ನ್ಯೂಸ್

ಗಣರಾಜ್ಯೋತ್ಸವ ಪರೇಡ್​ಗೆ ಕರಕುಶಲ ಕಲಾಕೃತಿಗಳ ಸ್ತಬ್ಧಚಿತ್ರ; ಜಿಐ ಟ್ಯಾಗ್ ಇರುವ ಸಾಂಪ್ರದಾಯಿಕ ವಸ್ತುಗಳ ಅನಾವರಣಕ್ಕೆ ಸಿದ್ಧತೆ

ಬೆಂಗಳೂರು: ಪ್ರತಿವರ್ಷ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಪ್ರಮುಖ ಆಕರ್ಷಣೆಯಾದ ಸ್ಥಬ್ಧ ಚಿತ್ರ ಮೆರವಣಿಗೆಯಲ್ಲಿ ಈ ವರ್ಷ ರಾಜ್ಯದ 16 ಕರಕುಶಲ ಕಲಾಕೃತಿಗಳು ಅನಾವರಣಗೊಳ್ಳಲಿವೆ.

ಗಣರಾಜ್ಯೋತ್ಸವ ಪರೇಡ್​ನಲ್ಲಿ ರಾಜ್ಯ 13 ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದು, ಅತಿ ಹೆಚ್ಚು ಬಾರಿ ಭಾಗವಹಿಸಿದ ರಾಜ್ಯವೆಂಬ ಖ್ಯಾತಿಗೆ ಭಾಜನವಾಗಿದೆ. ಈ ವರ್ಷ ಜಿಯೋಗ್ರಾಫಿಕಲ್ ಇಂಡಿಕೇಶನ್ಸ್ ಟ್ಯಾಗ್ ಹೊಂದಿರುವ ಕಲಾಕೃತಿಗಳನ್ನು ಪೆರೇಡ್​ನಲ್ಲಿ ಪ್ರದರ್ಶಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ರಾಷ್ಟ್ರಮಟ್ಟದಲ್ಲಿ ಭೌಗೋಳಿಕವಾಗಿ ಗುರುತಿಸಲ್ಪಟ್ಟ 16 ಕಲಾಕೃತಿಗಳು ಜಿಐ ಟ್ಯಾಗ್​ನ್ನು ಹೊಂದಿರುವುದರಿಂದ ಕರ್ನಾಟಕವನ್ನು ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದು ಕರೆಯಲಾಗುತ್ತದೆ. ಕೌಶಲ್ಯದಿಂದ ತಯಾರಿಸಿದ ಮಡಕೆಗಳು, ಎಚ್ಚರಿಕೆಯಿಂದ ಕೆತ್ತಲಾದ ಶ್ರೀಗಂಧದ ಕಲಾಕೃತಿಗಳು, ಕೈಯಿಂದ ನೇಯ್ದ ಸೀರೆಗಳು, ಕುಶಲಕರ್ವಿು ಕರಕುಶಲ ವಸ್ತುಗಳ ಸೌಂದರ್ಯವು ವರ್ಣಿಸಲು ಅಸಾಧ್ಯ. ಮರದ ಕೆತ್ತನೆಗಳು, ಕಂಚಿನ ಪ್ರತಿಮೆಗಳು, ಚನ್ನಪಟ್ಟಣ ಹಾಗೂ ಕಿನ್ನಾಳ ಬೊಂಬೆಗಳು, ಬಿದಿರು ಮತ್ತು ಮಣ್ಣಿನ ಆಟಿಕೆಗಳು, ಟೆರಾಕೋಟಾ ಸ್ಥಬ್ಧ ಚಿತ್ರದಲ್ಲಿ ಅರಳಿವೆ.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಉತ್ತಮ ಮಾರುಕಟ್ಟೆ ಪಡೆಯಲು 55,000 ಕುಶಲಕರ್ವಿುಗಳಿಗೆ ಅನುಕೂಲ ಕಲ್ಪಿಸುವ ಇ-ಕಾಮರ್ಸ್ ವೇದಿಕೆ ಜಾರಿಗೆ ತರಲು ಸನ್ನದ್ಧವಾಗಿದೆ. ಆದ್ದರಿಂದ ಮಾರುಕಟ್ಟೆ ವೃದ್ಧಿಸುವುದು ಸಹ ಈ ಸ್ತಬ್ದಚಿತ್ರ ಆಯ್ಕೆಯ ಉದ್ದೇಶಗಳಲ್ಲಿ ಒಂದಾಗಿದೆ. ಕರ್ನಾಟಕದವರೆ ಆದ ಸ್ವಾತಂತ್ರ್ಯ ಹೋರಾಟಗಾರ್ತಿ, ಕಲಾಭಿಮಾನಿ, ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಅಳಿವಿನ ಅಂಚಿನಲ್ಲಿದ್ದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದ್ದರಿಂದ ಅವರ ಚಿತ್ರವನ್ನು ಬಳಸಲಾಗುತ್ತಿದೆ.

ಸ್ತಬ್ಧಚಿತ್ರ ವಿಶೇಷತೆಯೇನು?: ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರು ರೋಸ್​ವುಡ್ ದಂತದ ಕೆತ್ತನೆಯನ್ನು ಚಿತ್ರಿಸಲಾಗಿದೆ. ಮಧ್ಯದ ಭಾಗವು ಗಮನ ಸೆಳೆಯುವ ಬಿಡ್ರಿವೇರ್, ಕಿನ್ಹಾಳ ಕಾಫ್ಟ್, ಕಂಚಿನ ಪ್ರತಿಮೆಗಳು, ಚನ್ನಪಟ್ಟಣ ದಿಂದ ಆಟಿಕೆಗಳು, ಮರದ ಕೆತ್ತನೆ, ಕುಂಬಾರಿಕೆ ಗಳನ್ನು ಪ್ರದರ್ಶಿಸುತ್ತದೆ. ಹಿಂದಿನ ಭಾಗದಲ್ಲಿ ಭಾರತೀಯ ಕರಕುಶಲ ವಸ್ತುಗಳ ಜ್ಯೋತಿ ಹೊತ್ತ ಕಮಲಾದೇವಿ ಚಟ್ಟೋಪಾಧ್ಯಾಯ ಕುಳಿತಿದ್ದಾರೆ.

ನಾರಾಯಣ ಗುರು ತಿರಸ್ಕಾರಕ್ಕೆ ಖಂಡನೆ

ಕಾರವಾರ: ದೆಹಲಿಯಲ್ಲಿ ಆಯೋಜನೆಯಾಗುವ ಗಣರಾಜ್ಯೋತ್ಸವ ಪರೇಡ್​ಗೆ ಬ್ರರ್ಹ¾ ನಾರಾಯಣ ಗುರು ಅವರ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ರಾಜ್ಯ ಆರ್ಯ ಈಡಿಗ ಮಹಾ ಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು. ಈ ವಿಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಶೀಘ್ರವೇ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ, ಪರೇಡ್​ನಲ್ಲಿ ನಾರಾಯಣಗುರು ಅವರ ಸ್ತಬ್ಧಚಿತ್ರ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

ಈ ಬಾರಿ ರಾಜ್ಯವನ್ನು ವಿಶೇಷವಾಗಿ ಪ್ರತಿನಿಧಿಸಬೇಕು ಹಾಗೂ ಕರಕುಶಲ ಕಲೆ ಇನ್ನಷ್ಟು ಪ್ರಚಾರ ಪಡೆಯಬೇಕೆಂಬ ಉದ್ದೇಶ ದಿಂದ ಈ ಸ್ತಬ್ದಚಿತ್ರ ಆಯ್ಕೆ ಮಾಡಿದ್ದೇವೆ. ಅತಿ ಹೆಚ್ಚು ಬಾರಿ ಭಾಗವಹಿಸಿರುವುದು ಸಂತಸದ ಸಂಗತಿಯಾಗಿದೆ. | ಡಾ.ಪಿ.ಎಸ್.ಹರ್ಷ ಆಯುಕ್ತರು, ವಾರ್ತಾ ಇಲಾಖೆ
ದೆಹಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಪ್ರತಿವರ್ಷ 12 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅದರಂತೆ ಮೂರು ವರ್ಷಗಳಿಗೊಮ್ಮೆ ಪ್ರತಿ ರಾಜ್ಯಗಳಿಗೆ ಅವಕಾಶ ಸಿಗುತ್ತದೆ. ಈ ಪುನರಾವರ್ತಿತ ನಿಯಮದಂತೆ ಈ ಬಾರಿ ಕೇರಳಕ್ಕೆ ಅವಕಾಶವಿಲ್ಲ. ಇದು ತಿಳಿದಿದ್ದರೂ ಕೇರಳ ಸರ್ಕಾರ ಶ್ರೀ ನಾರಾಯಣ ಗುರುಗಳ ವಿಚಾರ ಮುಂದಿಟ್ಟು ಅನವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ. | ವಿ.ಸುನೀಲ್​ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ