ಚಂಡೀಗಢ: ಪಂಜಾಬ್ನ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಹಿಂದಿನ ಮಾಸ್ಟರ್ ಮೈಂಡ್ ಗ್ಯಾಂಗ್ಸ್ಟರ್ ಗೊಲ್ಡಿ ಬ್ರಾರ್ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಗೊಲ್ಡಿ ಬ್ರಾರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯ. ಈತ ಇತ್ತೀಚೆಗೆ ಕೆನಡಾದಿಂದ ಯುಎಸ್‌ಗೆ ತೆರಳಿದ್ದ. ಅಲ್ಲಿ 2017 ರಿಂದಲೂ ಆತ ನೆಲೆಸಿದ್ದಾನೆ. ನ.20ರಂದೇ ಆತನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದ್ದು, ನಂತರ ನಡೆದಿರುವ ಬೆಳವಣಿಗೆ ಕುರಿತು ಭಾರತ ಸರ್ಕಾರವು ಕ್ಯಾಲಿಫೋರ್ನಿಯಾದಿಂದ ಯಾವುದೇ ಅಧಿಕೃತ ಹೇಳಿಕೆಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.
ಗೋಲ್ಡಿ ಬ್ರಾರ್, ಸಿಧು ಮೂಸೆವಾಲ ಹತ್ಯೆಯ ಹೊಣೆಯನ್ನು ಹೊತ್ತಿದ್ದ. ಮೇ ತಿಂಗಳಲ್ಲಿ ನಡೆದ ಕೊಲೆಯ ಬಳಿಕ ಅದೇ ಒತ್ತಡದಲ್ಲಿ ಕೆನಡಾದಿಂದ ಅಮೆರಿಕಕ್ಕೆ ತೆರಳಿದ್ದ. ಫ್ರೆಸ್ನೋ ನಗರದಲ್ಲಿ ವಾಸಿಸುತ್ತಿದ್ದ ಬ್ರಾರ್, ಸ್ಯಾಕ್ರಮೆಂಟೊ, ಫ್ರಿಜೋವ್ ಮತ್ತು ಸಾಲ್ಟ್ ಲೇಕ್‌ನಂತಹ ನಗರಗಳನ್ನು ತನ್ನ ಸುರಕ್ಷಿತ ಮನೆಯನ್ನಾಗಿ ಮಾಡಿಕೊಂಡಿದ್ದ.
ಗೋಲ್ಡಿ ಬ್ರಾರ್ ಬಂಧನವು ಕ್ಯಾಲಿಫೋರ್ನಿಯಾದಲ್ಲಿ ಬಹು ದೊಡ್ಡ ಸಂಚಲನವನ್ನು ಉಂಟುಮಾಡಿದೆ ಎಂಬ ಮಾಹಿತಿಯನ್ನು ಭಾರತದ ಬೇಹುಗಾರಿಕಾ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್, ದೆಹಲಿ ಪೊಲೀಸರ ಗುಪ್ತಚರ ವಿಭಾಗ ಮತ್ತು ಪಂಜಾಬ್‌ನಲ್ಲಿರುವ ಸಹ ಇಲಾಖೆಗಳನ್ನು ಸ್ವೀಕರಿಸಿವೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಸಿಧು ಮೂಸೆ ವಾಲಾ ಅವರ ತಂದೆ ಗೋಲ್ಡಿ ಬ್ರಾರ್ ಬಗ್ಗೆ ಯಾವುದೇ ಮಾಹಿತಿ ನೀಡಿದವರಿಗೆ ಕೇಂದ್ರ ಸರ್ಕಾರ 2 ಕೋಟಿ ರೂ. ಬಹುಮಾನ ಘೋಷಿಸಬೇಕೆಂದು ಒತ್ತಾಯಿಸಿದ್ದರು.
ಪಂಜಾಬಿನ ಶ್ರೀ ಮುಕ್ತಸರ್ ಸಾಹಿಬ್ ಮೂಲದ ಗೋಲ್ಡಿ ಬ್ರಾರ್ 2017ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಕ್ಕೆ ಹೋಗಿ ನೆಲೆಸಿದ್ದ. ಕಳೆದ ತಿಂಗಳು ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿಯ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಧು ಮೂಸೆವಾಲಾ ಎಂದೇ ಪ್ರಖ್ಯಾತಿಯಾಗಿರುವ 28 ವರ್ಷದ ಶುಭದೀಪ್ ಸಿಂಗ್ ಓರ್ವ ಖ್ಯಾತ ಗಾಯಕ. ಅಲ್ಲದೆ, ಕಾಂಗ್ರೆಸ್ ನಾಯಕರು ಹೌದು. ಮೇ 29ರಂದು ಮಾನಸ ಜಿಲ್ಲೆಯ ಜವಹರ್ಕೆಯ ಗ್ರಾಮದಲ್ಲಿ ಅವರು ಚಲಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡು ಹಾರಿಸಿ ಹತ್ಯೆ ಮಾಡಿದರು. ಇದಾದ ಬಳಿಕ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೊತ್ತುಕೊಂಡಿದ್ದ. ಬಳಿಕ ಆತನನ್ನು ಬಂಧಿಸಲಾಯಿತು.
ಈ ಕೊಲೆ ಪ್ರಕರಣದಲ್ಲಿ ದಾಖಲಾಗಿರುವ ಚಾರ್ಜ್ ಶೀಟ್ನಲ್ಲಿರುವ 24 ಆರೋಪಿಗಳ ಹೆಸರು ಉಲ್ಲೇಖವಾಗಿದೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಈ ಗೋಲ್ಡಿ ಬ್ರಾರ್ ಎಂದು ತಿಳಿದುಬಂದಿದೆ. (ಏಜೆನ್ಸೀಸ್)