ನ್ಯೂಸ್

ಬಾಲಿವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸೋಲುಂಡ​ ದಕ್ಷಿಣ ಭಾರತದ ಸ್ಟಾರ್​ ನಟರು ಇವರೇ ನೋಡಿ

ಬೆಂಗಳೂರು: ದಕ್ಷಿಣ ಭಾರತದ ಚಿತ್ರನಟರ ಪೈಕಿ ಅದೆಷ್ಟೋ ಜನಪ್ರಿಯ ಹೀರೋಗಳು ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟು ತಮ್ಮ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಗೆಲುವು ಸಾಧಿಸಿದರೂ ತದನಂತರ ಅದೇ ಭರವಸೆ ಇಟ್ಟುಕೊಂಡು ಮಾಡಿದ ಚಿತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಾಗ ಸತತ ಸೋಲನ್ನು ಕಂಡಿದ್ದು ಮಾತ್ರ ಮರೆಯಲಾಗದ ಸಂಗತಿ. ಆಯಾ ನಟರ ಸಿನಿಮಾಗಳ ಗೆಲುವು-ಸೋಲುಗಳ ಬಗ್ಗೆ ಫ್ಯಾನ್ಸ್​ಗಳಿಗೆ ಪಕ್ಕ ಮಾಹಿತಿ ಇರುತ್ತದೆ. ಹಾಗಾದ್ರೆ ಯಾವ ಸೌತ್ ಸೂಪರ್​ಸ್ಟಾರ್​ಗಳು ಬಾಲಿವುಡ್​ ಅಂಗಳದಲ್ಲಿ ಸತತ ಫ್ಲಾಪ್ ಕಂಡರು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಸೌತ್​ ನಟರಲ್ಲಿ ಪ್ರಮುಖ ಸ್ಟಾರ್​ಗಳಾದ ಡಾರ್ಲಿಂಗ್​ ಪ್ರಭಾಸ್​, ದುಲ್ಕರ್ ಸಲ್ಮಾನ್, ರಾಮ್ ಚರಣ್, ವಿಕ್ರಮ್, ಪೃಥ್ವಿರಾಜ್ ಸುಕುಮಾರನ್, ವಿಜಯ್ ದೇವರಕೊಂಡ, ಮಮ್ಮುಟ್ಟಿ ಸೇರಿದಂತೆ ಕೆಲವರು ಬಾಲಿವುಡ್​ ಅಂಗಳದಲ್ಲಿ ಹೀನಾಯ ಸೋಲನ್ನು ಕಂಡಿದ್ದಾರೆ. ಅಷ್ಟಕ್ಕೂ ಈ ಸೂಪರ್​ಸ್ಟಾರ್​ಗಳ ಯಾವ ಸಿನಿಮಾಗಳು ಫ್ಲಾಪ್ ಆಗಿವೆ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಪ್ರಭಾಸ್

'ಬಾಹುಬಲಿ' ಮೂಲಕ ಬಾಲಿವುಡ್​ನಲ್ಲಿ ಮೊದಲಿಗೆ ಅಬ್ಬರಿಸಿದ ಪ್ರಭಾಸ್​, ತದನಂತರ ಮಾಡಿದ ‘ಸಾಹೋ’, ‘ರಾಧೆ ಶ್ಯಾಮ್’, ‘ಆದಿಪುರುಷ’ ಚಿತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿದರು. ಈ ಚಿತ್ರಗಳು ಒಂದಕ್ಕಿಂತ ಒಂದು ದೊಡ್ಡ ಸೋಲನ್ನೇ ಅನುಭವಿಸಿತು. ಇದು ಡಾರ್ಲಿಂಗ್ ನಟನ ಅಭಿಮಾನಿಗಳಿಗೆ ಭಾರೀ ಬೇಸರವನ್ನು ತಂದೊಡ್ಡಿತು.

ರಾಮ್​ಚರಣ್

ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್​ಚರಣ್ ಅಭಿನಯದ ಬ್ಲಾಕ್​ಬಸ್ಟರ್​ ‘ಆರ್​ಆರ್​ಆರ್​’ ಚಿತ್ರಕ್ಕೂ ಮುನ್ನ ಬಾಲಿವುಡ್​ನಲ್ಲಿ ಬಿಡುಗಡೆಯಾದ ‘ಜಂಜೀರ್’ ರೀಮೇಕ್ ​ಚಿತ್ರ ಹೀನಾಯ ಸೋಲನ್ನು ಅನುಭವಿಸಿತು.

ವಿಕ್ರಮ್

ರಾಷ್ಟ್ರೀಯ ಪ್ರಶಸ್ತಿ ಪಡೆದ ನಟ ವಿಕ್ರಮ್​ ಅಭಿನಯದ ‘ರಾವನ್​’ ಸಿನಿಮಾ ಹಿಂದಿಯಲ್ಲಿ ಬಿಡುಗಡೆಗೊಂಡು ಫ್ಲಾಪ್ ಕಂಡಿತು, ಅದರ ಬೆನ್ನಲ್ಲೇ ರಿಲೀಸ್ ಆದ ‘ಡೇವಿಡ್’​ ಚಿತ್ರ ಕೂಡ ಅಬ್ಬರಿಸುವಲ್ಲಿ ವಿಫಲವಾಯಿತು. ಈ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿದ್ದು, ವಿಕ್ರಮ್ ಫ್ಯಾನ್ಸ್​ಗೆ ತೀವ್ರ ಬೇಸರ ತಂದಿತ್ತು.

ಪೃಥ್ವಿರಾಜ್ ಸುಕುಮಾರನ್

ರಾಣಿ ಮುಖರ್ಜಿ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ‘ಅಯ್ಯಾ’ ಚಿತ್ರದ ಮೂಲಕ ಸೋಲು ಕಂಡಿದ್ದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.

ದುಲ್ಕರ್ ಸಲ್ಮಾನ್

ಸದ್ಯ ಮಲಯಾಳಂ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ದುಲ್ಕರ್ ಸಲ್ಮಾನ್, 'ಸೀತಾರಾಮಂ', 'ಲಕ್ಕಿ ಭಾಸ್ಕರ್​'ನಂತಹ ಚಿತ್ರಗಳಿಂದಲೇ ಸಿನಿಪ್ರಿಯರ ಮನೆಗೆದ್ದಿದ್ದಾರೆ. ಅಂದು ಬಾಲಿವುಡ್​ ಅಂಗಳದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ದುಲ್ಕರ್​, ತಮ್ಮ ಅಭಿನಯದಲ್ಲಿ ಮೂಡಿಬಂದ ‘ಖಾರ್ವಾನ್’, ‘ದ ಜೋಯೋ ಫ್ಯಾಕ್ಟರ್’, ‘ಚುಪ್’ ಹಿಂದಿ ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಕಂಡರು.

ವಿಜಯ್ ದೇವರಕೊಂಡ

‘ಅರ್ಜುನ್ ರೆಡ್ಡಿ’ ಮೂಲಕ ಭರ್ಜರಿ ಯಶಸ್ಸು ಕಂಡ ಟಾಲಿವುಡ್​ ನಟ ವಿಜಯ್, ‘ಲೈಗರ್’ ಚಿತ್ರದ ಮುಖೇನ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಆದ್ರೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಲು ಮುಗ್ಗರಿಸಿದ ಈ ಚಿತ್ರ ಹಿಟ್​ ಆಗುವಲ್ಲಿ ವಿಫಲವಾಯಿತು. ಅಂದು ವಿಜಯ್​ಗೆ ಇದು ದೊಡ್ಡ ಹೊಡೆತವೇ ನೀಡಿತು.

ಮಮ್ಮುಟ್ಟಿ

ಮಲಯಾಳಂನ ಸೂಪರ್​ಸ್ಟಾರ್, ದಿಗ್ಗಜ ನಟ​ ಮುಮ್ಮುಟ್ಟಿ ಅಭಿನಯದ ‘ಥ್ರಿಯಾತ್ರಿ’, ‘ದರ್ತಿಪುತ್ರ’ ಮತ್ತು ‘ಸೌ ಜೂತ್’ ಸಿನಿಮಾಗಳು ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಹೀನಾಯ ಸೋಲನ್ನೇ ಅನುಭವಿಸಿತು,(ಏಜೆನ್ಸೀಸ್).