ನ್ಯೂಸ್

ಕೆಂಪು ಬೆಡಗಿ ಕಾರುಬಾರು

Webdesk - Manjunatha B

ಕರ್ನಾಟಕದ ಸಣ್ಣ ಗ್ರಾಮದಿಂದ ಹಿಡಿದು ದೂರದ ಅಮೆರಿಕ, ರಷ್ಯಾದವರೆಗೂ ಬ್ಯಾಡಗಿ ಮೆಣಸಿನಕಾಯಿ ಘಾಟಿನ ಪರಿಮಳ ಹಬ್ಬಿದೆ. ಹಾವೇರಿ ಜಿಲ್ಲೆಯ ಪ್ರಮುಖ ತಾಲೂಕಾಗಿರುವ ಬ್ಯಾಡಗಿಯು ಮೆಣಸಿನಕಾಯಿ ಮಾರುಕಟ್ಟೆಯಿಂದ ಜಾಗತಿಕ ನಕ್ಷೆಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿಯೇ ಹೌದು. ವಿದೇಶಿಗರ ನಾಲಿಗೆಯಲ್ಲಿ ‘ಬ್ಯಾಡಗಿ ಚಿಲ್ಲಿ’ ಎಂದೇ ಖ್ಯಾತಿ. ಅಷ್ಟೇ ಅಲ್ಲ, ಭಾರತದ ಮಸಾಲೆ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿರುವ ಬ್ಯಾಡಗಿ ಮೆಣಸಿನಕಾಯಿ 2011ರಲ್ಲೇ ಜಿಐ ಟ್ಯಾಗ್ ಪಡೆದುಕೊಂಡಿದೆ.

ಗಾಢ ಕೆಂಪು ಬಣ್ಣ, ಸ್ವಲ್ಪ ಖಾರ, ಸಕತ್ ರುಚಿಯ ಕಾರಣ ಬ್ಯಾಡಗಿ ಮೆಣಸಿನಕಾಯಿಯೆಂಬ ಕೆಂಪು ಬೆಡಗಿಗೆ ಎಲ್ಲಿಲ್ಲದ ಬೇಡಿಕೆ. ಪ್ರಸಿದ್ಧ ಮಸಾಲೆ ಪದಾರ್ಥ ತಯಾರಿಕೆ ಕಂಪನಿಗಳಿಗೆ ಬ್ಯಾಡಗಿ ಮಾರುಕಟ್ಟೆಯಿಂದಲೇ ಮೆಣಸಿನಕಾಯಿ ಪೂರೈಕೆಯಾಗುತ್ತಿದೆ. ಹಲವು ಪ್ರಸಿದ್ಧ ಆಹಾರ ಮತ್ತು ಮಸಾಲೆ ತಯಾರಕ ಕಂಪನಿಗಳು ತಮ್ಮ ಪ್ರಕಟಣೆ ಅಥವಾ ಜಾಹೀರಾತಿನಲ್ಲಿ ‘ನಾವು ನಮ್ಮ ಉತ್ಪನ್ನಗಳಲ್ಲಿ ಬ್ಯಾಡಗಿ ಮೆಣಸಿನಕಾಯಿಯನ್ನು ಬಳಸುತ್ತೇವೆ’ ಎಂದು ಸ್ಪಷ್ಟವಾಗಿ ನಮೂದಿಸುತ್ತವೆ ಎಂದರೆ ಇದರ ಖ್ಯಾತಿಯ ಎತ್ತರವನ್ನು ಅಂದಾಜಿಸಬಹುದು. 2023-24ರಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ 3,178 ಕೋಟಿ ರೂ. ವಹಿವಾಟು ನಡೆಸಿ, ದಾಖಲೆ ನಿರ್ವಿುಸಿದೆ.

ಎಲ್ಲೆಲ್ಲಿ ಬೆಳೆಯುತ್ತಾರೆ?: ಏಲಕ್ಕಿ ವಾಣಿಜ್ಯ ಬೆಳೆಗೂ ಹೆಸರುವಾಸಿಯಾಗಿರುವ ಹಾವೇರಿ ಜಿಲ್ಲೆ ಅರೆ ಮಲೆನಾಡು ಪ್ರದೇಶ. ಈ ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟಿಹಳ್ಳಿ ಭಾಗಗಳಲ್ಲಿ, ಧಾರವಾಡ ಜಿಲ್ಲೆಯ ಕುಂದಗೋಳ, ಸಂಶಿ, ಗುಡಗೇರಿ ಅಲ್ಲದೆ ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಭಾಗಗಳಲ್ಲಿ ಬ್ಯಾಡಗಿ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ 80 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ.

ವೈಶಿಷ್ಟ್ಯಗಳು: ಶೇಂಗಾ ಚಟ್ನಿ, ಉಪ್ಪಿನಕಾಯಿ, ಹಪ್ಪಳದಿಂದ ಹಿಡಿದು ಆಧುನಿಕ ತಿಂಡಿಗಳಾದ ಪಿಜ್ಜಾ, ಬರ್ಗರ್​ಗಳ ತಯಾರಿಕೆಯಲ್ಲೂ ವಿವಿಧ ರೂಪದಲ್ಲಿ ಬಳಕೆಯಾಗುತ್ತಿದೆ. ಈ ಮೆಣಸಿನಕಾಯಿಯನ್ನು ಅಥವಾ ಖಾರದ ಪುಡಿಯನ್ನು ದೀರ್ಘಕಾಲದವರೆಗೆ ಇರಿಸಿದರೂ ಬಣ್ಣಗೆಡುವುದಿಲ್ಲ. ರುಚಿ ಕಳೆದುಕೊಳ್ಳುವುದಿಲ್ಲ. ಖಾರದ ಪುಡಿ ತಯಾರಿಕೆಗೆ ಮಾತ್ರವಲ್ಲ ಆಹಾರ ಮತ್ತು ಔಷಧ ಉದ್ಯಮದಲ್ಲೂ ಪ್ರಮುಖವಾಗಿ ಬಳಕೆಯಾಗುತ್ತಿದೆ. ಉಗುರುಬಣ್ಣ (ನೇಲ್ ಪಾಲಿಶ್) ಮತ್ತು ತುಟಿಬಣ್ಣ (ಲಿಪ್​ಸ್ಟಿಕ್) ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಮಸಾಲೆ ಬೆಳೆಯಾಗಿ ಗುರುತಿಸಿಕೊಂಡಿರುವ ಬ್ಯಾಡಗಿ ಮೆಣಸಿನಕಾಯಿ ದೇಶದ ರಫ್ತು ಉದ್ಯಮದಲ್ಲೂ ಗಮನಾರ್ಹ ಸ್ಥಾನವನ್ನು ಪಡೆದುಕೊಂಡಿದೆ. ನೇರಿಗೆಯುಕ್ತ ಕಾಯಿಯಲ್ಲಿ ಅಡಕವಾಗಿರುವ ‘ಓಲಿಯೊರೈಸಿನ್’ ಎಣ್ಣೆ ಕೂಡ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೊಂದಿದೆ. ಅಂಚೆ ಇಲಾಖೆ 2021ರಲ್ಲಿ ಹೊರತಂದಿರುವ ಲಕೋಟೆಯಲ್ಲಿ ‘ಬ್ಯಾಡಗಿ ಮೆಣಸಿನಕಾಯಿ’ ವಿಜೃಂಭಿಸುತ್ತಿದೆ. ಬ್ಯಾಡಗಿಯ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿಗೆ ವಿಶಿಷ್ಟ ಸ್ಥಾನವಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಎರಡೂ ತಳಿಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಆಫ್​ಲೈನ್ ಮಾತ್ರವಲ್ಲದೆ ಆನ್​ಲೈನ್ ಮಾರುಕಟ್ಟೆಯಲ್ಲೂ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡಿದೆ. ಬ್ಯಾಡಗಿ ಮೆಣಸಿನಕಾಯಿ ರುಚಿಗೆ ಸರಿಸಾಟಿಯೇ ಇಲ್ಲ. ಹೀಗಾಗಿ ಒಮ್ಮೆ ಇದನ್ನು ಬಳಸಲು ಆರಂಭಿಸಿದವರು, ಮತ್ತೊಂದು ತಳಿ/ಬ್ರಾ್ಯಂಡ್​ಗೆ ವರ್ಗಗೊಳ್ಳುವುದಿಲ್ಲ. ಹೀಗೆ, ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುತ್ತಿರುವ ಈ ಬೆಳೆ, ಸ್ಥಳೀಯ ಮಾರುಕಟ್ಟೆಯ ವಿರಾಟ ಶಕ್ತಿಯನ್ನೂ ದರ್ಶಿಸಿದೆ. ಆದ್ದರಿಂದ, ಬೆಳೆಗಾರರು, ವ್ಯಾಪಾರಸ್ಥರು, ಗ್ರಾಹಕರು ಎಲ್ಲರೂ ಈ ‘ಕೆಂಪು ಬೆಡಗಿ’ಯ ಅಭಿಮಾನಿಗಳೇ. ಮೂಲ ತಳಿಯ ಸಂವರ್ಧನೆಗೆ ಪ್ರಯತ್ನಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಬೀಜ ಬ್ಯಾಂಕ್ ಸ್ಥಾಪನೆ ನಿಟ್ಟಿನಲ್ಲಿ ಕೂಡ ಚಿಂತನೆ ನಡೆದಿದೆ.

ರೈತರ ಪಾಲಿಗೆ ಕೆಂಪು ಬಂಗಾರ: ಬ್ಯಾಡಗಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ಪ್ರಕ್ರಿಯೆ ಅಳವಡಿಸಲಾಗಿದೆ. ಹೀಗಾಗಿ, ಉತ್ಪನ್ನ ಮಾರಾಟವಾದ ದಿನವೇ ರೈತರ ಕೈಗೆ ಹಣ ಸೇರುತ್ತದೆ. ಬ್ಯಾಡಗಿ ಪಟ್ಟಣವೊಂದರಲ್ಲೇ 30ಕ್ಕೂ ಹೆಚ್ಚು ಶೈತ್ಯಾಗಾರಗಳಿವೆ. ಮೆಣಸಿನಕಾಯಿಯ ಬಣ್ಣ ಹಾಗೂ ಗುಣಮಟ್ಟ ರಕ್ಷಿಸಲು ಇದರಿಂದ ಸಹಾಯವಾಗಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ 2024ರಲ್ಲಿ ಗರಿಷ್ಠವಾಗಿ ಒಂದೇ ದಿನದಲ್ಲಿ 4.09 ಲಕ್ಷ ಚೀಲ (1,02,830 ಕ್ವಿಂಟಲ್) ಮೆಣಸಿನಕಾಯಿ ಆವಕವಾಗಿದ್ದು ದಾಖಲೆ. ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯು 78 ಎಕರೆಯ ವಿಶಾಲ ಪ್ರಾಂಗಣ ಹೊಂದಿದ್ದು, ಪ್ರತಿದಿನ ಸರಾಸರಿ 50 ಸಾವಿರ ವ್ಯಾಪಾರಸ್ಥರು, ಗ್ರಾಹಕರು ಜಮಾಯಿಸುತ್ತಾರೆ. ಈ ಸಂಖ್ಯೆ ಬ್ಯಾಡಗಿಯ ಜನಸಂಖ್ಯೆಗಿಂತಲೂ ಅಧಿಕ. ಬ್ಯಾಡಗಿ ಮೆಣಸಿನ ಗಿಡಗಳನ್ನು ನೆಟ್ಟು 60- 80 ದಿನಗಳ ಒಳಗೆ ಹೂವು ಬಿಡುತ್ತವೆ. ಸಾಮಾನ್ಯವಾಗಿ ಜನವರಿಯಲ್ಲಿ ನೆಟ್ಟರೆ ಮೇ ತಿಂಗಳಲ್ಲಿ ಕೊಯಿಲು ಆಗುತ್ತದೆ.

ಎಲ್ಲೆಲ್ಲಿ ರಫ್ತು?: ಬ್ಯಾಡಗಿ ಮೆಣಸಿನಕಾಯಿ ಅಮೆರಿಕ, ರಷ್ಯಾ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತಾಗುತ್ತಿದೆ.