More

    ಸಂಸತ್ತಿನ ಲಾಗಿನ್​ ಐಡಿ, ಪಾಸ್​ವರ್ಡ್​ ಶೇರ್​: ಟಿಎಂಸಿ ಸಂಸದೆ ವಿರುದ್ಧ ಮತ್ತೊಂದು ಗಂಭೀರ ಆರೋಪ

    ನವದೆಹಲಿ: ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸಂಸದೆಯ ಪರವಾಗಿ ಪ್ರಶ್ನೆಗಳನ್ನು ಪೋಸ್ಟ್​ ಮಾಡಲು ಅವರ ಸಂಸತ್ತಿನ ಲಾಗಿನ್​ ಐಡಿ ಮತ್ತು ಪಾಸ್​ವರ್ಡ್​ ಅನ್ನು ಹಂಚಿಕೊಂಡಿದ್ದಾರೆ ಎಂದು ಉದ್ಯಮಿ ದರ್ಶನ್ ಹಿರಾನಂದನಿ​ ಅವರು ಸಂಸತ್ತಿನ ನೈತಿಕ ಸಮಿತಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಆರೋಪ ಮಾಡಿದ್ದಾರೆ.

    ಹಿರಾನಂದಿನಿ ಅಫಿಡವಿಟ್​ ಹೊರಗಡೆ ಬರುತ್ತಿದ್ದಂತೆ ಮಹುವಾ ಮೊಯಿತ್ರಾ ಕೂಡ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯಮಿಯ ಅಫಿಡೆವಿಟ್​ನ ದೃಢೀಕರಣವನ್ನು ಪ್ರಶ್ನೆ ಮಾಡಿದ್ದಾರೆ.

    ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಅವರು ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮೊಯಿತ್ರಾ ಮತ್ತು ಉದ್ಯಮಿ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿರುವ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ.

    ಇದರ ನಡುವೆ ಮಂಗಳವಾರ ಮೊಯಿತ್ರಾ ಅವರು ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ತೆಗೆದುಕೊಂಡಿದ್ದಾರೆ ಎನ್ನುವ ಮೂಲಕ ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು ನಿಶಿಕಾಂತ್​ ದುಬೆ ಮತ್ತು ವಕೀಲ ಜೈ ಅನಂತ್​ ದೇಹದ್ರಾಯ್ ಅವರಿಗೆ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ. ಲೋಕಸಭಾ ಸದಸ್ಯೆಯಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಯಾವುದೇ ರೀತಿಯ ಪ್ರಯೋಜನಾ ಅಥವಾ ಲಂಚವನ್ನು ಪಡೆದುಕೊಂಡಿದ್ದೇನೆ ಎಂಬ ಆರೋಪಗಳು “ಮಾನಹಾನಿಕರ, ಸುಳ್ಳು, ಆಧಾರರಹಿತ ಮತ್ತು ಪುರಾವೆಗಳು ಇಲ್ಲದಿರುವಂಥದ್ದು ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಹಿರಾನಂದಿನಿ ಗ್ರೂಪ್​ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು ಮತ್ತು ರಾಜಕೀಯದ ವ್ಯವಹಾರದಲ್ಲಿ ನಾವು ಭಾಗಿಯಾಗಿಲ್ಲ ಎಂದು ಹೇಳಿತ್ತು. ಆದರೆ, ಗುರುವಾರ (ಅ.19) ಉದ್ಯಮಿ ದರ್ಶನ್​ ಹಿರಾನಂದನಿ ಮಾತನಾಡಿ, ಮಹುವಾ ಮೊಯಿತ್ರಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಶೀಘ್ರವಾಗಿ ಹೆಸರು ಗಳಿಸಲು ಬಯಸಿದ್ದರು. ಪ್ರಧಾನಿ ಮೋದಿಯವರ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಿದರೆ ಬಹುಬೇಗನೆ ಖ್ಯಾತಿ ಗಳಿಸಬಹುದು ಎಂದು ಮೊಯಿತ್ರಾ ಅವರ ಸ್ನೇಹಿತರು ಮತ್ತು ಸಲಹೆಗಾರರು ಸಲಹೆ ನೀಡಿದರು ಎಂದು ಹಿರಾನಂದನಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಅವರು ಅದಾನಿಯನ್ನು ಗುರಿಯಾಗಿಸಿಕೊಂಡು ಪ್ರಧಾನಿಯನ್ನು ಕೆಣಕಿ, ಮುಜುಗರಕ್ಕೀಡಾಗಿದ್ದಾರೆ ಎಂದಿದ್ದಾರೆ.

    ಓರ್ವ ಸಂಸದೆಯಾಗಿ ಆಕೆ ತನ್ನ ಇಮೇಲ್ ಐಡಿಯನ್ನು ನನ್ನೊಂದಿಗೆ ಶೇರ್​ ಮಾಡಿಕೊಂಡರು. ಹೀಗಾಗಿ ನಾನು ಅವರಿಗೆ ಮಾಹಿತಿಯನ್ನು ಕಳುಹಿಸಬಹುದು ಮತ್ತು ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಬಹುದಿತ್ತು. ಅವರು ಹೇಳಿದಂತೆ ನಾನು ಕೇಳಿದೆ ಎಂದು ಹಿರಾನಂದನಿ ಹೇಳಿದರು. ಇದಾದ ಬಳಿಕ ಮೊಯಿತ್ರಾ ಅವರು ಪದೇಪದೆ ನನ್ನ ಬಳಿ ಹಲವು ಬೇಡಿಕೆಗಳನ್ನು ಸಲ್ಲಿಸುತ್ತಿದ್ದರು ಮತ್ತು ಹಲವಾರು ಅನುಕೂಲಗಳನ್ನು ಕೇಳುತ್ತಿದ್ದರು. ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು, ಸರ್ಕಾರದಿಂದ ಅಧಿಕೃತವಾಗಿ ಮಂಜೂರು ಮಾಡಿದ ದೆಹಲಿ ಬಂಗಲೆಯ ನವೀಕರಣಕ್ಕೆ ಬೆಂಬಲವನ್ನು ನೀಡುವುದು ಸೇರಿದಂತೆ ಪ್ರಯಾಣ ವೆಚ್ಚಗಳು, ರಜಾದಿನಗಳ ಖರ್ಚನ್ನು ಕೇಳಿದರು ಎಂದು ಹಿರಾನಂದಿನಿ ಅಫಿಡೆವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.

    ಇಡೀ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದರಿಂದ ಸಂಸತ್ತಿನ ನೈತಿಕ ಸಮಿತಿಯ ಮುಂದೆ ನನ್ನ ಅಫಿಡವಿಟ್ ಸಲ್ಲಿಸಿದ್ದೇನೆ ಎಂದು ಹಿರಾನಂದಾನಿ ಸಮರ್ಥನೆ ನೀಡಿದರು.

    ಹಿರಾನಂದಿನಿ ಅಫಿಡವಿಟ್​ಗೆ ಎಕ್ಸ್​ನಲ್ಲಿ ತಿರುಗೇಟು ನೀಡಿರುವ ಮೊಯಿತ್ರಾ, ಅಫಿಡವಿಟ್‌ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ಅದು ಬಿಳಿ ಕಾಗದದಲ್ಲಿದೆ ಮತ್ತು ಅಧಿಕೃತ ಲೆಟರ್‌ಹೆಡ್ ಅಲ್ಲ ಎಂದು ಹೇಳಿದರು. ಪತ್ರದಲ್ಲಿರುವ ವಿಚಾರ ಒಂದು ಜೋಕ್ಸ್​ ಎಂದರು. ನನ್ನ ಗುರಿಯಾಗಿಸುವ ಉದ್ದೇಶದಿಂದ ಅಫಿಡವಿಟ್​ ಅನ್ನು ಪ್ರಧಾನ ಮಂತ್ರಿ ಕಚೇರಿಯಿಂದಲೇ ರಚನೆಯಾಗಿದೆ ಎಂದಿದ್ದಾರೆ. ಅದಾನಿ ವಿಚಾರದಲ್ಲಿ ನನ್ನನ್ನು ಹೇಗಾದರೂ ಕಟ್ಟಿಹಾಕಲು ಬಿಜೆಪಿ ಸರ್ಕಾರ ಕಾಯುತ್ತಿದೆ ಎಂದು ಮೊಯಿತ್ರಾ ತಿರುಗೇಟು ನೀಡಿದರು. ದರ್ಶನ್ ಹಿರಾನಂದನಿಗೆ ಪ್ರಧಾನಿ ಕಚೇರಿಯಿಂದ ಅಫಿಡವಿಟ್‌ಗೆ ಸಹಿ ಹಾಕುವಂತೆ ಬಲವಂತ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಸಹ ಮೊಯಿತ್ರಾ ಮಾಡಿದರು.

    ಪ್ರಕರಣದ ಹಿನ್ನಲೆ
    ಲೋಕಸಭೆ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಹಾಗೂ ತೃಣಮೂಲ ಪಕ್ಷದ ಸಂಸದರು ಪ್ರತಿ ಅಧಿವೇಶನದಲ್ಲೂ ಅದಾನಿ ವಿಚಾರವಾಗಿ ಕೂಗಾಡಿ ಕಲಾಪವನ್ನು ವ್ಯರ್ಥ ಮಾಡುತ್ತಾರೆ. ಪ್ರತಿಬಾರಿಯೂ ಈಗೇಕೆ ಆಗುತ್ತದೆ ಎಂದು ವಿಚಾರಿಸಿದಾಗ ಅವರು ಹೀರಾನಂದಿನಿ ಸಂಸ್ಥೆಯ ಮಾಲೀಕರಿಂದ ಲಂಚ ಪಡೆದು ಅವರು ಹೇಳಿದ ಹಾಗೆ ಇವರು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ತಿಳಿದುಬಂದಿತ್ತು. 2019-23ರ ವರೆಗಿನ ಅಧಿವೇಶನದಲ್ಲಿ ಸಂಸದೆ ಮಹುವಾ ಅವರು 61 ಪ್ರಶ್ನೆಗಳನ್ನು ಕೇಳಿದ್ದು, ಈ ಪೈಕಿ 50 ಪ್ರಶ್ನೆಗಳು ಹೀರಾನಂದಿನಿ ಹಾಗೂ ಅದಾನಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ಈಗಾಗಲೇ ಸಿಬಿಐಗೆ ದೂರು ನೀಡಿದ್ದು, ಲೋಕಸಭೆ ವತಿಯಿಂದ ವಿಶೇಷ ಸಮಿತಿ ಒಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ಲೋಸಕಭೆ ಸ್ಪೀಕರ್​ಗೆ ಬರೆದ ಪತ್ರದಲ್ಲಿ ಸಂಸದ ನಿಶಿಕಾಂತ್ ದುಬೆ ಎಂದು ಆಗ್ರಹಿಸಿದ್ದರು. (ಏಜೆನ್ಸೀಸ್​)

    ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ; ಬಿಜೆಪಿ ಸಂಸದನಿಗೆ ಲೀಗಲ್ ನೋಟಿಸ್ ಕಳುಹಿಸಿದ ಮಹುವಾ ಮೊಯಿತ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts