ನ್ಯೂಸ್

ಶಾಲೆ ತೆರೆಯಲು ಶುರುವಾಗಿದೆ ಸಿದ್ಧತೆ; ಏನೆಲ್ಲ ನಿಯಮ ಪಾಲನೆಯಾಗಬೇಕು ಎಂದು ಹೇಳಿದ ಶಿಕ್ಷಣ ಇಲಾಖೆ

ಬೆಂಗಳೂರು: ಶಾಲೆಗಳನ್ನು ತೆರೆಯುವ ಬಗ್ಗೆ ಸಚಿವರು ಮತ್ತು ಶಾಸಕರಿಂದ ಸಲಹೆ ಸಂಗ್ರಹಿಸುವ ಮೊದಲೇ ಶಿಕ್ಷಣ ಇಲಾಖೆಯು ಶಾಲೆ ತೆರೆಯುವಾಗ ಅನುಸರಿಸಬೇಕಾದ ಪ್ರಾಮಾಣಿತ ಕಾರ್ಯಚರಣಾ ವಿಧಾನ(ಎಸ್‌ಒಪಿ) ಸಿದ್ಧಪಡಿಸಿದೆ.

ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ)ಯು ಎಸ್‌ಒಪಿಯನ್ನು ರಚಿಸಿ ಅನುಮತಿಗಾಗಿ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಶಾಲೆ ಆರಂಭಿಸಿದಾಗ ವಿದ್ಯಾರ್ಥಿಗಳು, ಶಿಕ್ಷಕರು ಅನುಸರಿಬೇಕಾದ ಸಂಪೂರ್ಣ ನಿಯಮಗಳನ್ನು ವಿವರಿಸಲಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಆರಂಭಿಸುವುದು ಅನಿಶ್ಚಿತತೆಯಿಂದ ಕೂಡಿರುವುದರಿಂದ ಒಂದು ವೇಳೆ ಕೇಂದ್ರ ಸರ್ಕಾರ ಎಸ್‌ಒಪಿ ಬಿಡುಗಡೆ ಮಾಡಿ ಶಾಲೆ ಆರಂಭಿಸಿ ಎಂದು ಹೇಳಿದರೆ, ಶಿಕ್ಷಣ ಇಲಾಖೆಯು ಆ ವೇಳೆಗೆ ಸಿದ್ಧರಾಗಿರಬೇಕೆಂದು ಎಸ್‌ಒಪಿ ರೂಪಿಸಿದೆ. ಇದನ್ನೂ ಓದಿ: ಕರೊನಾ ಬುಲೆಟಿನ್​​: ರಾಜ್ಯದಲ್ಲಿ ಕಳೆದೆರಡು ದಿನಗಳಿಗಿಂತ ಕಡಿಮೆ ಸೋಂಕು, ಕಡಿಮೆ ಸಾವು..

ಈ ಪ್ರಸ್ತಾವನೆಯಲ್ಲಿ ಶಾಲೆಗಳು ಯಾವಾಗಿನಿಂದ ಆರಂಭವಾಗುತ್ತವೆ ಎಂಬ ಮಾಹಿತಿ ನೀಡಿಲ್ಲ. ಆದರೆ, ಆರಂಭವಾದಾಗ ಪಾಲಿಸಬೇಕಾದ ಸೂಚನೆಗಳನ್ನು ನೀಡಿದೆ. ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಮತ್ತು ಪ್ರತ್ಯೇಕ ವಾಟರ್ ಬಾಟಲಿ ತೆಗೆದುಕೊಂಡು ಬರಬೇಕು. ಇದರ ಜತೆಗೆ ವಿದ್ಯಾರ್ಥಿಗಳು ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಶಿಕ್ಷಕರು ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಬಗ್ಗೆ ಗಮನವಹಿಸಬೇಕು. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ಸಹ ಮಾಸ್ಕ್, ಸಾಧ್ಯವಾದಲ್ಲಿ ಗ್ಲೌಸ್ ಧರಿಸಿ ಶಾಲೆಗೆ ಬರಬೇಕು. ವಿದ್ಯಾರ್ಥಿಗಳು ಸ್ನೇಹಿತರ ಜತೆಗೆ ಬೆರೆಯುವಾಗ ಕೂಡ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎಂಬುದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಈ ಎಸ್​ಒಪಿ ಒಳಗೊಂಡಿದೆ.  ಇದನ್ನೂ ಓದಿ: ಭಾರತ-ಡೆನ್ಮಾರ್ಕ್​ ವರ್ಚ್ಯುವಲ್​ ಸಭೆ; ಚೀನಾಕ್ಕೆ ಮಾತಿನ ಮೂಲಕವೇ ತಿವಿದ ಪ್ರಧಾನಿ ಮೋದಿ;

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇತ್ತೀಚಿಗೆ ಶಿಕ್ಷಣಾಧಿಕಾರಿಗಳ ಜತೆಗೆ ನಡೆಸಿ ಸಭೆಯಲ್ಲಿ ಎಸ್‌ಒಪಿ ರಚಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಎಸ್‌ಇಆರ್‌ಟಿ ಕರಡು ಎಸ್‌ಒಪಿಯನ್ನು ರೂಪಿಸಿದೆ. ಈ ಎಸ್‌ಒಪಿಯನ್ನು ಎಲ್ಲ ಸಚಿವರು ಮತ್ತು ಶಾಸಕರಿಗೆ ಕಳುಹಿಸಿ ಇದರ ಅಧಾರದ ಮೇಲೆ ನಿಮ್ಮ ಅಭಿಪ್ರಾಯವನ್ನು ಎರಡು ದಿನಗಳಲ್ಲಿ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಸೆ.25ರಂದು ಪತ್ರ ಬರೆದಿದ್ದು, ಡೆಡ್‌ಲೈನ್ ಮುಗಿದಿದ್ದರೂ ಬಹುತೇಕ ಶಾಸಕರು ಮತ್ತು ಸಚಿವರು ತಮ್ಮ ಅಭಿಪ್ರಾಯವನ್ನು ಕಳುಹಿಸಿಲ್ಲ. ಶಿಕ್ಷಣ ಸಚಿವರು ಒಮ್ಮೆ ಎಲ್ಲರ ಅಭಿಪ್ರಾಯ ಸಂಗ್ರಹವಾದ ಮೇಲೆ ಅದನ್ನು ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲು ನಿರ್ಧರಿಸಿದ್ದಾರೆ.