ನವದೆಹಲಿ: ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕನೊಬ್ಬ ತನ್ನ ಹೆಂಡತಿಯ ಮೇಲೆ ತಮಿಳುನಾಡಿನಲ್ಲಿ 100 ಕ್ಕೂ ಹೆಚ್ಚು ಜನರು ಸೇರಿ ಹಲ್ಲೆ ನಡೆಸಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವೈರಲ್ ಆಗುತ್ತಿರುವ ವೀಡಿಯೊದ ದಿನಾಂಕ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಹೀಗಾಗಿ ಅದರ ಸತ್ಯಾಸತ್ಯತೆಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ತನ್ನನ್ನು ತಾನು ಹವಲ್ದಾರ್ ಪ್ರಭಾಕರ್ ಎಂದು ಗುರುತಿಸಸಿಕೊಂಡ ಸೈನಿಕ, “ತನ್ನ ಹೆಂಡತಿಯನ್ನು ಅರೆಬೆತ್ತಲೆಗೊಳಿಸಿ ತುಂಬಾ ಕೆಟ್ಟದಾಗಿ ಥಳಿಸಲಾಗಿದೆ” ಎಂದು ಹೇಳಿಕೊಂಡಿದ್ದಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ತಿರುವಣ್ಣಾಮಲೈನ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್ ಸ್ಪಷ್ಟೀಕರಣ ನೀಡಿದ್ದಾರೆ. ಯೋಧನ ಪತ್ನಿಯ ಮೇಲೆ ಹಲ್ಲೆ ನಡೆದಿರುವುದನ್ನು ನಿರಾಕರಿಸಿದ ಅವರು, ಭೂಮಿಗೆ ಸಂಬಂಧಿಸಿದಂತೆ ವೈಯಕ್ತಿಕ ವಿವಾದವಿದೆ ಎಂದು ಹೇಳಿದರು. “ಸೈನಿಕನಿಗೆ ತಪ್ಪಾಗಿ ಮಾಹಿತಿ ನೀಡಲಾಗಿದ್ದು ನಾವು ಮಹಿಳೆಗೆ ರಕ್ಷಣೆ ನೀಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.
ಯೋಧನ ಮನವಿಗೆ ಸ್ಪಂದಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಯೋಧನ ಪತ್ನಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ, "ಕಾಶ್ಮೀರದಲ್ಲಿ ನಮ್ಮ ದೇಶಕ್ಕೆ ಧೈರ್ಯದಿಂದ ಸೇವೆ ಸಲ್ಲಿಸುತ್ತಿರುವ ತಿರುವಣ್ಣಾಮಲೈ ಮೂಲದ ಹವಲ್ದಾರ್ ಅವರ ಪತ್ನಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅವಳ ಕಥೆಯನ್ನು ಕೇಳಿ ನಿಜವಾಗಿಯೂ ದುಃಖಿತನಾಗಿದ್ದೇನೆ. ನಮ್ಮ ತಮಿಳು ಮಣ್ಣಿನಲ್ಲಿ ಅವಳಿಗೆ ಇದು ಸಂಭವಿಸಿದೆ ಎಂದು ನನಗೆ ನಾಚಿಕೆಯಾಯಿತು! ವೆಲ್ಲೂರಿನ ಆಸ್ಪತ್ರೆಗೆ ದಾಖಲಾಗಿರುವ ಅವರನ್ನು ನೋಡಿಕೊಳ್ಳಲು ನಮ್ಮ ಪಕ್ಷದ ಜನರು ಧಾವಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಎನ್ ತ್ಯಾಗರಾಜನ್ (ನಿವೃತ್ತ) ಅವರು, "ಇದು ಯಾವ ಜಗತ್ತಿನಲ್ಲಿ ನ್ಯಾಯಯುತವಾಗಿದೆ? ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ಸೇನಾ ಸೈನಿಕನೊಬ್ಬ ತಮಿಳುನಾಡಿನಲ್ಲಿ ತನ್ನ ಹೆಂಡತಿಯನ್ನು ಉಳಿಸಲು ಮಂಡಿಯೂರಿ ನಮಸ್ಕರಿಸುವ ಕರುಣಾಜನಕ ಸ್ಥಿತಿ ಇದು. ಎಂದು ಟ್ವೀಟ್ ಮಾಡಿದ್ದಾರೆ.
"ಒಬ್ಬ ಸೈನಿಕನು ದೇಶವನ್ನು ರಕ್ಷಿಸಲು ಹೊರಟಾಗ, ಸೈನಿಕನ ಪತ್ನಿ ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಸರ್ಕಾರದ ಅತ್ಯುನ್ನತ ಜವಾಬ್ದಾರಿಯಾಗಿದೆ. ತಮಿಳುನಾಡಿನಲ್ಲಿ ಇಂತಹ ಘಟನೆಗಳ ಹೆಚ್ಚಳವು ಕಾನೂನುಬಾಹಿರ ಸ್ಥಿತಿಯನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.
ಸೂಕ್ತ ಕ್ರಮ ಕೈಗೊಂಡು ಮಹಿಳೆಯರ ಘನತೆಯನ್ನು ಕಾಪಾಡುವಂತೆ ತಮಿಳುನಾಡು ರಾಜ್ಯಪಾಲರು, ರಾಜ್ಯ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್)