ಬೆಂಗಳೂರು: ಕಳೆದ ತಿಂಗಳು ನಡೆದಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆ ಫಲಿತಾಂಶ ಇಂದು(ಫೆ.4) ಪ್ರಕಟವಾಗಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಎಂ.ಎಸ್.ರಾಮಯ್ಯ ಕುಟುಂಬದ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಯುವ ಕಾಂಗ್ರೆಸ್ ಸದಸ್ಯರ ನೋಂದಣಿ ಮತ್ತು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನ ಜಿಲ್ಲಾವಾರು ಮತದಾನ ನಡೆದಿತ್ತು. ಮತದಾನ ಸಂದರ್ಭದಲ್ಲಿ ಆ್ಯಪ್ ಹ್ಯಾಕ್ ಆಗಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಫಲಿತಾಂಶದಲ್ಲಿ ರೋಚಕ ತಿರುವು ಕಂಡು ಬಂದಿದ್ದು, ಮಹತ್ವದ ಬೆಳವಣಿಗೆಯಲ್ಲಿ ಅತಿ ಹೆಚ್ಚು ಮತ ಪಡೆದಿದ್ದ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ ಅವರನ್ನು ಅನರ್ಹಗೊಳಿಸಲಾಗಿದೆ. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ಪಡೆದ ಮತಗಳು: ಮೊಹಮದ್ ನಲಪಾಡ್- 64203. ರಕ್ಷಾ ರಾಮಯ್ಯ- 57271, ಮಂಜುನಾಥ್- 18137, ಮಿಥುನ್ ರೈ- 3104.
ಚುನಾವಣೆ ವೇಳೆ ಮುಂಚೂಣಿ ನಾಯಕರು ಯಾರೂ ಅಭ್ಯರ್ಥಿ ಪರವಾಗಿ ಕಾಣಿಸಿಕೊಳ್ಳಬಾರದೆಂದು ಪಕ್ಷ ಸೂಚನೆ ನೀಡಿತ್ತು. ಈ ನಡುವೆಯೂ ರಕ್ಷಾ ರಾಮಯ್ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿತ ಎಂದು ಬಿಂಬಿಸಿಕೊಳ್ಳುವಲ್ಲಿ ಪ್ರಯತ್ನ ಮಾಡಿದ್ದರು. ಮಿಥುನ್ ರೈ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರೆಂದೇ ಪಕ್ಷದಲ್ಲಿ ಗುರುತಿಸಲಾಗುತ್ತಿದೆ.