ನ್ಯೂಸ್

ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುತ್ತಿದ್ದವರ ಮೇಲೆ ಕಲ್ಲು ತೂರಾಟ: ಪೊಲೀಸ್​ ಬಂದೋಬಸ್ತ್

ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುತ್ತಿದ್ದ ಹಿಂದು ಕಾರ್ಯಕರ್ತರ ಮೇಲೆ 20-30 ಜನರಿದ್ದ ಗುಂಪೊಂದು ಹಲ್ಲೆ ಮಾಡಿ ಗಲಭೆ ಸೃಷ್ಟಿಸಿದ ಘಟನೆ ಬಿಸ್ಮಿಲ್ಲಾ ನಗರದಲ್ಲಿ ಶುಕ್ರವಾರ ಸಂಭವಿಸಿದ್ದು, ಬಿಸ್ಮಿಲ್ಲಾನಗರ ಮತ್ತು ಗುರಪ್ಪನಪಾಳ್ಯದಲ್ಲಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಿಧಿ ಸಮರ್ಪಣ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿದ ಕಿಡಿಗೇಡಿಗಳ ಗುಂಪೊಂದು ಪ್ರಚಾರದ ರಥಕ್ಕೂ ಹಾನಿ ಮಾಡಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದೆ. ಶೇಷಾಚಲ, ‌ಯಶವಂತ್, ಸುರೇಶ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿರಿ ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

ರಾಮಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಭಾಗವಾಗಿ ಶುಕ್ರವಾರ ಮಧ್ಯಾಹ್ನ 12ರ ಸುಮಾರಿನಲ್ಲಿ ರಾಮರಥದ ಮೆರವಣಿಗೆಯೊಂದಿಗೆ ಹಿಂದು ಕಾರ್ಯಕರ್ತರು ಬಿಸ್ಮಿಲ್ಲಾ ನಗರಕ್ಕೆ ಹೋಗಿದ್ದರು. ಆ ವೇಳೆ ಬಂದ ದುಷ್ಕರ್ಮಿಗಳ ಗುಂಪು, 'ನಿಮಗೆ ಪರ್ಮಿಷನ್ ಕೊಟ್ಟಿದ್ದು ಯಾರು? ನಿಮ್ಮನ್ನ ಯಾರು ಬರೋದಕ್ಕೆ ಹೇಳಿದ್ದು?' ಎನ್ನುತ್ತಲೇ ರಸ್ತೆಯಲ್ಲಿ ಸಿಕ್ಕ ಸಿಕ್ಕ ಕಲ್ಲುಗಳನ್ನು ಎತ್ತಿಕೊಂಡು ಕಾರ್ಯಕರ್ತರತ್ತ ಬೀಸಿದೆ. ನೋಡನೋಡುತ್ತಿದ್ದಂತೆ ಕಿಡಿಗೇಡಿಗಳು ದೊಣ್ಣೆಗಳಿಂದ ಹಲ್ಲೆ ನಡೆಸಿ, ರಥದ ಗಾಜನ್ನೂ ಪುಡಿಪುಡಿ ಮಾಡಿದ್ದಾರೆ ಎಂದು ಸುದ್ದಗುಂಟೆಪಾಳ್ಯ ಪೊಲೀಸ್​ ಠಾಣೆಯಲ್ಲಿ ಹಿಂದು ಕಾರ್ಯಕರ್ತರು ದೂರು ನೀಡಿದ್ದಾರೆ.

ಸುದ್ದಗುಂಟೆ ಪೊಲೀಸ್ ಠಾಣೆಗೆ ಆಗಮಿಸಿದ ಡಿಸಿಪಿ ಶ್ರೀನಾಥ್ ಎಂ. ಜೋಷಿ, ಆಗ್ನೇಯ ವಿಭಾಗದ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದಾರೆ. ಬಿಸ್ಮಿಲ್ಲಾ ನಗರ, ಗುರಪ್ಪನಪಾಳ್ಯದಲ್ಲಿ ಪೊಲೀಸ್​​ ಸರ್ಪಗಾವಲಿದೆ. ಸುದ್ದಗುಂಟೆ ಪೊಲೀಸ್ ಠಾಣೆ ಮುಂದೆ ನೂರಾರು ಸಂಘ ಪರಿವಾರದ ನೂರಾರು ಕಾರ್ಯಕರ್ತರು ಬೀಡುಬಿಟ್ಟಿದ್ದು, ಹಲ್ಲೆ ಮಾಡಿದವರನ್ನ ಬಂಧಿಸಬೇಕು ಎಂದು ಆಗ್ರಹಿಸುತ್ತಾ, ಪೊಲೀಸ್ ಠಾಣೆ ಮುಂದೆ 'ಜೈ ಶ್ರೀರಾಮ' ಎಂದು ಜೈಕಾರ ಹಾಕುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಠಾಣೆ ಬಳಿಗೆ ಬಂದು ಡಿಸಿಪಿ ಜತೆ ಚರ್ಚಿಸುತ್ತಿದ್ದರು. ಇದಿಷ್ಟು ಸಂಜೆ ಸಂಜೆ 4ರವರೆಗಿನ ಮಾಹಿತಿ. (ದಿಗ್ವಿಜಯ ನ್ಯೂಸ್)