ನ್ಯೂಸ್

ಪಿತೃಪಕ್ಷದ ದಿನವೇ ತಂದೆ ಕೊಂದ ಮಗ: ಕೃತ್ಯಕ್ಕೆ ತಾಯಿಯ ಸಾಥ್

ಮಂಡ್ಯ: ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಹಾಗೂ ಮಗ ಸೇರಿ ಕೊಲೆ ಮಾಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

ಮದ್ದೂರು ತಾಲೂಕು ಬೆಸಗರಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಚಾಪುರದೊಡ್ಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಉಮೇಶ್ (50).

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಲವು ದಿನಗಳಿಂದಲೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಈಗಾಗಲೇ ಕಳೆದ ಐದಾರು ತಿಂಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳ ನಡೆದು ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಸೇರಿ ಉಮೇಶ್ ಅವರ ಕಾಲಿಗೆ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು‌. ಬಳಿಕ ಸಂಬಂಧಿಕರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.

ಆದರೆ, ಚಾಪುರದೊಡ್ಡಿ ಗ್ರಾಮದಲ್ಲಿ ಶನಿವಾರ ಪಿತೃಪಕ್ಷ ಇರುವುದರಿಂದ ಪೂಜೆ ಪುರಸ್ಕಾರಗಳಲ್ಲಿ ಭಾಗಿಯಾಗಲು ಗುರುವಾರ ಉಮೇಶ್ ಬಂದಿದ್ದರು. ಆದರೆ, ಈ ವೇಳೆ ಮತ್ತೆ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಅವರುಗಳೊಂದಿಗೆ ಜಗಳ ನಡೆದು ದೊಣ್ಣೆ ಹಾಗೂ ಮಚ್ಚುಗಳಿಂದ ಇಬ್ಬರು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ಉಮೇಶ್ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಸವಿತಾ ಹಾಗೂ ಶಶಾಂಕ್ ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳಕ್ಕೆ ಮದ್ದೂರು ಗ್ರಾಮಾಂತರ ಇನ್ಸ್‌ಪೆಕ್ಟರ್ ವೆಂಕಟೇಗೌಡ, ಬೆಸಗರಹಳ್ಳಿ ಪೋಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇನ್ನು ಮಿಂಚಿನ ಕಾರ್ಯಾಚರಣೆ ಕೈಗೊಂಡ ಮದ್ದೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಗೌಡ ಹಾಗೂ ಸಿಬ್ಬಂದಿಗಳು ರಾತ್ರಿಯೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಸವಿತಾ ಹಾಗೂ ಶಶಾಂಕ್ ಅವರುಗಳನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಈ ಸಂಬಂಧ ಬೆಸಗರಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.