ನಾಗಪಟ್ಟಣ: ತಮಿಳುನಾಡಿನ ನಾಗಪಟ್ಟಣದಲ್ಲಿ ಈಚೆಗೆ ಕಾತುಮೂಲೈ ಬಳಿಯ ಕೆರೆಯಲ್ಲಿ ಅರ್ಧಂಬರ್ಧ ಸುಟ್ಟ ಶವವೊಂದು ಬಿದ್ದುಕೊಂಡಿತ್ತು. ಅದನ್ನು ನೋಡಿದ ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ವಿಷಯ ಮುಟ್ಟಿಸಿದರು.
ಈ ಬಗ್ಗೆ ತೀವ್ರ ತನಿಖೆ ಕೈಗೊಂಡ ಪೊಲೀಸರು ಆ ಶವದ ಹಿಂದಿನ ರಹಸ್ಯ ಬೆನ್ನಟ್ಟಿ ಹೋದಾಗ ತಿರುಪುಗಲೂರು ಗ್ರಾಮದಲ್ಲಿ ಜಯಸುಧಾ ಎಂಬುವವರ ಕುಟುಂಬದಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಬಗ್ಗೆ ತಿಳಿದು ಬಂತು. ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ ಅವರ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿರುವ ವಿಷಯ ತಿಳಿಯಿತು.
ಮೊದಮೊದಲು ಆ ಮನೆಯವರು ಏನೊಂದು ಹೇಳಲು ನಿರಾಕರಿಸಿದರು. ನಂತರ ವಿಚಾರಣೆ ತೀವ್ರಗೊಳಿಸಿದಾಗ, ಅವರ ಮನೆಯ ಯಜಮಾನ ತಮಿಳುವನನ್ (55) ಕಾಣೆಯಾಗಿರುವುದು ತಿಳಿಯಿತು. ಮೂವರು ಗಂಡು ಮಕ್ಕಳು, ಓರ್ವ ಪುತ್ರಿ ಹಾಗೂ ಪತ್ನಿಯನ್ನು ಆ ಮೃತ ಹೊಂದಿರುವ ಬಗ್ಗೆ ಪೊಲೀಸರಿಗೆ ವಿಷಯ ತಿಳಿಯಿತು.
ನಂತರ ಆ ಮನೆಯಿಂದ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದ ಕಾರಣ, ಪೊಲೀಸರಿಗೆ ಗುಮಾನಿ ಶುರುವಾಯಿತು. ನಂತರ ಎಲ್ಲರನ್ನೂ ಬಂಧಿಸಿದಾಗ, ಅವರಿಂದ ಕೊಲೆಯ ಮಾಹಿತಿ ಕೇಳಿದ ಪೊಲೀಸರಿಗೇ ಶಾಕ್ ಆಗಿ ಹೋಯಿತು.
ಏಕೆಂದರೆ ಆ ವ್ಯಕ್ತಿಯನ್ನು ಕೊಂದದ್ದು ಮೂವರು ಗಂಡುಮಕ್ಕಳು ಮತ್ತು ಪತ್ನಿ! ಮಕ್ಕಳು ಕೊಲೆ ಮಾಡುವುದಕ್ಕೆ ಕಾರಣ, ಆತ, ಅಮ್ಮನನ್ನು ಆತ ಹಿಂಸಿಸುತ್ತಿದ್ದ ರೀತಿ. ನಂತರ ಸತ್ಯ ಬಿಚ್ಚಿಟ್ಟ ಮಕ್ಕಳು, ತಂದೆ ತಾಯಿಯನ್ನು ಪದೇ ಪದೇ ಹಿಂಸಿಸುತ್ತಿದ್ದ, ಹೊಡೆಯುತ್ತಿದ್ದ. ತಂದೆಯಿಂದ ಪ್ರತಿ ಬಾರಿ ತಾಯಿಯನ್ನು ನಾವೇ ರಕ್ಷಿಸುತ್ತಿದ್ದೆವು.
ಕುಡಿದು ಬಂದು ಕುಡುಗೋಲು ಬಳಸಿ ಕೂಡ ಮಾರಣಾಂತಿಕವಾಗಿ ಹೊಡೆಯುತ್ತಿದ್ದ. ಅಮ್ಮನಿಗೆ ಅಪ್ಪ ನೀಡುತ್ತಿದ್ದ ಹಿಂಸೆಯನ್ನು ನೋಡಲಾಗದೇ ಕೊಲೆ ಮಾಡಿ ಸುಟ್ಟಿರುವುದಾಗಿ ಮಕ್ಕಳು ಒಪ್ಪಿಕೊಂಡಿದ್ದಾರೆ. ನಂತರ ಈ ಕೊಲೆ ಮಾಡಲು ಪತ್ನಿಯ ಬೆಂಬಲವೂ ಇರುವ ವಿಷಯ ಪೊಲೀಸರಿಗೆ ತಿಳಿದಿದೆ.
ಬೇರೊಂದು ಊರಿನಲ್ಲಿಯೇ ನೆಲೆಸಿದ್ದ ತಮಿಳುವನನ್, ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ. ಮೊದಲೇ ಕುಡಿತದ ದಾಸನಾಗಿದ್ದ ಆತ ಲಾಕ್ಡೌನ್ ವೇಳೆ ಅದ್ಹೇಗೋ ಸಹಿಸಿಕೊಂಡಿದ್ದ. ಬಾರ್ ತೆರೆಯುತ್ತಿದ್ದಂತೆಯೇ ಕಂಠಪೂರ್ತಿ ಕುಡಿದು ಬಂದು ಹೆಂಡತಿಯನ್ನು ಥಳಿಸತೊಡಗಿದ, ಅಪ್ಪನ ಈ ಕೃತ್ಯದಿಂದ ಬೇಸತ್ತ ಮಕ್ಕಳು ಅಪ್ಪನನ್ನು ಕೊಲೆ ಮಾಡಿದ್ದಾರೆ.
ಬಳಿಕ ಚಾಪೆಯೊಂದರಲ್ಲಿ ಶವವನ್ನು ಸುತ್ತಿ ಸುಟ್ಟು ಹಾಕಿ ಕಾಡಿನಲ್ಲಿರುವ ಕೆರೆಯ ಸಮೀಪ ಎಸೆದು ಬಂದಿದ್ದಾರೆ. ತಮಿಳುವನನ್ ಮತ್ತು ಜಯಸುಥಾ (48) ಮದುವೆಯಾಗಿ ಸುಮಾರು 26 ವರ್ಷಗಳಾಗಿವೆ. ತಮಿಳುಸೆಲ್ವನ್ (25), ತವಸೀಲನ್ (19) ಮತ್ತು ಧನುಷ್ (16) ಮೂವರು ಮಕ್ಕಳು. ಜತೆಗೆ ಒಬ್ಬ ಮಗಳಿದ್ದಾಳೆ.
ಸದ್ಯ ಪತ್ನಿ ಹಾಗೂ ಗಂಡು ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು ಮೃತದೇಹವನ್ನು ಶವಪರೀಕ್ಷೆಗಾಗಿ ನಾಗಪಟ್ಟಣದ ಸರ್ಕಾರಿ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್)