ಚಂಡೀಗಢ: ವೇಗವಾಗಿ ಬಂದ ಮರ್ಸಿಡೀಸ್ ಕಾರು ಸೈಕಲ್ ಸವಾರರು ಹಾಗೂ ಆಫೀಸ್ ಕ್ಯಾಬ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಪಂಜಾಬ್ನ ಮೊಹಾಲಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಭಾನುವಾರ ವರದಿಯಾಗಿದ್ದು, ಮೂವರಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕಪ್ಪು ಬಣ್ಣದ ಮರ್ಸಿಡೀಸ್ ಕಾರು ಚಂಡೀಗಢ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಕಾರಿನ ನಿಯಂತ್ರಣ ಕಳೆದುಕೊಂಡು ಚಾಲಕ ಕ್ಯಾಬ್ಗೆ ಡಿಕ್ಕಿ ಹೊಡೆಯುವ ಮುನ್ನ ಸೈಕಲ್ ಸವಾರರಿಬ್ಬರಿಗೆ ಡಿಕ್ಕಿ ಹೊಡೆದನು. ಕೊನೆಗೆ ಕಾರು ಕಬ್ಬಿಣದ ಸರಪಳಿಗೆ ಹೋಗಿ ಸಿಲುಕಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.
ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕ್ಯಾಬ್ನಲ್ಲಿದ್ದವರನ್ನು ಮೊಹಾಲಿಯ ರಾಧಾ ಸೋಮಿ ಚೌಕ್ನಲ್ಲಿರುವ ಕಚೇರಿಯೊಂದರ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಮೂವರು ಮೃತಪಟ್ಟಿರುವುದಲ್ಲದೆ, ಇತರೆ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಪಾಳಿಯ ಉದ್ಯೋಗಿಗಳನ್ನು ಮನೆಗೆ ಡ್ರಾಪ್ ಮಾಡಲು ತೆರಳಿದ್ದಾಗ ಈ ಅವಗಢ ಸಂಭವಿಸಿದೆ.
ಮರ್ಸಿಡೀಸ್ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಆದರೆ, ಏರ್ ಬ್ಯಾಗ್ನಿಂದಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೊಂದು ವಾಹನದಲ್ಲಿ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)