ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭಾನುವಾರ 58ನೇ ವಸಂತಕ್ಕೆ ಕಾಲಿರಿಸಿದರು. ಕರೊನಾ ಹಿನ್ನೆಲೆಯಲ್ಲಿ ಅದ್ಧೂರಿ ಜನ್ಮದಿನಾಚರಣೆಗೆ ಬ್ರೇಕ್ ಹಾಕಿದ್ದ ಶಿವಣ್ಣ, ಅಭಿಮಾನಿಗಳಿಗೂ ಆಚರಣೆ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಕೋರಿದ್ದರು. ಅದರಂತೆ ಸರಳವಾಗಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ಶನಿವಾರ ಸಂಜೆಯೇ ಸ್ನೇಹಿತರಾದ ಚಿ. ಗುರುದತ್, ರಘುರಾಮ್ ಪತ್ನಿ ಗೀತಾ ಮತ್ತು ಪುತ್ರಿಯರೊಂದಿಗೆ ಕೇಕ್ ಕತ್ತರಿಸಿ ಬರ್ತ್ಡೇ ಆಚರಿಸಿಕೊಂಡಿರುವ ಶಿವಣ್ಣ, ಕಿರಿಮಗಳಿಂದ ನಾಯಿಮರಿಯೊಂದನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಜನ್ಮದಿನದ ನಿಮಿತ್ತ ಸ್ಯಾಂಡಲ್ವುಡ್ನ ಬಹುತೇಕ ಕಲಾವಿದರು, ತಾಂತ್ರಿಕವರ್ಗದವರೆಲ್ಲ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.
ಇದೇ ವೇಳೆ ಶಿವರಾಜ್ಕುಮಾರ್ ನಟಿಸಲಿರುವ ಹೊಸ ಸಿನಿಮಾಗಳ ಪೋಸ್ಟರ್ ಸಹ ಬಿಡುಗಡೆ ಆಗಿವೆ. ಮುಖ್ಯವಾಗಿ ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮಾಸ್ ಅವತಾರದಲ್ಲಿ ಶಿವರಾಜಕುಮಾರ್ ಎದುರಾಗಿದ್ದಾರೆ. ಇನ್ನು ಈ ವರ್ಷದ ವಿಶೇಷ ಏನೆಂದರೆ, ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ 46 ರಾಷ್ಟ್ರಗಳಲ್ಲಿನ ಕನ್ನಡಿಗರು ಶಿವಣ್ಣನಿಗೆ ಶುಭಾಶಯ ತಲುಪಿಸಿದ್ದಾರೆ. ಮನೆಯಿಂದಲೇ ನೇರವಾಗಿ ಅಭಿಮಾನಿಗಳ ಜತೆ ಸಿನಿಮಾ, ಆರೋಗ್ಯ, ಮುಂದಿನ ದಿನಗಳ ಬಗ್ಗೆ ಒಂದಷ್ಟು ಹೊತ್ತು ಸಂವಾದ ಮಾಡಿದ್ದಾರೆ.
ವೃದ್ಧಾಶ್ರಮಕ್ಕೆ ನೆರವು: ಶಿವರಾಜ್ಕುಮಾರ್ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳು ವೃದ್ಧಾಶ್ರಮಕ್ಕೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ. ಮಹಾಲಕ್ಷ್ಮಿಪುರ ಕುರುಬರಹಳ್ಳಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ವೃದ್ಧಾಶ್ರಮಕ್ಕೆ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಸೇರಿ ನಿತ್ಯ ಬಳಕೆಯ ವಸ್ತುಗಳನ್ನು ನೀಡಿದ್ದಾರೆ.