ನ್ಯೂಸ್

ಶ್ರೀಹರಿ ಪ್ರಿಯಳು ಶ್ರೀ ತುಳಸಿ

ಮೇಧಾ ಪ್ರಹ್ಲಾದಾಚಾರ್ಯ ಜೋಶಿ ತುಳಸಿ ಕೇವಲ ಗಿಡವಲ್ಲ, ಶ್ರೀ ಮಹಾಲಕ್ಷ್ಮಿಯ ವಿಶೇಷ ಸನ್ನಿಧಾನೋಪೇತವಾದ ಜಗನ್ಮಾನ್ಯವಾದ ವೃಕ್ಷ. ಅದರಲ್ಲೂ ಸ್ತ್ರೀಯರ ಪಾಲಿಗೆ ವಿಶೇಷವಾಗಿ ನಿತ್ಯ ಪೂಜ್ಯಳಾದ ಕಲ್ಪವೃಕ್ಷವಾಗಿದೆ. ದೇವರ ಪೂಜೆಗೆ ಪ್ರಮುಖ ಸಾಧನ ತುಳಸಿ ಆಸ್ತಿಕ ಜಗತ್ತಿನಲ್ಲಿ ತುಳಸಿಗೆ ವಿಶಿಷ್ಟವಾದ ಸ್ಥಾನವಿದೆ. ಸಮುದ್ರಮಥನ ಕಾಲದಲ್ಲಿ ಸಾಕ್ಷಾತ್ ವಿಷ್ಣುವೇ ಧನ್ವಂತರಿ ರೂಪದಿಂದ ಅಮೃತ ಕಲಶದೊಂದಿಗೆ ಉದ್ಭವಿಸಿದ. ದೇವತೆಗಳಿಗೆಲ್ಲ ಅಮೃತಪಾನ ಮಾಡಿಸುವಾಗ ದೇವ ಧನ್ವಂತರಿಯ ಕಣ್ಣುಗಳಿಂದ ಆನಂದಭಾಷ್ಪಗಳು ಅಮೃತದ ಕಲಶದಲ್ಲಿ ಉದುರಿದವು. ಅವೆರಡರ ಸಮಾಗಮದಿಂದ ಕೃಷ್ಣ ವರ್ಣದ ತುಳಸಿ ಜನಿಸಿದಳು. ಆದ್ದರಿಂದಲೇ ವಿಷ್ಣುವಿಗೆ ಅತಿ ಪ್ರಿಯಳಾದವಳು. ಈ ವೃಕ್ಷದ ಎಲೆ, ದಲ, ಮಂಜರೀ, ಕಾಷ್ಟ ಮೃತ್ತಿಕಾ ಕೊನೆಗೆ ‘ತುಳಸೀ’ ಎಂಬ ನಾಮವು ಶ್ರೀಹರಿಗೆ ಸಮರ್ಪಿತ. ಹೀಗೆ ತನ್ನ ಸರ್ವಸ್ವವನ್ನು ದೇವರಿಗೆ ಅರ್ಪಿಸಿ, ಸದಾ ದೇವರ ಸೇವೆಯಲ್ಲಿ ನಿರತಳಾಗಿದ್ದಾಳೆ ತುಳಸಿ ತುಳಸಿಯಲ್ಲಿ ಮುಖ್ಯವಾಗಿ ಕೃಷ್ಣ ತುಳಸಿ ( ಕಪ್ಪಾದ) ಹಾಗೂ ರಾಮ ತುಳಸಿ (ಹಸಿರಾದ) ಎಂಬ ಎರಡು ಜಾತಿಗಳಿವೆ.

ಸರ್ವ ಮಾನ್ಯಳು: ಗೋಮತಿ ನದಿ ತೀರದಲ್ಲಿ ಶ್ರೀಕೃಷ್ಣ ಪರಮಾತ್ಮನು ಜಗದ ಹಿತಕ್ಕಾಗಿ ಸಂಕಲ್ಪಗೈದು ತುಳಸಿಯನ್ನು ಬೆಳೆಸಿದ್ದಾನೆ ಎಂದು ಮಹಾಭಾರತ ಹೇಳಿದೆ. ಶತ್ರುಗಳನ್ನು ಪರಾಜಯಗೊಳಿಸಿ, ಸಂಕಲ್ಪಿತ ಕಾರ್ಯ ಪೂರ್ಣಗೊಳ್ಳ ಬೇಕಾದರೆ ತುಳಸಿಯನ್ನು ನೆಡುವಂತೆ ವಶಿಷ್ಠರು ಶ್ರೀರಾಮ ನಿಗೆ ಆದೇಶಿಸಿದರು. ಅಂತಯೇ ಸರಯೂನದಿ ತೀರದಲ್ಲಿ ರಾಮಚಂದ್ರ ತುಳಸಿಯನ್ನು ಬೆಳೆಸಿದ. ಹೀಗೆ ರಾಮ-ಕೃಷ್ಣರಿಂದ ಮಾನ್ಯಳಾದವಳು ಶ್ರೀತುಳಸಿ ವನವಾಸದಲ್ಲಿದ್ದಾಗ ದಂಡ ಕಾರಣ್ಯದಲ್ಲಿ ಸೀತಾಮಾತೆಯು ನಿತ್ಯ ತುಳಸಿ ಪೂಜೆಯನ್ನು ಮಾಡುತ್ತಿದ್ದಳೆಂದು ಪುರಾಣದ ವಚನಗಳಿವೆ. ಶಿವನನ್ನು ಪಡೆಯಲು ಪಾರ್ವತಿ ದೇವಿ ಹಿಮಾಲಯದಲ್ಲಿ ತುಳಸಿಯನ್ನು ಬೆಳೆಸಿ ಪೂಜಿಸಿದ್ದಾಳೆ. ವಿವಾಹವಾಗಲು ಹಾಗೂ ವಿವಾಹವಾದವರು ಸುಖಿ ದಾಂಪತ್ಯಕ್ಕಾಗಿ ನಿತ್ಯವೂ ತುಳಸಿಯನ್ನು ಪೂಜಿಸಬೇಕೆಂದು ಪಾರ್ವತಿ ದೇವಿ ನಿರ್ದೇಶಿಸಿದ್ದಾಳೆ.

ಮಹಾಮಹಿಮಳು: ತುಲಾಂ ಸ್ಯತಿ ಇತಿ ತುಳಸೀ- ತುಲನಾ ರಹಿತಳಾದವಳು ತುಳಸಿ ಪೂಜಾ ಪ್ರಪಂಚದಲ್ಲಿ ಯಾವುದೇ ಪುಷ್ಪ ಪತ್ರಗಳಿರಲಿ, ಆಭರಣಗಳೇ ಇರಲಿ, ತುಳಸಿಗೆ ಎಂದಿಗೂ ಸರಿದೂಗುವುದಿಲ್ಲ. ಯಾವುದೇ ಧಾರ್ವಿುಕ ಕಾರ್ಯಗಳು ತುಳಸಿ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಪದ್ಮಪುರಾಣದ ಪ್ರಕಾರ ಸಾಮಾನ್ಯ ಜಲವೂ ತುಳಸಿಯೊಂದಿಗೆ ಮಿ್ರ್ರಶಿತವಾಗಿ ಸಕಲ ತೀರ್ಥಗಳ ಸನ್ನಿಧಾನವನ್ನು ಪಡೆಯುತ್ತದೆ. ತುಳಸಿ ದಳದಿಂದ ಯುಕ್ತವಾಗಿರುವ ನೀರು ಗಂಗೆಗೆ ಸಮಾನ ಎಂದು ಜ್ಞಾನಿಗಳು ತಿಳಿಸಿದ್ದಾರೆ. ವಿಷ್ಣು ಚಿಹ್ನೆಗಳನ್ನು ಧರಿಸಲು ಗೋಪಿ ಚಂದನ ಇಲ್ಲದಿರುವಾಗ ತುಳಸಿಯ ಮೃತ್ತಿಕೆಯನ್ನೇ ಬಳಸಬಹುದೆಂದು ಸ್ಮೃಗಳು ಸಾರುತ್ತವೆ. ಮೃತವ್ಯಕ್ತಿಯ ದೇಹಕ್ಕೂ ತುಳಸಿ ಸಮರ್ಪಿಸುತ್ತಾರೆ. ಕಾರಣ ಅವಳು ಸದ್ಗತಿಯನ್ನು ನೀಡುತ್ತಾಳೆ ಎಂದು ಶಾಸ್ತ್ರಗಳು ವರ್ಣಿಸಿವೆ.

ರೋಗಹರಳು ತುಳಸಿ: ಆಯುರ್ವೆದದಲ್ಲಿ ತುಳಸಿಗೆ ಬಹು ಮುಖ್ಯವಾದ ಸ್ಥಾನವಿದೆ. ಅಜೀರ್ಣ, ಅತಿಸಾರ, ಹೃದ್ರೋಗ, ಅಪಸ್ಮಾರ, ಜ್ವರ ಕೆಮ್ಮು ಮೊದಲಾದ ನೂರಾರು ರೋಗಗಳಿಗೆ ತುಳಸಿಯನ್ನು ಔಷಧವನ್ನಾಗಿ ಬಳಸಿ ರೋಗಗಳನ್ನು ಪರಿಹರಿಸಿದ್ದರ ಬಗ್ಗೆ ವೈದ್ಯರು ದಾಖಲಿಸಿದ್ದಾರೆ. ತುಳಸಿಯ ದರ್ಶನ, ಸ್ಪರ್ಶ, ನಾಮ ಸಂಕೀರ್ತನೆ, ಸೇವನೆ ಎಲ್ಲವೂ ಅತ್ಯಂತ ಪಾವನ ಎಂಬುದು ಅನುಭವ ಸಿದ್ಧ. ಅನೇಕ ಗ್ರಹ ದೋಷಗಳನ್ನು ಪರಿಹರಿಸುವ ಶಕ್ತಿ ತುಳಸಿಯಲ್ಲಿದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಉಸಿರಾಟಕ್ಕಾಗಿ ಬೇಕಾದ ಆಮ್ಲಜನಕದ ಉತ್ಪಾದನೆಯನ್ನು ತುಳಸಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತದೆ ಎಂದು ವಿಜ್ಞಾನ ತಿಳಿಸುತ್ತಿದೆ. ಈ ನಿಟ್ಟಿನಲ್ಲಿ ತುಳಸಿಯನ್ನು ಬೆಳೆಸುವುದು ಪುಣ್ಯಕರ.

ಕಾರ್ತಿಕ ಶುಕ್ಲ ದ್ವಾದಶಿಯಂದು ಆಚರಣೆ: ಭಗವಂತನ ವಿಶೇಷ ಪ್ರೀತಿ ಪಾತ್ರಳಾದ ತುಳಸಿಯ ಮಹಿಮೆಯು ಜಗತ್ತಿಗೆ ವೇದ್ಯವಾಗಬೇಕೆಂದೇ ಶ್ರೀಮಹಾಲಕ್ಷ್ಮೀದೇವಿಯು ತನ್ನ ವಿಶೇಷ ಸನ್ನಿಧಾನದಿಂದ ಕೂಡಿದ ತುಳಸಿಯನ್ನು ದೇವರು ವಿವಾಹವಾಗಬೇಕೆಂದು ಆಶಿಸಿದಳು. ಆದ್ದರಿಂದ ತುಳಸಿಗೆ ಭಗವಂತನೊಂದಿಗೆ ವಿವಾಹವಾಗುವ ಮಹಾ ಸೌಭಾಗ್ಯವನ್ನು ಅನುಗ್ರಹಿಸಿದವಳು ಮಹಾಲಕ್ಷ್ಮಿ. ಹಾಗಾಗಿಯೇ ಪ್ರತಿ ವರ್ಷ ಕಾರ್ತಿಕ ಶುಕ್ಲ ದ್ವಾದಶಿಯಂದು ತುಳಸೀ-ದಾಮೋದರ ವಿವಾಹ ಆಚರಣೆಯಲ್ಲಿ ಬಂದಿದೆ. ಅಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಮನೆಯಂಗಳದ ಬೃಂದಾವನದಲ್ಲಿ ನೆಲೆಸಿದ ತುಳಸಿ ಹಾಗೂ ದಾಮೋದರ ನಾಮಕ ಭಗವಂತನ ರೂಪದೊಂದಿಗೆ ವಿವಾಹೋತ್ಸವವನ್ನು ಮಾಡುವುದು ಆಚರಣೆಯಲ್ಲಿದೆ. ಇದನ್ನೇ ಶ್ರೀಕೃಷ್ಣನ ಪ್ರತಿಮೆಯನ್ನು ತುಳಸಿಯ ಅಭಿಮುಖವಾಗಿಟ್ಟು ಅಂತಃಪಟವನ್ನು ಹಿಡಿದು ಸೂರ್ಯಾ ಸೂಕ್ತವನ್ನು, ಮಂಗಳಾಷ್ಟಕವನ್ನು ಘಂಟಾನಾದ ಪೂರ್ವಕ ಪಠಿಸಿ, ಅಂತರಪಟವನ್ನು ಉತ್ತರ ದಿಕ್ಕಿಗೆ ಎಳೆದು ಭಗವಂತನಿಗೆ ಮಂತ್ರಾಕ್ಷತೆಯನ್ನು ಅರ್ಪಿಸಬೇಕು. ದಾಮೋದರನ ಹಸ್ತದಲ್ಲಿ ತುಳಸಿಯನ್ನು ಮುಟ್ಟಿಸಿ ಕನ್ಯಾ ದಾನದ ವಿಧಿಯನ್ನು ಪೂರೈಸಬೇಕು. ಭಗವಂತನಿಗೆ ಸಮರ್ಪಿಸಿದ ಮಾಂಗಲ್ಯವನ್ನು ತುಳಸಿಯ ಕಂಠದಲ್ಲಿ ಕಟ್ಟಬೇಕು. ಮಂಗಲ ನೀರಾಜನ ನೈವೇದ್ಯ ಇತ್ಯಾದಿಗಳನ್ನು ಸಮರ್ಪಿಸಬೇಕು.

https://www.vijayavani.net/read-vijayavani-and-win-a-car-deliver-the-coupon-to-this-address-from-nov-15-to-nov-30

https://www.vijayavani.net/id-be-staggered-if-he-doesnt-play-ex-australia-skippers-bold-remark-on-3-test-india-star-amid-border-gavaskar-trophy