ಈ ಕಾಡಿನ ಹಸಿರು ಬ್ಯೂಟಿಗಿಂತ ಇಲ್ಲಿನ ಸಾವುಗಳೇ ಹುಟ್ಟಿಸುತ್ತೆ ಭಯ! ಅಯೋಕಿಗಹಾರ ಅರಣ್ಯದ ಹಿಂದಿದೆ ಒಂದು ಕರಾಳ ಸ್ಟೋರಿ | Suicide Forest

 Aokigahara Forest
ಈ ಕಾಡಿನ ಹಸಿರು ಬ್ಯೂಟಿಗಿಂತ ಇಲ್ಲಿನ ಸಾವುಗಳೇ ಹುಟ್ಟಿಸುತ್ತೆ ಭಯ! ಅಯೋಕಿಗಹಾರ ಅರಣ್ಯದ ಹಿಂದಿದೆ ಒಂದು ಕರಾಳ ಸ್ಟೋರಿ | Aokigahara Forest
Published on: 

Aokigahara Forest: ಜಪಾನ್‌ನ ಪ್ರಸಿದ್ಧ ಮೌಂಟ್ ಫುಜಿಯ ಸಮೀಪದಲ್ಲಿರುವ ಅಯೋಕಿಗಹಾರ ಎಂಬ ದಟ್ಟ ಅರಣ್ಯವು ತನ್ನ ಹಚ್ಚಹಸಿರಿನ ಪ್ರಕೃತಿ ಸೌಂದರ್ಯ, ಬೃಹತ್​ ಆಕಾರದ ಮರಗಳು ಮತ್ತು ನಿಗೂಢ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತೆ ನಿಜ. ಆದರೆ, ಈ ಸುಂದರ ಕಾಡಿನ ಹಿಂದೆ ಅಡಗಿರುವ ಕರಾಳ ಇತಿಹಾಸದ ಬಗ್ಗೆ ಕೇಳಿದರೆ ಒಂದು ನಿಮಿಷ ಮೈಜುಮ್​ ಎನ್ನುವುದಂತು ಸತ್ಯ.

ಈ ಕಾಡಿನ ಬಗ್ಗೆ ಇಂದಿಗೂ ಜಗತ್ತಿನಾದ್ಯಂತ ಸಾಕಷ್ಟು ಕಥೆಗಳಿವೆ, ಚರ್ಚೆಗಳಿವೆ. ಒಂದು ಕಾಲದಲ್ಲಿ ಪವಿತ್ರ ಅರಣ್ಯವೆಂದು ಗುರುತಿಸಿಕೊಂಡಿದ್ದ ಈ ಪ್ರದೇಶ ಇಂದು ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಹೆಸರುವಾಸಿಯಾಗಿದೆ. ಪ್ರಕೃತಿಯ ಸೌಂದರ್ಯದ ನಡುವೆ ಇಂತಹ ಗಂಭೀರ ಸಾಮಾಜಿಕ ಸಮಸ್ಯೆಯೊಂದು ಹುಟ್ಟಿಕೊಂಡಿದ್ದೇಕೆ? ಅಷ್ಟಕ್ಕೂ ಇಲ್ಲಿ ಮೊದಲು ಆಗಿದ್ದೇನು? ಈಗ ಆಗಿರುವುದೇನು ಎಂಬುದರ ಕಂಪ್ಲೀಟ್​ ಸ್ಟೋರಿ ಹೀಗಿದೆ ನೋಡಿ.

ಜಪಾನ್ ಅಂದಾಕ್ಷಣ ಸುಂದರ ಪ್ರಕೃತಿ, ಮುಂದುವರಿದ ಆಧುನಿಕ ಟೆಕ್ನಾಲಜಿ ಮತ್ತು ಶಿಸ್ತುಬದ್ಧ ಜೀವನಶೈಲಿ ನೆನಪಾಗುತ್ತದೆ. ಆದರೆ, ಅದೇ ದೇಶದಲ್ಲಿರುವ ಒಂದು ಅರಣ್ಯ ಮಾತ್ರ ತನ್ನ ಸೌಂದರ್ಯಕ್ಕಿಂತಲೂ ವಿಚಿತ್ರ ಇತಿಹಾಸದಿಂದಾಗಿ ಜಗತ್ತಿನ ಗಮನ ಸೆಳೆದಿದೆ ಎಂದರೆ ನಂಬ್ತೀರಾ? ಅಸಾಧ್ಯ ಎಂದರೂ ಇದೇ ನಿಜ. ಅದುವೇ ಮೌಂಟ್ ಫುಜಿಯ ಸಮೀಪದಲ್ಲಿರುವ ಅಯೋಕಿಗಹಾರ ಅರಣ್ಯ. ಕಣ್ಣಿಗೆ ಹಚ್ಚಹಸಿರಿನಿಂದ ಕಂಗೊಳಿಸುವ ಈ ಕಾಡನ್ನು ಇಂದಿಗೂ ಜನರು 'ಸುಸೈಡ್ ಫಾರೆಸ್ಟ್' ಎಂದೇ ಕರೆಯುತ್ತಾರೆ. ಏಕೆಂದರೆ, ಈ ಹೆಸರಿನ ಹಿಂದೆ ಇರುವ ಕಾರಣವೇ ಆತಂಕಕಾರಿ.

1,000 ವರ್ಷಗಳ ಇತಿಹಾಸ

ಜಪಾನ್‌ನ ಹೊನ್ಶು ದ್ವೀಪದಲ್ಲಿ, ಪ್ರಸಿದ್ಧ ಮೌಂಟ್ ಫುಜಿಯ ಉತ್ತರ ಭಾಗದಲ್ಲಿರುವ ಅಯೋಕಿಗಹಾರ ಅರಣ್ಯ ಸುಮಾರು 14 ಚದರ ಮೈಲಿ ಪ್ರದೇಶದಲ್ಲಿ ಹರಡಿಕೊಂಡಿದೆ. ದಟ್ಟವಾದ ಮರಗಳು, ಹಚ್ಚಹಸಿರಿನ ಸಸ್ಯವರ್ಗ ಮತ್ತು ನಿಶ್ಶಬ್ದ ವಾತಾವರಣ ಈ ಕಾಡಿನ ವಿಶೇಷತೆ. ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಈ ಪ್ರದೇಶವು ಒಂದು ಕಾಲದಲ್ಲಿ ಶಿಂಟೋ ಧರ್ಮದ ಪವಿತ್ರ ಅರಣ್ಯವೆಂದು ಪರಿಗಣಿಸಲಾಗಿತ್ತು.

ಕಾಲಕ್ರಮೇಣ ಈ ಕಾಡಿನ ಬಗ್ಗೆ ಹಲವು ಕಥೆಗಳು ಮತ್ತು ನಂಬಿಕೆಗಳು ಹುಟ್ಟಿಕೊಂಡವು. ದೆವ್ವಗಳು ಹಾಗೂ ದುಷ್ಟಶಕ್ತಿಗಳ ವಾಸಸ್ಥಾನ ಎಂಬಂತಹ ಕಥೆಗಳೂ ಜನಪ್ರಿಯವಾಯಿತು. ಆದರೆ, ಅಯೋಕಿಗಹಾರಕ್ಕೆ ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ತಂದುಕೊಟ್ಟಿದ್ದು ಅದರೊಂದಿಗೆ ಬೆಸೆದುಕೊಂಡ ಸರಣಿ ಆತ್ಮಹತ್ಯೆಯ ಘಟನೆಗಳು. ಎರಡನೇ ವಿಶ್ವ ಸಮರದ ನಂತರ ಜಪಾನ್ ತೀವ್ರ ಆರ್ಥಿಕ ಸಂಕಷ್ಟ ಮತ್ತು ಸಾಮಾಜಿಕ ಬದಲಾವಣೆಗಳನ್ನು ಎದುರಿಸಿತು. ಈ ಅವಧಿಯ ಬಳಿಕ ಅಯೋಕಿಗಹಾರ ಕಾಡಿನಲ್ಲಿ ದಿಢೀರ್ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗ ತೊಡಗಿತು.

1960ರ ದಶಕದ ವೇಳೆಗೆ ಈ ಅರಣ್ಯ ತನ್ನ ಹಸಿರುಮಯ ಸೌಂದರ್ಯಕ್ಕಿಂತಲೂ ಇಂತಹ ಆತ್ಮಹತ್ಯೆ ಪ್ರಕರಣಗಳಿಂದಲೇ ಗುರುತಿಸಿಕೊಳ್ಳಲು ಆರಂಭಿಸಿತು. ವರ್ಷಗಳು ಕಳೆದಂತೆ ಈ ಪ್ರದೇಶದ ಬಗ್ಗೆ ಆತಂಕಕಾರಿ ವರದಿಗಳು ಹೆಚ್ಚಾದವು. ಹಲವು ದಶಕಗಳಲ್ಲಿ ಅರಣ್ಯದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ. ಆದರೆ, ಈ ಘಟನೆಗಳ ನಿಖರ ಸಂಖ್ಯೆಗಳ ಬಗ್ಗೆ ವಿವಿಧ ವರದಿಗಳಲ್ಲಿ ಉಲ್ಲೇಖವಿದೆ. ಆದರೆ, ಅಷ್ಟೇ ವ್ಯತ್ಯಾಸಗಳೂ ಇವೆ.

ಎಚ್ಚರಿಕೆ ಬೋರ್ಡ್​ ಮೂಲಕ ಜಾಗೃತಿ

ಈ ಕಾರಣದಿಂದಲೇ ಅಯೋಕಿಗಹಾರವು ಜಪಾನ್‌ನ ಅತ್ಯಂತ ಸೂಕ್ಷ್ಮ ಸಾಮಾಜಿಕ ಸಮಸ್ಯೆಗಳಲ್ಲಿ ಒಂದರ ಸಂಕೇತವಾಗಿ ಮಾರ್ಪಟ್ಟಿದೆ. ಅರಣ್ಯದ ಪ್ರವೇಶದ್ವಾರ ಹಾಗೂ ಪ್ರಮುಖ ಸ್ಥಳಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಅಳವಡಿಸಲಾಗಿದೆ. ನಿಮ್ಮ ಜೀವನ ಅಮೂಲ್ಯ. ದಯವಿಟ್ಟು ನಿಮ್ಮ ಕುಟುಂಬದವರ ಬಗ್ಗೆ ಮತ್ತೊಮ್ಮೆ ಯೋಚಿಸಿ ಎಂಬಂತಹ ಸಂದೇಶಗಳ ಮೂಲಕ ಸಂಕಷ್ಟದಲ್ಲಿ ಇರುವವರಿಗೆ ಬದುಕಿನ ಮಹತ್ವವನ್ನು ನೆನಪಿಸುವಂತ ಸಂದೇಶಗಳನ್ನು ಹಾಕಲಾಗಿದೆ.

ಅಯೋಕಿಗಹಾರ ಕಾಡಿನಲ್ಲಿ ಪ್ರತಿ ವರ್ಷ ಸರಿಸುಮಾರು 100 ಮಂದಿ ಆತ್ಮಹತ್ಯೆಯಿಂದ ಸಾವಿಗೀಡಾಗುತ್ತಾರೆ ಎಂದು ಅಂದಾಜಿಸಲಾಗಿದೆ. 1960ರ ದಶಕದಿಂದಲೂ ಇಂತಹ ಘಟನೆಗಳು ಇಲ್ಲಿ ವರದಿಯಾಗುತ್ತಲೇ ಇವೆ ಎಂಬುದು ಗಮನಾರ್ಹ. ಆದರೆ, ಈ ಅರಣ್ಯದ ಕುಖ್ಯಾತಿಗೆ ಇದೊಂದೇ ಕಾರಣವಲ್ಲ. ಇದರ ಹಿಂದಿರುವ ಇನ್ನೂ ಹಲವು ನಿಗೂಢ ಕಥೆಗಳು ಮತ್ತು ಐತಿಹಾಸಿಕ ನಂಬಿಕೆಗಳು ಅಯೋಕಿಗಹಾರದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿವೆ,(ಏಜೆನ್ಸೀಸ್).