More

    ಕಣ್ಣಾರೆ ಕಂಡರೂ..: ಹುಷಾರು.. ಇದು ಡೀಪ್ ಫೇಕ್!

    ನಿಮ್ಮ ವಿಡಿಯೋ ಒಂದು ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ ಎಂದಿಟ್ಟುಕೊಳ್ಳಿ. ಆದರೆ ಅದು ನಿಜವಾಗಿಯೂ ನೀವು ಮಾತಾಡಿದ, ಇಲ್ಲವೇ ನೀವು ಡ್ಯಾನ್ಸ್ ಮಾಡಿದ ವಿಡಿಯೋ ಅಲ್ಲ ಎಂದಾದಲ್ಲಿ ಎದೆ ಡಬ್ ಡಬ್ ಹೊಡೆದುಕೊಳ್ಳುವುದಿಲ್ಲವೇ? ಏನಿದು ಎಂದು ಭಯ ಆವರಿಸುವುದು ಸಹಜ. ಅಂಥದ್ದೇ ಭಯಾನಕ ಆದರೆ ಅತ್ಯಾಕರ್ಷಕ ತಂತ್ರಜ್ಞಾನದ ಬಗ್ಗೆ ಈ ಲೇಖನ.

    | ಅತುಲ ದಾಮಲೆ ಬೆಂಗಳೂರು

    ಇದು ಕೃತಕ ಬುದ್ಧಿಮತ್ತೆಯ ಕಾಲ. ಹೊಸ ಜಗತ್ತಿನಲ್ಲಿ ಇಂತಹ ತಂತ್ರಜ್ಞಾನ ತಯಾರಾಗುತ್ತಿದೆ ಎಂದರೆ ಆಶ್ಚರ್ಯವಾಗದೇ ಇರಬಹುದು. ಆದರೆ ಈ ರೀತಿಯ ಟೆಕ್ನಾಲಜಿ ಚಾಟ್ ಜಿಪಿಟಿಯಂತಹ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಹುಟ್ಟುವ ಮೊದಲೇ ಸೃಷ್ಟಿಯಾಗಿತ್ತು. ಅದರ ಹೆಸರು ಡೀಪ್ ಫೇಕ್. 1990ರಲ್ಲೇ ಡೀಪ್ ಫೇಕ್ ತಂತ್ರಜ್ಞಾನದ ಬುನಾದಿ ಕಟ್ಟುವ ಕೆಲಸ ಶುರುವಾಗಿತ್ತು. ಕೃತಕ ಬುದ್ಧಿಮತ್ತೆಯ ಹೊಸ ಯುಗದಲ್ಲಿ ಇದು ಇನ್ನಷ್ಟು ವೇಗವಾಗಿ ಬೆಳೆದಿದ್ದು, ಇದರ ಅಪಾಯಕಾರಿ ಸಾಮರ್ಥ್ಯ ಜಾಗತಿಕ ನಾಯಕರಲ್ಲೂ ಭಯ ಮೂಡಿಸಿದೆ. ಎಲ್ಲಿಯವರೆಗೆ ಎಂದರೆ ಹಿಂದೆ ಬರಾಕ್ ಒಬಾಮ ಕೂಡ ಇದರ ಕಬಂಧಬಾಹುಗಳಿಗೆ ಸಿಲುಕಿದ್ದರು. ಅದೃಷ್ಟವಶಾತ್ ಈ ‘ನಕಲಿಸುವ ಕೆಲಸ’ ಮಾಡಿದ್ದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು. ಈ ತಂತ್ರಜ್ಞಾನ ಬಳಸಿ ಮಾಡಿದಂತಹ ವಿಡಿಯೋ ಹಾಗೂ ಫೋಟೊಗಳನ್ನು ಈಗಾಗಲೇ ಫೇಸ್​ಬುಕ್-ಇನ್​ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳು ಹಾಗೂ ಗೂಗಲ್ ಸಂಸ್ಥೆ ಬ್ಯಾನ್ ಮಾಡಿವೆ. ಈ ಮೂಲಕ ಡೀಪ್ ಫೇಕ್ ತಂತ್ರಜ್ಞಾನಕ್ಕೆ ದೊಡ್ಡ ಲಗಾಮನ್ನೇ ಹಾಕಲಾಗಿದೆ. ಆದರೂ ಇದರ ಬಳಕೆ ಮಾತ್ರ ಕಳ್ಳದಾರಿಗಳ ಮೂಲಕ ಇನ್ನೂ ನಡೆಯುತ್ತಲೇ ಇದೆ.

    ಆಗದಿರುವುದೂ ಆದಂತೆ…

    ಈ ರೂಪಾಂತರಿ ತಂತ್ರಜ್ಞಾನ ಕೇವಲ ವಿಡಿಯೋ ಮತ್ತು ಫೋಟೊಗಳನ್ನು ಮಾತ್ರ ನಕಲು ಮಾಡುವುದಲ್ಲ. ಇದು ಮನುಷ್ಯರ ಧ್ವನಿಯನ್ನೂ ನಕಲು ಮಾಡುತ್ತದೆ. ಅಂದರೆ ಯಾರ ಕೈಯಿಂದಲೂ ಡೀಪ್ ಫೇಕ್ ಬಳಸಿ ಹೇಳದೇ ಇದ್ದದ್ದನ್ನೂ ಹೇಳಿಸಬಹುದು, ಮಾಡದೇ ಇದ್ದದ್ದನ್ನೂ ಮಾಡಿಸಬಹುದು! ಈ ಮೂಲಕ ಯಶ್ ಜತೆಗೋ, ಸುದೀಪ್ ಜತೆಗೋ ಇರುವಂತೆ ಫೋಟೊಗಳನ್ನೂ ಸೃಷ್ಟಿಸಬಹುದು. ಈ ಮೂಲಕ ಆಗದೇ ಇರುವ ಘಟನೆಗಳನ್ನೇ ಸೃಷ್ಟಿಸಿ ಬಿಡಬಹುದು.

    ಹೀಗಿದೆ ಕಾರ್ಯವೈಖರಿ…

    ಡೀಪ್ ಫೇಕ್ ಬಳಿ ಮನುಷ್ಯರಿಗೆ ಇದ್ದಂತೆಯೇ ಪ್ಯಾಟರ್ನ್ ರೆಕಗ್ನಿಷನ್ ಮಾಡುವ ಸಾಮರ್ಥ್ಯ ಇರುತ್ತದೆ. ಇದು ಕಂಪ್ಯೂಟರ್​ನ ನ್ಯೂರಾನ್ ನೆಟ್​ವರ್ಕ್ ಮೂಲಕ ಕೆಲಸ ಮಾಡುತ್ತದೆ. ಈ ನೆಟ್​ವರ್ಕ್​ಗಳು ಅಗಾಧ ಪ್ರಮಾಣದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತವೆ. ಒಬ್ಬ ವ್ಯಕ್ತಿಯ ಮುಖದ ಚಲನೆ ಹೇಗಿದೆ, ತುಟಿಗಳನ್ನು ಯಾವ ರೀತಿ ಮಡಚುತ್ತಾನೆ, ಗಲ್ಲದಲ್ಲಿ ಗುಳಿ ಯಾವಾಗೆಲ್ಲ ಬೀಳುತ್ತದೆ, ನಕ್ಕಾಗ ಹೇಗೆ ಕಾಣಿಸಿಕೊಳ್ಳುತ್ತಾನೆ, ಅಳುವಾಗ ಮುಖ ಹೇಗಾಗುತ್ತದೆ.. ಹೀಗೆ ನಾನಾ ರೀತಿಯ ಮಾಹಿತಿಯನ್ನು ಅದು ಕಲೆ ಹಾಕುತ್ತದೆ. ಇದು ಫೋಟೋ ಅಥವಾ ವಿಡಿಯೋಗೆ ಆಯಿತು. ಇದೇ ರೀತಿ ಧ್ವನಿಯದ್ದೂ ಪ್ಯಾಟರ್ನ್ ರೆಕಗ್ನಿಷನ್ ಮಾಡಿ ವ್ಯಕ್ತಿ ಯಾವ ಪಿಚ್​ನಲ್ಲಿ ಮಾತನಾಡುತ್ತಾನೆ ಎಂಬುದರಿಂದ ಹಿಡಿದು ಹೇಗೆಲ್ಲ ಏರಿಳಿತ ಮಾಡಿ ಮಾತನಾಡುತ್ತಾನೆ ಎಂಬುದನ್ನೂ ತಿಳಿದುಕೊಳ್ಳುತ್ತದೆ. ಯಾವ ರೀತಿಯ ವಿಡಿಯೋ ಬೇಕು ಎಂಬುದನ್ನು ನಿರ್ವತೃ ನಿರ್ಧರಿಸುತ್ತಾನೆ. ನಕಲಿ ವಿಡಿಯೋ ಸೃಷ್ಟಿಕರ್ತನ ಬೇಡಿಕೆ ಹಾಗೂ ತನ್ನಲ್ಲಿದ್ದ ಮಾಹಿತಿಯನ್ನು ಆಧರಿಸಿ ಈ ಕೃತಕ ಬುದ್ಧಿಮತ್ತೆ ಕೆಲವೇ ಕ್ಷಣಗಳಲ್ಲಿ ವಿಡಿಯೋವನ್ನು ನಿರ್ವಿುಸುತ್ತದೆ. ವ್ಯಕ್ತಿ ವಿಡಿಯೋದಲ್ಲಿ ಏನನ್ನು ಹೇಳಬೇಕೋ ಅದನ್ನು ಬರೆದು ಕೊಟ್ಟರೂ ಸಾಕು! ಈ ತಂತ್ರಜ್ಞಾನ ಅದನ್ನು ನೈಜ ಎನಿಸುವ ಧ್ವನಿ ರೂಪಕ್ಕೆ ಬದಲಾಯಿಸಿ ಬಿಡುತ್ತದೆ. ಕೊನೆಗೆ ಆಡಿಯೋ ಹಾಗೂ ವಿಡಿಯೋ ಸೇರಿ ಒಂದು ನಕಲಿ ಭಾಷಣ ಅಥವಾ ಡೈಲಾಗ್ ತಯಾರಾಗುತ್ತದೆ. ವ್ಯಕ್ತಿಯೊಬ್ಬರ ಭವಿಷ್ಯ ಬದಲಾಯಿಸಲು ಇಷ್ಟೇ ಸಾಕು!

    ಡೀಪ್ ಫೇಕ್ ಲೈವ್ ಆದರೆ!

    ಹೌದು.. ಈ ಸಾಧ್ಯತೆಯನ್ನೂ ಅನ್ವೇಷಿಸಿ ಆಗಿದೆ. ಇದರ ಕಾರ್ಯವಿಧಾನ ಸ್ವಲ್ಪ ಬೇರೆ ರೀತಿ ಇರುತ್ತದೆ. ಆದರೆ ಇದನ್ನು ಸ್ಕೈಪ್, ಗೂಗಲ್ ಮೀಟ್ ಅಥವಾ ವಿಡಿಯೋ ಕಾಲ್​ಗಳಲ್ಲಿ ಬಳಸಬಹುದು. ವಿಡಿಯೋ ಕಾಲ್​ನಲ್ಲಿ ನೀವೇ ಭಾಗವಹಿಸಬೇಕಿದ್ದು, ನಿಮ್ಮ ಮುಖ ಹಾಗೂ ಧ್ವನಿಯ ಬದಲಾಗಿ ಮತ್ತಿನ್ಯಾರದ್ದೋ ಇರಲಿದೆ. ಇನ್ನು ಚಾಟ್ ಜಿಪಿಟಿಯಂತಹ ಚಾಟ್ ಬಾಟ್​ಅನ್ನು ನಕಲಿ ಧ್ವನಿಯೊಂದಿಗೆ ಸೇರಿಸಿದರೆ ನಕಲಿ ಸಂಭಾಷಣೆಗಳನ್ನೂ ಸೃಷ್ಟಿಸಬಹುದು!

    ಈಗಾಗಲೇ ಬಳಕೆಯಲ್ಲಿದೆ

    ಅಂದಹಾಗೆ ಈ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಡೀಪ್​ಟ್ರೇಸ್ ಎನ್ನುವ ಸರ್ವೆ ಪ್ರಕಾರ 2018ರಲ್ಲಿ 15 ಸಾವಿರ ಡೀಪ್ ಫೇಕ್ ವಿಡಿಯೋಗಳಿದ್ದವು. ಅದು 2020ರಲ್ಲಿ 10 ಲಕ್ಷಕ್ಕೆ ಏರಿತ್ತು. 2023ರಲ್ಲಿ ತಂತ್ರಜ್ಞಾನ ಎಷ್ಟು ಅಭಿವೃದ್ಧಿ ಹೊಂದಿದೆ ಎಂದರೆ ಮನುಷ್ಯನ ಕಣ್ಣಿಗೆ ತಿಳಿಯದಷ್ಟು ನೈಜ ವಿಡಿಯೋಗಳು ಸೃಷ್ಟಿಯಾಗಿವೆ.

    ಜಾಹೀರಾತಲ್ಲೂ ಡೀಪ್ ಫೇಕ್!

    ಪ್ರತಿಷ್ಠಿತ ಫುಡ್ ಡೆಲಿವರಿ ಕಂಪನಿಯೊಂದು 2022ರ ಡಿಸೆಂಬರ್​ನಲ್ಲಿ ನಟ ಹೃತಿಕ್ ರೋಷನ್ ಜತೆ ಜಾಹೀರಾತನ್ನು ಸೃಷ್ಟಿಸಿತ್ತು. ಇದರಲ್ಲಿ ಡೀಪ್ ಫೇಕ್ ತಂತ್ರಜ್ಞಾನ ಬಳಸಲಾಗಿತ್ತು. ನಟ ಹೃತಿಕ್ ರೋಷನ್​ನ ಒಂದೇ ಒಂದು ವಿಡಿಯೋ ಶೂಟ್ ಮಾಡಿಸಿದ್ದರೆ, ಕಂಪನಿಯವರು ಅದರಿಂದ ಸಾವಿರಾರು ವಿಡಿಯೋಗಳನ್ನು ಸೃಷ್ಟಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಈ ಕಂಪನಿ ಜಾಹೀರಾತು ನೋಡುವವರ ಲೊಕೇಷನ್ ಆಧರಿಸಿ ಹೃತಿಕ್ ರೋಷನ್ ಬಾಯಲ್ಲಿ ಆಸುಪಾಸಿನ ಹೋಟೆಲಿನ ಹೆಸರನ್ನು ಹಾಗೂ ಅಲ್ಲಿನ ಸ್ಪೆಷಲ್ ತಿನಿಸನ್ನು ಹೇಳಿಸಿತ್ತು. ಅಂದರೆ ಲಕ್ಷಾಂತರ ಹೋಟೆಲುಗಳ ಹಾಗೂ ತಿನಿಸುಗಳ ಹೆಸರನ್ನು ಹೃತಿಕ್ ರೋಷನ್ ಹೇಳಿದಂತಾಗಿತ್ತು. ಇದರಲ್ಲಿ ಹೃತಿಕ್ ರೋಷನ್​ರ ಹಾವಭಾವಗಳನ್ನೂ ಬದಲಾಯಿಸಲಾಗಿತ್ತು. ಈ ಕಂಪನಿ ಹೀಗೆ ಮಾಡಲು ಹೃತಿಕ್​ಗೆ ಮೂವತ್ತು ನಿಮಿಷಗಳ ಕಾಲದ ಸ್ಕ್ರಿಪ್ಟ್ ಒಂದನ್ನು ಓದಲು ನೀಡಿದ್ದರು. ಈ ಸಂದರ್ಭ ಅವರ ಮಾತನಾಡುವ ರೀತಿ ಹಾಗೂ ಹಾವಭಾವಗಳನ್ನು ರೆಕಾರ್ಡ್ ಮಾಡಲಾಗಿತ್ತು. ಕೇವಲ 30 ನಿಮಿಷಗಳಲ್ಲಿ ದಾಖಲಿಸಿಕೊಂಡ ಮಾಹಿತಿಯ ಆಧಾರದ ಮೇಲೆ ಜಾಹೀರಾತಿನ ಸಾವಿರಾರು ಆವೃತ್ತಿಗಳನ್ನು ಸೃಷ್ಟಿಸಲಾಗಿತ್ತು. ಆದರೆ ಇದರಿಂದಾಗಿ ದೇವಸ್ಥಾನದ ಹೆಸರನ್ನು ಒಂದು ನಾನ್​ವೆಜ್ ಹೋಟೆಲು ಇಟ್ಟುಕೊಂಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಆಗ ಆ ಪ್ರತಿಷ್ಠಿತ ಸಂಸ್ಥೆ ಕೇವಲ ಆ ಒಂದು ವಿಡಿಯೋ ಮಾತ್ರ ತೆಗೆದು ಹಾಕಿ ವಿವಾದಕ್ಕೆ ತೆರೆ ಎಳೆದಿತ್ತು.

    ಬೆಂಕಿಯಿಂದಲೇ ಬೆಂಕಿ ನಂದಿಸುವ ತಂತ್ರ!

    ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಯಾರಿಸಲಾಗುತ್ತಿರುವ ವಿಡಿಯೋಗಳ ಡೇಟಾ ಬೇಸ್ ಗೂಗಲ್ ತಯಾರಿಸುತ್ತಿದೆ. ಇದನ್ನು ಬಳಸಿ ಯಾವೆಲ್ಲ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಯಬಹುದು. ಆ ಮೂಲಕ ಭವಿಷ್ಯದಲ್ಲಿ ಆಗಬಹುದಾದ ಬದಲಾವಣೆಗಳಿಗೆ ಈಗಲೇ ಸಜ್ಜಾಗುತ್ತಿದೆ. ಈಗಾಗಲೇ ಗೂಗಲ್ ಸಂಸ್ಥೆ ಯೂಟ್ಯೂಬ್​ನಿಂದ ಸಾವಿರಕ್ಕೂ ಅಧಿಕ ಇಂಥ ವಿಡಿಯೋಗಳನ್ನು ತೆಗೆದು ಹಾಕಿದೆ. ಮುಂಬರುವ ದಿನಗಳಲ್ಲಿ ಅದು ಆಟೊಮ್ಯಾಟಿಕ್ ಆಗಿ ಡೀಪ್ ಫೇಕ್ ವಿಡಿಯೋಗಳನ್ನು ಡಿಟೆಕ್ಟ್ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.

    ಕಂಡುಹಿಡಿಯುವುದು ಹೇಗೆ?

    ಡೀಪ್ ಫೇಕ್ ತಂತ್ರಜ್ಞಾನ ಬೆಳೆದಂತೆಲ್ಲ ಪ್ರತಿಕ್ರಿಯೆಯಾಗಿ ಅವುಗಳನ್ನು ತಡೆಗಟ್ಟುವ ಟೆಕ್ನಾಲಜಿಯೂ ಬೆಳೆಯುತ್ತಲೇ ಇದೆ. ವಿಡಿಯೋದಲ್ಲಿ ತೀರಾ ಸೂಕ್ಷ್ಮವಾಗಿ ಬರಿಗಣ್ಣಿಗೆ ಕಾಣದ ಹೃದಯಬಡಿತದ ತರಂಗಗಳನ್ನು ಗ್ರಹಿಸುವುದು, ಹೃದಯಬಡಿತದೊಂದಿಗೆ ಬದಲಾಗುವ ಚರ್ಮದ ಬಣ್ಣವನ್ನು ಟ್ರಾ್ಯಕ್ ಮಾಡುವ ಮೂಲಕ ಕಂಡುಹಿಡಿಯಲಾಗುತ್ತದೆ. ಇದೆಲ್ಲದಕ್ಕೂ ಕೃತಕ ಬುದ್ಧಿಮತ್ತೆಗಳಿವೆ. ನಾನಾ ವಿಶ್ವವಿದ್ಯಾಲಯಗಳು ಡೀಪ್ ಫೇಕ್ ತಂತ್ರಜ್ಞಾನದ ದುರ್ಬಳಕೆ ತಡೆಗಟ್ಟುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಲೇ ಇವೆ.

    ಅಡ್ಡಪರಿಣಾಮಗಳೇನು?

    ಡೀಪ್ ಫೇಕ್ ತಂತ್ರಜ್ಞಾನ ದುರ್ಜನರ ಕೈಗೆ ಸಿಕ್ಕಿದರೆ ಯುದ್ಧಗಳೇ ನಡೆದು ಹೋಗುವ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಪ್ರಬಲ ದೇಶದ ನಾಯಕನ ಬಾಯಿಂದ ಯುದ್ಧದ ಘೋಷಣೆ ಮಾಡಿಸಿದರೂ ಸಾಕು. ಒಮ್ಮೆಗಂತೂ ಕೋಲಾಹಲ ಸೃಷ್ಟಿ ಆಗಿ ಬಿಡುವುದು ಖಚಿತ. ಡೀಪ್ ಫೇಕ್ ವಿಡಿಯೋಗಳ ದುರ್ಬಳಕೆ ಮೊದಲು ಕಂಡುಬಂದದ್ದು ನೀಲಿಚಿತ್ರಗಳಲ್ಲಿ! ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಅಂಟಿಸಿ ಹೆಸರು ಕೆಡಿಸುವ ಯತ್ನಗಳೆಲ್ಲ ನಡೆದಿದ್ದವು. ಇದು ಜನರನ್ನು ಬ್ಲಾಕ್​ವೆುೕಲ್ ಮಾಡುವ, ಶೋಷಿಸುವ, ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಸಾಮಾಜಿಕ ಹಾಗೂ ಆರ್ಥಿಕ ಹಾನಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಒಬ್ಬ ವ್ಯಕ್ತಿಯು ನಕಲಿ ವಿಡಿಯೋವನ್ನು ಡೀಪ್ ಫೇಕ್ ಎಂದು ಸಾಬೀತು ಮಾಡುವುದರ ಒಳಗಾಗಿ ಅವರ ಜೀವನದಲ್ಲಿ ಆಗಬಾರದ್ದೆಲ್ಲ ಆಗಿಹೋಗಿರುತ್ತದೆ. ಹೋದ ಮಾನ ಏನೇ ಮಾಡಿದರೂ ಮರಳಿ ಪಡೆಯುವುದು ಬಹಳ ಕಠಿಣ. ಈ ಡೀಪ್ ಫೇಕ್ ತಂತ್ರಜ್ಞಾನ ವೈಯಕ್ತಿಕ ಹಾಗೂ ಸಾಮಾಜಿಕ ಸ್ತರದಲ್ಲಿ ಬಹಳಷ್ಟು ಹಾನಿ ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

    ನಾವೇನು ಮಾಡಬಹುದು?

    ಡೀಪ್ ಫೇಕ್ ತಂತ್ರಜ್ಞಾನವನ್ನು ಬಳಸುವ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇರುವ ನಮ್ಮ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ, ಸೋಷಿಯಲ್ ಮೀಡಿಯಾದ ಖಾತೆಗಳನ್ನು ಪ್ರೖೆವೇಟ್ ಆಗಿ ಇಟ್ಟುಕೊಂಡರೆ ಒಳ್ಳೆಯದು. ನಿಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಹಂಚಿಕೊಳ್ಳದಿರಿ. ಯಾರಾದರೂ ನಿಮ್ಮ ಮುಖ ಬಳಸಿ ನಕಲಿ ವಿಡಿಯೋ ಸೃಷ್ಟಿಸಿದ್ದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ. ಭಾರತದಲ್ಲಿ ಡೀಪ್ ಫೇಕ್ ವಿರುದ್ಧ ನಿರ್ದಿಷ್ಟ ಕಾನೂನು ಇಲ್ಲದಿದ್ದರೂ ವೈಯಕ್ತಿಕ ಮಾಹಿತಿಯ ರಕ್ಷಣೆಗೆ ಸಂಬಂಧಪಟ್ಟ ಕಾಯ್ದೆಗಳ ಅಡಿಯಲ್ಲಿ ರಕ್ಷಣೆ ಸಿಗುತ್ತದೆ.

    ಎಂಬಿಎ ಪದವೀಧರ, ಅಕೌಂಟ್​ನಲ್ಲಿ 20 ಲಕ್ಷ, ಆದ್ರೂ 150 ರೂ. ದಿನಗೂಲಿ ಕೆಲಸ: ಕೊನೆಗೂ ಸಿಕ್ಕಿಬಿದ್ದ ಕೊಲೆಗಾರ ಪ್ರಿಯಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts