ನ್ಯೂಸ್

ಆ ಚಿತ್ರಕ್ಕೆ ಶ್ರೀಲೀಲಾ ಬದಲಿಗೆ ರಾಶಿ ಖನ್ನಾ! ಕಾರಣ ಇದೇ ನೋಡಿ…

ಹೈದರಾಬಾದ್​: ಕನ್ನಡತಿ, ತೆಲುಗಿನ ಖ್ಯಾತ ನಟಿ ಶ್ರೀಲೀಲಾ ಕಳೆದ ವರ್ಷ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆಕೆಗೆ ಡೇಟ್ಸ್ ಸಿಗುವುದೇ ಕಷ್ಟ ಎಂಬ ಮಾತು ಕೂಡ ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿದೆ. ಆದರೆ ನಿತಿನ್, ವೆಂಕಿ ಕುಡುಮುಲ ಕಾಂಬಿನೇಷನ್​ನಲ್ಲಿ ತಯಾರಾಗುತ್ತಿರುವ 'ರಾಬಿನ್‌ಹುಡ್' ಚಿತ್ರದಿಂದ ಶ್ರೀಲೀಲಾ ಹೊರಬಿದ್ದಿದ್ದಾರೆ ಎಂಬ ಮಾತುಗಳು ಈಗ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿವೆ.

ತುಂಬಾ ಬ್ಯುಸಿಯಾಗಿರುವ ಶ್ರೀಲೀಲಾರನ್ನು 'ರಾಬಿನ್ ಹುಡ್' ಚಿತ್ರದಿಂದ ಕೈ ಬಿಟ್ಟಿದ್ದೇಕೆ ಎಂಬ ಕುತೂಹಲ ಮೂಡಿಸಿದೆ. ರಶ್ಮಿಕಾ ಮಂದಣ್ಣ ನಾಯಕಿ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ರಶ್ಮಿಕಾ ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿತ್ತು. ಈಗ ಕಳುಹಿಸಿರುವ ಅಧಿಕೃತ ಪ್ರಕಟಣೆಯಲ್ಲಿ ನಿತಿನ್, ವೆನ್ನೆಲ ಕಿಶೋರ್, ರಾಜೇಂದ್ರ ಪ್ರಸಾದ್ ಅವರ ಹೆಸರನ್ನು ತಾರಾಗಣವಾಗಿ ಉಲ್ಲೇಖಿಸಲಾಗಿದೆ.

ಇಷ್ಟಕ್ಕೂ ಶ್ರೀಲೀಲಾರನ್ನು 'ರಾಬಿನ್ ಹುಡ್' ಚಿತ್ರದಿಂದ ಕೈ ಬಿಡಲು ಕಾರಣವಿದೆ. 'ಎಕ್ಸ್​ಟ್ರಾ ಆರ್ಡಿನರಿ ಮ್ಯಾನ್​' ಚಿತ್ರದ ಪ್ರಚಾರ ಸಭೆಗಳಲ್ಲಿ ನಿತಿನ್ ಯಾವಾಗ ಶೂಟಿಂಗ್‌ಗೆ ಬರುತ್ತಾರೋ? ಎಷ್ಟು ಗಂಟೆಗೆ ಶೂಟ್ ಮಾಡುತ್ತಾರೋ ಮತ್ತು ಆ ನಿಗದಿತ ಗಂಟೆಗಳಲ್ಲಿ ನಾವು ಅವರೊಂದಿಗೆ ಯಾವ ದೃಶ್ಯಗಳನ್ನು ಮಾಡಬೇಕು ಎಂಬುದು ನಮಗೆ ದೊಡ್ಡ ಸವಾಲಾಗಿತ್ತು ಎಂದು ಶ್ರೀಲೀಲಾ ಹೀರೋ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ಈಗ ಶ್ರೀಲೀಲಾ ಹೆಸರು ಇಲ್ಲದಿರುವುದಕ್ಕೆ ನಿತಿನ್ ಕುರಿತು ಆಕೆ ಹೇಳಿದ ಮಾತಿನಿಂದಾಗಿ ಈ ಸಿನಿಮಾದಿಂದ ಹೊರಬಿದ್ದಾಳಾ ಅಥವಾ ಶ್ರೀಲೀಲಾ ನಟನೆಯ ಸಾಲು ಸಾಲು ಚಿತ್ರಗಳು ಸೋತ ಕಾರಣ ಬೇರೆ ನಾಯಕಿಯನ್ನು ಹಾಕಲು ನಿರ್ದೇಶಕರು ಬಯಸಿದ್ದಾರಾ ಎಂಬ ಚರ್ಚೆ ಇಂಡಸ್ಟ್ರಿಯಲ್ಲಿ ನಡೆಯುತ್ತಿದೆ.

ರಾಶಿಖನ್ನಾ :

ರಂಗ್ ದೇ' ನಂತರ ನಿತಿನ್ ಮತ್ತು ವೆಂಕಿ ಕುಡುಮುಲ ಮತ್ತೊಮ್ಮೆ 'ರಾಬಿನ್ ಹುಡ್' ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಡಿಸೆಂಬರ್ 20 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ, ಆದರೆ ನಾಯಕಿ ಇನ್ನೂ ಬಹಿರಂಗವಾಗಿಲ್ಲ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹೆಸರು ಕೇಳಿ ಬಂದು ಕಡೆಗೆ ರಾಶಿ ಖನ್ನಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.