ನ್ಯೂಸ್

ಶಿಫ್ಟ್‌ ಮುಗಿದಿದ್ದರಿಂದ ಅರ್ಧದಲ್ಲಿಯೇ ವಿಮಾನ ಪ್ರಯಾಣ ಮುಗಿಸಿದ ಪೈಲಟ್‌! ಮುಂದೇನಾಯ್ತು ನೋಡಿ...

ಇಸ್ಲಾಮಾಬಾದ್‌: ಶಿಫ್ಟ್‌ ಮುಗಿದಿದ್ದರಿಂದ ವಿಮಾನವನ್ನು ಹಾರಿಸದೇ ಪೈಲಟ್‌ ಒಬ್ಬ ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಪೈಲಟ್‌ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಹವಾಮಾನ ವೈಪರಿತ್ಯದಿಂದಾಗಿ ಪಿಕೆ-9754 ವಿಮಾನವು ರಿಯಾದ್‌ನಿಂದ ಹೊರಟು ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿದ್ದ ವಿಮಾನವು ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು, ಹವಾಮಾನವು ಸರಿಯಾದ ಮೇಲೆ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ದಿನದ ತನ್ನ ಶಿಫ್ಟ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ವಿಮಾನ ಹಾರಿಸುವುದಿಲ್ಲ ಎಂದು ಪೈಲಟ್‌ ಹೇಳಿರುವುದರಿಂದ ಭಾರಿ ಕೋಲಾಹಲವೇ ಉಂಟಾಯಿತು.

ಪೈಲಟ್‌ನ ಈ ಕ್ರಮದಿಂದಾಗಿ ಪ್ರಯಾಣಿಕರು ಕೆಳಕ್ಕೆ ಇಳಿಯದೇ ಅಲ್ಲಿಯೇ ಪ್ರತಿಭಟನೆ ಶುರು ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಆದರೆ ಏನೇ ಮಾಡಿದರೂ ಪೈಲಟ್‌ ಮುಂದುವರೆಯಲು ಇಷ್ಟಪಡಲಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

ವಿಮಾನದ ಸುರಕ್ಷತೆಗಾಗಿ ಪೈಲಟ್‌ ವಿಶ್ರಾಂತಿ ಪಡೆಯಬೇಕು. ಎಲ್ಲಾ ಪ್ರಯಾಣಿಕರು ಇಸ್ಲಾಮಾಬಾದ್‌ಗೆ ವಿಮಾನ ಪ್ರಯಾಣದಲ್ಲಿ ರಾತ್ರಿ 11 ಗಂಟೆಗೆ ತಲುಪುತ್ತಾರೆ. ಅಲ್ಲಿಯವರೆಗೂ ಹೋಟೆಲ್‌ಗಳಲ್ಲಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಏರ್‌ಲೈನ್ಸ್‌ ಪ್ರಯಾಣಿಕರಿಗೆ ಸಮಜಾಯಿಷಿ ನೀಡಿತು. ಪೈಲಟ್‌ಗೆ ಸಮಸ್ಯೆಯಾಗಿರಬಹುದು ಎಂದು ಊಹಿಸಿದ ಪ್ರಯಾಣಿಕರು ತಮ್ಮ ಪ್ರತಿಭಟನೆಯನ್ನು ಅಲ್ಲಿಗೇ ನಿಲ್ಲಿಸಿ ಅಂತೂ ಹೋಟೆಲ್‌ನತ್ತ ಧಾವಿಸಿದರು.