ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸ್‌ನಲ್ಲಿ ಆರೋಪಿಗಳಿಗೆ ಬಿಗ್ ಶಾಕ್: ಕೃಪಾ ಆಳ್ವಾ ಸೇರಿ ಹಲವರ ಜಾಮೀನು ಅರ್ಜಿ ತಿರಸ್ಕೃತ! 
ರಾಜ್ಯ

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸಲ್ಲಿ ಆರೋಪಿಗಳಿಗೆ ಬಿಗ್ ಶಾಕ್: ಕೃಪಾ ಆಳ್ವಾ ಸೇರಿ ಹಲವರ ಜಾಮೀನು ಅರ್ಜಿ ವರ್ಜಾ, ಬಂಧನ ಭೀತಿ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಕೃಪಾ ಆಳ್ವಾ, ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ಮತ್ತು ವಿಡಿಯೋ ಪೋಸ್ಟ್​ ಮಾಡಿದವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇದೀಗ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಉಚ್ಛಾಟಿತ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರು ಬಂಧನದ ಭೀತಿಯಿಂದ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಪ್ರಕರಣದ ಗಂಭೀರತೆ ಹಾಗೂ ತನಿಖೆಯ ಹಂತವನ್ನು ಪರಿಗಣಿಸಿದ ನ್ಯಾಯಾಲಯದ ಪೀಠ, ಖಾಸಗಿ ವಾಹಿನಿ ಮುಖ್ಯಸ್ಥರಿಗೆ ನೀಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಇದೇ ವೇಳೆ, ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ ಆರೋಪಿಗಳು ಸಲ್ಲಿಸಿದ್ದ ಬೇಲ್​ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಕೋರ್ಟ್​ನ ಈ ಖಡಕ್ ಆದೇಶದಿಂದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ (CCB) ಪೊಲೀಸರಿಗೆ ಮತ್ತಷ್ಟು ಬಲ ಬಂದಂತಾಗಿದ್ದು, ಆರೋಪಿಗಳಿಗೆ ಬಂಧನದ ತೂಗುಗತ್ತಿ ಎದುರಾಗಿದೆ.

ಫೋನ್​ ಕೊಡಲು ನಕಾರ

ಇನ್ನು ಸಿಸಿಬಿ ವಿಚಾರಣೆಯಲ್ಲಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಹಲವು ಪ್ರಶ್ನೆಗಳಿಗೆ ಕೃಪಾ ಆಳ್ವಾ ಸರಿಯಾಗಿ ಉತ್ತರ ಕೊಟ್ಟಿಲ್ಲ. ಜತೆಗೆ ತಮ್ಮ ಮೊಬೈಲ್​ ಫೋನ್​ ಕೊಡುವಂತೆ ಕೇಳಿದಾಗಲೂ ಅದಕ್ಕೆ ನಕಾರ ಮಾಡಿರುವುದಾಗಿ ವರದಿಯಾಗಿದೆ. ಈಗ ಕೋರ್ಟ್​ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿರುವುದರಿಂದ ಯಾವ ಕ್ಷಣದಲ್ಲಿ ಬೇಕಾದರೂ ಅರೆಸ್ಟ್​ ಆಗುವ ಸಾಧ್ಯತೆಯಿದೆ. ಇದು ಕೇವಲ ಕೃಪಾ ಮತ್ತು ಖಾಸಗಿ ವಾಹಿನಿ ಮುಖ್ಯಸ್ಥನಿಗೆ ಮಾತ್ರವಲ್ಲ, ವಿಡಿಯೋ ಪೋಸ್ಟ್​ ಮಾಡಿದವರಿಗೂ ಈ ಭೀತಿ ಕಾಡಲಾರಂಭಿಸಿದೆ.

ಏನಿದು 'ಸ್ಟಿಂಗ್ ಆಪರೇಷನ್'​ ಕೇಸ್​?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ‘ಸ್ಟಿಂಗ್ ಆಪರೇಷನ್’ (ರಹಸ್ಯ ಕಾರ್ಯಾಚರಣೆ) ವಿಡಿಯೋ ಪ್ರಕರಣದಲ್ಲಿ, ಕಾಂಗ್ರೆಸ್‌ನಿಂದ ಉಚ್ಚಾಟಿತ ನಾಯಕಿ ಕೃಪಾ ಆಳ್ವಾ ಸೇರಿದಂತೆ 6 ಮಂದಿ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿದೆ. 2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ 2023ರಲ್ಲಿ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ, ಖಾಸಗಿ ಯೂಟ್ಯೂಬ್ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುವ ಮೂಲಕ ಸಿದ್ದರಾಮಯ್ಯ ಅವರ ತೇಜೋವಧೆಗೆ ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಪ್ರಕರಣದ ತನಿಖೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು, ಈ ವಿಡಿಯೋ ಸಂಪೂರ್ಣ ಪೂರ್ವಯೋಜಿತ, ಕಟ್ಟುಕಥೆ ಹಾಗೂ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಷಡ್ಯಂತ್ರ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು. ಈ ಷಡ್ಯಂತ್ರದ ಹಿಂದೆ ಕೃಪಾ ಆಳ್ವಾ ಅವರ ಪಾತ್ರವಿದೆ ಎಂಬ ಆರೋಪದಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಯಿತು ಮತ್ತು ಸಿಸಿಬಿ ಹಲವು ಬಾರಿ ವಿಚಾರಣೆ ನಡೆಸಿತು.

ಈ ಹಿಂದೆ ಆರೋಪಿಗಳಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿತ್ತಾದರೂ, ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಹಾಗೂ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗ ಕಾಯಂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಆರೋಪಿಗಳಿಗೆ ಬಂಧನದ ಭೀತಿ ಎದುರಾಗಿದೆ.