ನ್ಯೂಸ್

ತಂತ್ರಾಂಶ ಸಮಸ್ಯೆ ಬಗೆಹರಿಸಿ; ಜನಸ್ನೇಹಿ ಆಡಳಿತಕ್ಕೆ ಸಿಗಬೇಕಿದೆ ಆದ್ಯತೆ

Webdesk - Manjunatha B

ಕಂದಾಯ ಇಲಾಖೆಯಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೂಡ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ತಾಂತ್ರಿಕ ಸಮಸ್ಯೆ, ಅಧಿಕಾರಿಗಳ ಬೇಜವಾಬ್ದಾರಿತನ, ಸಿಬ್ಬಂದಿಯ ನಿರ್ಲಕ್ಷ್ಯ, ವಿಳಂಬ ಧೋರಣೆ ಮುಂತಾದ ಕಾರಣಗಳಿಂದ ಜನಸಾಮಾನ್ಯರು ದಿನನಿತ್ಯದ ಕೆಲಸಗಳಿಗಾಗಿ ಪರದಾಡುವಂತಾಗಿದೆ. ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತಿದ್ದು, ಜನರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪರಿಹಾರದ ನಿಟ್ಟಿನಲ್ಲಿ ಅಗತ್ಯ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಸ್ವತ್ತುಗಳ ನೋಂದಣಿ ಸಮಸ್ಯೆ ನಿವಾರಿಸುವ ಆಶಯ ಮತ್ತು ಆಡಳಿತದಲ್ಲಿ ಪಾರದರ್ಶಕತೆ, ವೇಗ ತರುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಾರಿಗೆ ತರಲಾದ ಕಾವೇರಿ 2.0 ತಂತ್ರಾಂಶವೇ ಈಗ ಸಮಸ್ಯೆ ಸೃಷ್ಟಿಸಿರುವುದು ವಿಪರ್ಯಾಸ. ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದಲ್ಲಿ 256 ಉಪ ನೋಂದಣಿ ಕೇಂದ್ರಗಳಲ್ಲಿ 2023ರ ಜೂನ್-ಜುಲೈ ತಿಂಗಳಲ್ಲಿ ಈ ತಂತ್ರಾಂಶ ಅಳವಡಿಸಲಾಗಿದೆಯಾರೂ, ಇದು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಜನರು ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ‘ಯಾವುದೇ ತಂತ್ರಾಂಶ ಅಳವಡಿಸಿದಾಗ ಅದು ಹೊಂದಾಣಿಕೆಯಾಗಲು, ನಾವು ಆ ವ್ಯವಸ್ಥೆಗೆ ಹೊಂದಿಕೊಳ್ಳಲು ಒಂದಿಷ್ಟು ಸಮಯ ಬೇಕಾಗುತ್ತದೆ. ಕನಿಷ್ಠ ಆರು ತಿಂಗಳುಗಳಲ್ಲಿ ಸಮಸ್ಯೆಗಳನ್ನು ನಿವಾರಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಳೆದ ವರ್ಷದ ಜುಲೈನಲ್ಲೇ ಆಶ್ವಾಸನೆ ನೀಡಿದ್ದರಾದರೂ, ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ನೀಡಿದ ಭರವಸೆಯೂ ಹುಸಿಯಾಗಿದೆ.

ಜನಸ್ನೇಹಿ ಆಡಳಿತದ ಹೆಸರಿನಲ್ಲಿ ತರಲಾದ ವ್ಯವಸ್ಥೆಯೇ ತೊಂದರೆಗೆ ಕಾರಣವಾಗುವುದು ಸರಿಯಲ್ಲ. ಆರಂಭಿಕ ಹಂತದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗುವುದು ಸಹಜ. ಆದರೆ, ತಂತ್ರಾಂಶ ಅಳವಡಿಕೆಯ ಹಲವು ತಿಂಗಳುಗಳ ಬಳಿಕವೂ, ಅದು ಜನರ ಸರಾಗ, ಸುಲಭ ಬಳಕೆಗೆ ಲಭ್ಯವಾಗದಿರುವುದನ್ನು ಇಲಾಖೆ ಗಂಭಿರವಾಗಿ ಪರಿಗಣಿಸಬೇಕಿದೆ. ಕಾವೇರಿ-1 ತಂತ್ರಾಂಶವನ್ನು ಪೂರ್ಣವಾಗಿ ತೆಗೆದುಹಾಕಿದ ಬಳಿಕ ಹೊಸ ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬ ನಂಬಿಕೆ ಹುಸಿಯಾಗಿದೆ. ಜನರು ಸಂದೇಹ ಪರಿಹರಿಸಿಕೊಳ್ಳಲು ಸಂಬಂಧಿತ ಕಚೇರಿಗೆ ಸಂರ್ಪಸಿದರೆ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಿಟಿಜನ್ ಲಾಗಿನ್​ನಲ್ಲಿ ತಾಂತ್ರಿಕ ತೊಂದರೆ ಉಂಟಾಗುತ್ತಿದ್ದು, ಆನ್​ಲೈನ್​ನಲ್ಲಿ ಹಣ ಪಾವತಿ ಮಾಡುವಾಗಲೂ ಸಮಸ್ಯೆಯಾಗುತ್ತಿದೆ. ಸಾಫ್ಟ್​ವೇರ್ ಅಪ್​ಗ್ರೇಡ್ ಮಾಡಿದ್ದರೂ, ಅರ್ಧದಲ್ಲೇ ಪ್ರಕ್ರಿಯೆ ಮೊಟಕುಗೊಳ್ಳುತ್ತಿದ್ದು, ತುಂಬಿದ ಮಾಹಿತಿಗಳು ಅಳಿಸಿ ಹೋಗುತ್ತಿವೆ. ಇದರಿಂದ ಜನರು ನೋಂದಣಿ ಪ್ರಕ್ರಿಯೆಯನ್ನು ಮತ್ತೆ ಆರಂಭದಿಂದ ಕೈಗೊಳ್ಳಬೇಕಾಗುತ್ತದೆ. ಕಾವೇರಿ 2.0 ತಂತ್ರಾಂಶದಲ್ಲಿನ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲೆ ಸೇರಿದಂತೆ ಹಲವೆಡೆಯ ನಾಗರಿಕರು ಕಂದಾಯ ಸಚಿವರಿಗೆ ಪತ್ರ ಬರೆದಿದ್ದಾರೆ. ಹೊಸ ತಂತ್ರಾಂಶದ ಅನುಷ್ಠಾನವೇನೋ ಸರಿ; ಆದರೆ ಕ್ಷೇತ್ರ ಪರಿಣಿತರ ನೆರವನ್ನು ಪಡೆದು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದರೆ ಮಾತ್ರ ಇದರಿಂದ ಜನರಿಗೆ ಅನುಕೂಲ. ಇನ್ನಾದರೂ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಲಿ.