Canada | ಹಾವು ಕಂಡರೆ ಯಾರಿಗೆ ಭಯವಿಲ್ಲ ಹೇಳಿ. ನಾವು ಹಾವಿನ ಬಗ್ಗೆ ಎಷ್ಟೇ ಮಾತನಾಡಿದರೂ ಸಹ ನಮ್ಮ ಕಣ್ಣಿಗೆ ಹಾವು ಬೀಳುತ್ತಿದ್ದಂತೆ ಒಂದು ಕ್ಷಣ ಮೈ ನಡುಗುವುದಂತೂ ನಿಜ. ನಾವು ಓಡಾಡುವ ರಸ್ತೆಯಲ್ಲಿ ಅಥವಾ ನಮ್ಮ ವಾಸದ ಮನೆಯ ಸುತ್ತ-ಮುತ್ತ ಒಂದೇ ಒಂದು ಹಾವು ಕಂಡರೆ ಸಾಕು ನಾವು ಬೆಚ್ಚಿ ಬೀಳುತ್ತೀವಿ. ಆದರೆ ಈ ಒಂದು ಸ್ಥಳದಲ್ಲಿ ವಸಂತಕಾಲದ ಸಮಯದಲ್ಲಿ ಬರೋಬ್ಬರಿ 75,000 ಕ್ಕೂ ಹೆಚ್ಚು ಹಾವುಗಳು ಒಂದೇ ಕಡೆ ಕಾಣಿಸಿಕೊಳ್ಳಲಿವೆ.
ಹಾವುಗಳ ಮಧುಚಂದ್ರ ತಾಣ ಎಂದು ಕರೆಯಲ್ಪಡುವ ಕೆನಡಾದ ಮ್ಯಾನಿಟೋಬಾದಲ್ಲಿರುವ ನಾರ್ಸಿಸಸ್ ಪ್ರದೇಶದಲ್ಲಿ ಪ್ರತಿ ವರ್ಷದ ವಸಂತ ಕಾಲದಲ್ಲಿ 75,000 ಕ್ಕೂ ಹೆಚ್ಚು ಹಾವುಗಳು ಇಲ್ಲಿಗೆ ಭೇಟಿ ನೀಡಲಿವೆ. ಕೆಲವೊಮ್ಮೆ 1,50,000 ಹಾವುಗಳು ಈ ಸ್ಥಳಕ್ಕೆ ಭೇಟಿ ನೀಡಲಿವೆಯಂತೆ. ಇಲ್ಲಿ ವಸಂತಕಾಲದಲ್ಲಿ ಹಾವುಗಳು ತಮ್ಮ ಸಂಗಾತಿಯನ್ನು ಹುಡುಕಿ ಪ್ರಣಯದಲ್ಲಿ ಸೇರಲು ಇಲ್ಲಿಗೆ ಬರುತ್ತವೆ ಎನ್ನಲಾಗಿದೆ. ಹೆಚ್ಚಾಗಿ ಇಲ್ಲಿ ಪೂರ್ವ ಗಾರ್ಟರ್ ಎಂಬ ಹೆಸರಿನ ಹಾವುಗಳು ಕಣಿಸಿಕೊಳ್ಳಲಿವೆ.
ನೀವು ನಡೆದುಕೊಂಡು ಹೋಗುವ ರಸ್ತೆಯಲ್ಲಿ ಏನಾದರೂ ಹಾವು ಕಂಡರೆ ನೀವು ಅದನ್ನು ಹಿಂತಿರುಗಿ ನೋಡದೆಯೇ ಸುಮ್ಮನೆ ಹೋಗುತ್ತೀರಿ. ಆದರೆ ಒಂದೇ ಸ್ಥಳದಲ್ಲಿ ನೂರಾರು ಹಾವುಗಳನ್ನು ನೋಡಿದರೆ ಅವುಗಳನ್ನು ಹೇಗೆ ನಿಭಾಯಿಸಬಲ್ಲಿರಿ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಆದರೆ ಇಂತಹ ಸ್ಥಳಗಳಲ್ಲಿ ಹಾವುಗಳ ದೃಶ್ಯ ನೋಡಲು ಅನೇಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಹಾವುಗಳನ್ನು ನೋಡಲು ಜೀವಶಾಸ್ತ್ರಜ್ಞರು ಪ್ರತಿ ವರ್ಷ ಮಾರ್ಚ್ ನಿಂದ ಜೂನ್ ವರೆಗೆ ಇಲ್ಲಿಗೆ ಬರುತ್ತಾರಂತೆ. ಈ ಹಾವುಗಳು ಚಳಿಗಾಲದಲ್ಲಿ ತಮ್ಮ ವಾಸಸ್ಥಳದಿಂದ ಹೊರಬರುತ್ತವೆ. ಕೆನಡಾದಲ್ಲಿ ಚಳಿಗಾಲ ಮುಗಿದ ನಂತರ ಹಾವಿನ ಪ್ರಯಾಣ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ, ಸುಣ್ಣದ ಕಲ್ಲುಗಳ ಬಿರುಕುಗಳಲ್ಲಿ ರೂಪುಗೊಂಡ ಗುಹೆಗಳಲ್ಲಿ ಹಾವುಗಳು ವಾಸಿಸುತ್ತವೆ. ವಸಂತ ಬಂದಾಗ, ಗಂಡು ಹಾವುಗಳು ಮೊದಲು ಸಂಗಾತಿಯನ್ನು ಹುಡುಕಲು ಹೊರಡುತ್ತವೆ. ಮಧುಚಂದ್ರದ ತಾಣವನ್ನು ತಲುಪಿದ ನಂತರ, ಗಂಡು ಹಾವು ಹೆಣ್ಣು ಹಾವಿನ ಸುತ್ತಲೂ ಚಲಿಸುತ್ತದೆ. ಗಂಡು ಹಾವುಗಳು ಹೆಣ್ಣು ಹಾವುಗಳನ್ನು ಮೆಚ್ಚಿಸಲು ಮತ್ತು ಅವುಗಳನ್ನು ತಮ್ಮ ಸಂಗಾತಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತವೆ ಎನ್ನಲಾಗಿದೆ.
ಇದನ್ನೂ ಓದಿ: ಸಾಕು ನಾಯಿಯೊಂದಿಗೆ ಚಲಿಸುತ್ತಿದ್ದ ರೈಲು ಹತ್ತಲು ಹೋದ ವ್ಯಕ್ತಿ! ಮಿಸ್ ಆಗಿ ಕೆಳಕ್ಕೆ ಬಿತ್ತು ನಾಯಿ; ಮುಂದೆ ಆಗಿದ್ದೇನು? Train
ಈ ಬೃಹತ್ ಹಾವುಗಳ ಸಮಾಗಮವು ಹಾವುಗಳ ಸಂಯೋಗ ಮತ್ತು ಸಂತಾನೋತ್ಪತ್ತಿಯ ಭಾಗವಾಗಿದೆ. ಈ ಘಟನೆ ಸಂಭವಿಸುವ ನಾರ್ಸಿಸಸ್ ಸರ್ಪ ಗುಹೆಗಳಲ್ಲಿ ಸಾವಿರಾರು ಹಾವುಗಳು ಸಂಚರಿಸುತ್ತವೆ. ಈ ಪ್ರದೇಶವು ತುಂಬಾ ದಟ್ಟವಾಗಿದ್ದು, ಇಷ್ಟೊಂದು ಹಾವುಗಳನ್ನು ಹತ್ತಿರದಿಂದ ನೋಡುವುದು ತುಂಬಾ ಕಷ್ಟ ಸಾಧ್ಯ. ನಾರ್ಸಿಸಸ್‌ನಲ್ಲಿ ಹಾವುಗಳ ಮಿಲನವು ಪರಿಸರ ವ್ಯವಸ್ಥೆಯ ಒಂದು ಭಾಗವಾಗಿದೆ. ಇದು ವಿಜ್ಞಾನಿಗಳಿಗೆ ಹಾವುಗಳು ಹೇಗೆ ಬದುಕುತ್ತವೆ ಮತ್ತು ವರ್ತಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಪ್ರದೇಶವು ಹಲವು ರೀತಿಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.