Pooja Hegde: ಕರಾವಳಿ ಬೆಡಗಿ, ಸೌತ್ ಬ್ಯೂಟಿ ಪೂಜಾ ಹೆಗ್ಡೆ ತಮ್ಮ ನಟನೆ, ಕುಣಿತ, ನೋಟದಿಂದಲೇ ಅಪಾರ ಸಿನಿಪ್ರೇಕ್ಷಕರ ಮನಗೆದ್ದವರು. ಇದರಲ್ಲಿ ಅನುಮಾನವೇ ಇಲ್ಲ. ಆದರೆ, ನಟಿಯ ಸಿನಿ ವೃತ್ತಿಯಲ್ಲಿ ಕಳೆದ ವರ್ಷ ಅತಿ ದೊಡ್ಡ ಸೋಲು ಎದುರಾಗಿದ್ದು ಬೇಸರದ ಸಂಗತಿ. ಪೂಜಾ ಅಭಿನಯದ ಒಂದೇ ಒಂದು ಚಿತ್ರವು ಕೂಡ 2024ರಲ್ಲಿ ತೆರೆ ಕಾಣಲಿಲ್ಲ. ಇದಕ್ಕೆ ಕಾರಣ ಅವರ ನಿರ್ಧಾರಗಳು ಎಂದರೆ ಖಂಡಿತ ತಪ್ಪಾಗಲಾರದು.
2024ರಲ್ಲಿ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದಲ್ಲಿ ನಟಿಸಲು ಪಡೆದುಕೊಂಡಿದ್ದ ಅವಕಾಶವನ್ನು ಸಂಭಾವನೆಯ ವಿಷಯದಿಂದ ಕಳೆದುಕೊಂಡ ಸೌತ್ ಬ್ಯೂಟಿ, ತದನಂತರ ಹಲವು ಅವಕಾಶಗಳನ್ನು ಸರಣಿಯಾಗಿ ಮಿಸ್ ಮಾಡಿಕೊಂಡಿದ್ದು ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿತು. ಒಂದೆಡೆ ಅವಕಾಶಗಳು ಎಷ್ಟು ಪ್ರಭಾವ ಬೀರಿತೋ ಅದಕ್ಕೆ ತಕ್ಕಂತೆ ಸ್ಟಾರ್ ನಟರೊಂದಿಗೆ ಪೂಜಾ ನಟಿಸಿದ ಸಿನಿಮಾಗಳ ಸೋಲು ಸಹ ದೊಡ್ಡ ಹೊಡೆತ ನೀಡಿತು.
'ರಾಧೆ ಶ್ಯಾಮ್', 'ಆಚಾರ್ಯ', 'ಬೀಸ್ಟ್', 'ಕಿಸಿ ಕಾ ಬಾಯ್ ಕಿಸಿ ಕೀ' ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿದ್ದು, ನಟಿಯ ಅವಕಾಶಗಳಿಗೆ ದೊಡ್ಡ ಅಡ್ಡಗಲ್ಲಾಯಿತು. ಕಳೆದ ವರ್ಷ ಒಂದು ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳದೆ ಪ್ರೇಕ್ಷಕರಿಂದ ಮರೆಯಾಗಿದ್ದ ಪೂಜಾ ಹೆಗ್ಡೆ ಇದೀಗ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಮತ್ತೊಮ್ಮೆ ಗಿಟ್ಟಿಸಿಕೊಂಡಿರುವುದು ವಿಶೇಷ. ಒಂದಲ್ಲ, ಎರಡಲ್ಲ, ಹಲವು ಪ್ರಾಜೆಕ್ಟ್ಗಳು ಈಗ ಪೂಜಾ ಕೈಸೇರಿವೆ ಎಂಬುದು ಅವರ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ತಂದಿದೆ.
ಬಾಲಿವುಡ್ ನಟ ಶಾಹಿದ್ ಕಪೂರ್ ಜತೆಗೆ ಕಾಣಿಸಿಕೊಂಡಿರುವ 'ದೇವ' ಸಿನಿಮಾ 2025ರ ಜನವರಿಯಲ್ಲಿ ರಿಲೀಸ್ ಆಗಲಿರುವ ಮೊದಲ ಚಿತ್ರ. ಈ ಆ್ಯಕ್ಷನ್-ಥ್ರಿಲ್ಲರ್ ಚಿತ್ರವನ್ನು ಮಲಯಾಳಂ ನಿರ್ದೇಶಕ ರೋಷನ್ ಆ್ಯಂಡ್ಯ್ಯೂಸ್ ನಿರ್ದೇಶಿಸಿದ್ದಾರೆ. ಇದಾದ ನಂತರ ತಮಿಳು ನಟ ಸೂರ್ಯ ಅಭಿನಯದ ರೆಟ್ರೋ ಥೀಮ್ ಆಧರಿತ ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಾಕ್ಸ್ ಆಫೀಸ್ನಲ್ಲಿ ತನ್ನ ಸಿಂಪಲ್ ನಟನೆಯಿಂದಲೇ ಹಣ ದೋಚುತ್ತಿರುವ 'ಲಕ್ಕಿ ಬಾಸ್ಕರ್' ಖ್ಯಾತಿಯ ದುಲ್ಕರ್ ಸಲ್ಮಾನ್ ಜತೆಗೆ ನಟಿಸಲು ಪೂಜಾ ಒಪ್ಪಿಕೊಂಡಿದ್ದಾರೆ.
ಇದರೊಟ್ಟಿಗೆ ದಳಪತಿ ವಿಜಯ್ ಅಭಿನಯದ ಕಡೆಯ ಸಿನಿಮಾ 'ದಳಪತಿ 69' ಚಿತ್ರಕ್ಕೆ ಪೂಜಾ ನಾಯಕಿಯಾಗಿರುವುದು ಬಹುತೇಕರಿಗೆ ಗೊತ್ತಿರುವ ಸಂಗತಿ. ಸದ್ಯ ಇಷ್ಟು ಬಿಗ್ ಪ್ರಾಜೆಕ್ಟ್ಗಳು ಸೌತ್ ಬ್ಯೂಟಿ ಕೈಸೇರಿದ್ದು, ಹೊಸದಾಗಿ ಬಾಲಿವುಡ್ ನಟ ವರುಣ್ ಧವನ್ ಅಭಿನಯಿಸಲಿರುವ ಸಿನಿಮಾ ಮತ್ತು 'ಕಾಂಚನ-4' ಚಿತ್ರಗಳಿಗೆ ನಟಿ ಸಹಿ ಹಾಕಿರುವುದು ಅವರ ಬೇಡಿಕೆಯನ್ನು ಈಗ ದುಪ್ಪಟ್ಟು ಮಾಡಿದೆ,(ಏಜೆನ್ಸೀಸ್).