ನ್ಯೂಸ್

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಫೈನ್ ಸ್ಪೀಡ್ ಲಿಮಿಟ್!

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್​ಪ್ರೆವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅವಘಡಗಳನ್ನು ತಗ್ಗಿಸಲು ಪೊಲೀಸ್​ ಇಲಾಖೆ ಫೈನ್ ಸ್ಪೀಡ್ ಲಿಮಿಟ್ ವಿಧಾನವನ್ನು ಅಳವಡಿಸಿಕೊಂಡಿದೆ.

ಅತಿ ವೇಗವಾಗಿ ವಾಹನ ಚಲಾಯಿಸುವವರನ್ನು ತಡೆದು ದಂಡ ವಿಧಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.

ಹೆದ್ದಾರಿಯಲ್ಲಿ ಅತಿವೇಗದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ರಸ್ತೆಯನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು ವಿಭಾಗದ ಎಡಿಜಿಪಿ ಅಲೋಕ್​ ಕುಮಾರ್​ ಪರಿಶೀಲನೆ ಮಾಡಿದ್ದರು. ಈ ವೇಳೆ ವೇಗದ ಮಿತಿಯನ್ನು ಕಮ್ಮಿ ಮಾಡುವಂತೆ ಸೂಚನೆ ನೀಡಿದ್ದರು.

ಇಷ್ಟು ದಿನ 122 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಈಗ ವೇಗದ ಮಿತಿಯನ್ನು 100 ಕಿ.ಮೀಗೆ ಇಳಿಸಿ ಆದೇಶ ಹೊರಡಿಸಲಾಗಿದೆ. ಅಪಘಾತಗಳ ಸಂಖ್ಯೆಯನ್ನು ಕಮ್ಮಿ ಮಾಡಲು ವೇಗದ ಮಿತಿ ಕಡಿಮೆ ಮಾಡಿರುವ ರಾಮನಗರ ಪೊಲೀಸರು ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಹೆಚ್ಚು ಮಾಡಿದ್ದಾರೆ.

ಈ ಬಗ್ಗೆ ಅಲೋಕ್​ ಕುಮಾರ್​ ಅವರು ಟ್ವೀಟ್ ಮಾಡಿದ್ದಾರೆ. ರಸ್ತೆಯಲ್ಲಿ ಅತಿ ಹೆಚ್ಚು ವೇಗದಲ್ಲಿ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗ್ತಿದೆ ಎಂದು ತಿಳಿಸಿದ್ದಾರೆ. ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸಿ, ದಂಡ ಉಳಿಸೋದಕ್ಕಲ್ಲ ಎಂದು ಕೋಟ್ ಮಾಡಿ ಟ್ವೀಟ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)