಗಿ ಅವು ನಾಡಿಗೆ ಲಗ್ಗೆ ಇಡುತ್ತಿವೆ. ಬದುಕಲು ಬೇರೆ ದಾರಿಯೇ ಇಲ್ಲದೆ ಅಸಹಾಯಕವಾಗಿರುವ ಈ ಮೂಕ ಪ್ರಾಣಿಗಳನ್ನು ಸ್ಥಳಾಂತರ ಎಂಬ ಹೆಸರಿನಲ್ಲಿ ಅಲೆದಾಡಿಸುತ್ತಿರುವುದು ನಿಜಕ್ಕೂ ಶೋಚನಿಯ ಸಂಗತಿಯಾಗಿದೆ. ಮಾನವನ ದುರಾಸೆ ಹೀಗೆ ಮುಂದುವರಿದರೆ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಅಪಾಯಕಾರಿ ಹಂತಕ್ಕೆ ಹೋಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಮರೆಯಬಾರದು.