

ಶಿಮ್ಲಾ: ಭಾರತದಲ್ಲಿ ಕತ್ತೆಗಳನ್ನು ಸಾಮಾನ್ಯವಾಗಿ ಸರಕು ಸಾಗಣೆ ಮತ್ತು ಕೆಲವು ಕೃಷಿ ಕೆಲಸಗಳಿಗೆ ಬಳಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೀಗ, ಇದೇ ಪ್ರಾಣಿ ಹೈನುಗಾರಿಕೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಉದ್ಯಮದಲ್ಲಿ ಹೊಸ ಆದಾಯದ ಮೂಲವಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಅದರಲ್ಲೂ ಕತ್ತೆಯ ಹಾಲಿಗಂತು ಸಖತ್ ಡಿಮಾಂಡ್ ಆಗಿದೆ. ವಿದೇಶಗಳಲ್ಲಿ ಕತ್ತೆಗಳ ಹಾಲಿಗೆ ಮತ್ತು ಅವುಗಳಿಗೆ ಬೇಡಿಕೆ ಹೆಚ್ಚಿರುವುದು ಅನೇಕರಿಗೆ ಗೊತ್ತಿದೆ. ಆದರೆ, ಅದೇ ಈಗ ಭಾರತದ ಹಿಮಾಚಲ ಪ್ರದೇಶದಲ್ಲಿ ಇದೇ ಕತ್ತೆಯ ಒಂದು ಲೀಟರ್ ಹಾಲಿಗೆ ಬರೋಬ್ಬರಿ 6ರಿಂದ 7 ಸಾವಿರ ರೂ. ಬೆಲೆಯನ್ನು ಫಿಕ್ಸ್ ಮಾಡಲಾಗಿದೆ. ಈ ಗುರಿಯೊಂದಿಗೆ ಹಿಮಾಚಲ ಪ್ರದೇಶದಲ್ಲಿ ರಾಜ್ಯದ ಮೊದಲ ಕತ್ತೆ ಫಾರ್ಮ್ ಅನ್ನು ಆರಂಭಗೊಳಿಸಲಾಗಿದೆ.
ಸ್ಥಳೀಯ ರೈತರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ, ಪಶುಸಂಗೋಪನೆಯಲ್ಲಿ ಹೊಸ ಉದ್ಯಮದ ಬಾಗಿಲು ತೆರೆಯುವ ನಿರೀಕ್ಷೆಯನ್ನೂ ಈ ಯೋಜನೆ ಹುಟ್ಟುಹಾಕಿದೆ. ಹಿಮಾಚಲದ ಬಿಲಾಸ್ಪುರ ಜಿಲ್ಲೆಯಲ್ಲಿ ರಾಜ್ಯದ ಮೊದಲ ಕತ್ತೆ ಫಾರ್ಮ್ ಆರಂಭವಾಗಿದೆ. ಸಂಜೀವ್ ಸಿಂಗ್ ಠಾಕೂರ್ ಮಾಲೀಕತ್ವದ 'ಡೈರಿಕಾ ಫಾರ್ಮ್ಸ್' ಈ ಹೊಸ ಪ್ರಯತ್ನಕ್ಕೆ ಚಾಲನೆ ನೀಡಿದ್ದು, ಆರಂಭದಲ್ಲಿ 12 ಕತ್ತೆಗಳನ್ನು ಸಾಕಲಾಗುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದೆ.
ಮುಂದಿನ ದಿನಗಳಲ್ಲಿ ಕತ್ತೆಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸುವ ಯೋಜನೆಯಿದೆ. ಕತ್ತೆ ಹಾಲನ್ನು ಲೀಟರ್‌ಗೆ ಸುಮಾರು 5,000ರಿಂದ 7,000 ರೂಪಾಯಿವರೆಗೆ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ. ಕಂದೋರ್ ಗ್ರಾಮದ ಡೈರಿ ಕಾನ್‌ಕ್ಲೇವ್ 2026ರ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಸಚಿವ ರಾಜೇಶ್ ಧರ್ಮಾನಿ ಅವರು ಈ ಫಾರ್ಮ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಕತ್ತೆ ಹಾಲನ್ನು ಚರ್ಮದ ಆರೈಕೆ, ಸೌಂದರ್ಯವರ್ಧಕ ಮತ್ತು ಆರೋಗ್ಯ ಉತ್ಪನ್ನಗಳನ್ನು ತಯಾರಿಸುವ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳಿಗೆ ಪೂರೈಸುವುದು ಫಾರ್ಮ್‌ನ ಪ್ರಮುಖ ಉದ್ದೇಶ ಎಂದಿದ್ದಾರೆ.
ಈ ಉದ್ಯಮದ ಸಹ-ಸಂಸ್ಥಾಪಕಿ ಸೀರತ್ ತೂರ್ ಮಾತನಾಡಿ, ಭಾರತದಲ್ಲಿ ಕತ್ತೆಗಳ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಬಳಿಕ ಈ ವ್ಯವಹಾರದ ಆಲೋಚನೆ ಮೂಡಿತು. ಹೀಗಾಗಿ, ಹಿಮಾಚಲ ಪ್ರದೇಶದಲ್ಲಿ ಕಂಡುಬರುವ ಸ್ಪಿತಿ ತಳಿಯ ಕತ್ತೆಗಳನ್ನು ಸಾಕಲು ನಾವು ನಿರ್ಧರಿಸಿದ್ದೇವೆ. ಡೈರಿಕಾ ಫಾರ್ಮ್ಸ್ ಈಗಾಗಲೇ ಹಾಲಿನ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ.
ಕತ್ತೆ ಹಾಲಿನ ಬೆಲೆ ಸಾಮಾನ್ಯ ಹಾಲಿಗಿಂತ ಬಹಳ ಹೆಚ್ಚಾಗಿದೆ. ಒಂದು ಲೀಟರ್ ಕತ್ತೆ ಹಾಲಿಗೆ ಸುಮಾರು 5,000ರಿಂದ 7,000 ರೂಪಾಯಿ ದರವನ್ನು ಫಿಕ್ಸ್ ಮಾಡಿರುವುದು ಸದ್ಯ ಜನರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಇದು ಹಾಲಿನ ದರವಾದರೆ, ಇನ್ನು ಹಾಲಿನ ಪುಡಿಯ ಬೆಲೆ ಕೆಜಿಗೆ 20ರಿಂದ 80 ಸಾವಿರ ರೂ.ವರೆಗೆ ಇರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪುಡಿಯ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ಬದಲಾಗಲಿದೆ.
ಕತ್ತೆ ಸಾಕಾಣಿಕೆಯನ್ನು ಉದ್ಯಮವಾಗಿ ಬೆಳೆಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಜತೆಗೆ, ಸಾಂಪ್ರದಾಯಿಕ ಹೈನುಗಾರಿಕೆಗೆ ಪರ್ಯಾಯವಾಗಿ ಪಶುಸಂಗೋಪನೆಯ ಹೊಸ ಮಾದರಿಯನ್ನು ಪರಿಚಯಿಸುವ ಪ್ರಯತ್ನವೂ ಇದಾಗಿದೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಹಿಂದಿನ ಪ್ರಕಟಣೆಯ ಪ್ರಕಾರ, ಕುರಿ, ಮೇಕೆ, ಹಂದಿ, ಕುದುರೆ ಮತ್ತು ಕತ್ತೆ ಸೇರಿದಂತೆ ವಿವಿಧ ಪ್ರಾಣಿಗಳ ತಳಿ ಅಭಿವೃದ್ಧಿ ಫಾರ್ಮ್‌ಗಳನ್ನು ಸ್ಥಾಪಿಸಲು ಅರ್ಹ ಯೋಜನೆಗಳಿಗೆ ಗರಿಷ್ಠ 50 ಲಕ್ಷ ರೂ.ವರೆಗೆ ಸಬ್ಸಿಡಿ ನೀಡುವ ಅವಕಾಶವಿದೆ.
ಸಚಿವಾಲಯದ ಮಾಹಿತಿಯಂತೆ, ಈ ಯೋಜನೆಯಡಿ 3,843 ಯೋಜನೆಗಳಿಗೆ ಒಟ್ಟು 2,672.65 ಕೋಟಿ ರೂ. ಮೌಲ್ಯದ ಅನುಮೋದನೆ ದೊರೆತಿದ್ದು, 1,233.69 ಕೋಟಿ ರೂಪಾಯಿ ಸಬ್ಸಿಡಿ ಮಂಜೂರಾಗಿದೆ. ಇವುಗಳಲ್ಲಿ 2,014 ಯೋಜನೆಗಳಿಗೆ ಮೊದಲ ಹಂತದ ಸಬ್ಸಿಡಿಯಾಗಿ 354.06 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ, ಕತ್ತೆ ಸಾಕಾಣಿಕೆಯನ್ನು ಹೊಸ ಆದಾಯದ ಮೂಲವನ್ನಾಗಿ ರೂಪಿಸುವ ಹಿಮಾಚಲ ಪ್ರದೇಶದ ಈ ಪ್ರಯತ್ನ ಪಶುಸಂಗೋಪನಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುವ ನಿರೀಕ್ಷೆಯಿದೆ,(ಏಜೆನ್ಸೀಸ್).