

ಯಾದಗಿರಿ: ಏನೂ ಅರಿಯದ ಪುಟ್ಟ ಕಂದಮ್ಮನನ್ನು ಕುಡಿದ ಅಮಲಿನಲ್ಲಿ ಪಾಪಿ ತಂದೆಯೊಬ್ಬ ಕತ್ತು ಹಿಸುಕಿ ಕೊಂದ ಅಮಾನುಷ ಕೃತ್ಯ ಗುರಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
9 ತಿಂಗಳ ಮಗು ತನುಶ್ರೀ ಕೊಲೆಯಾದ ಕಂದಮ್ಮ. ಈ ಮಗುವಿನ ತಂದೆ ರಾಮು ಕೊಲೆಗಾರ. ಕುಡಿತ ಚಟ ಅಂಟಿಸಿಕೊಂಡಿದ್ದ ರಾಮು, ಎಂದಿನಂತೆ ಬುಧವಾರವೂ ಕುಡಿದುಕೊಂಡು ಮನೆಗೆ ಹೋಗಿದ್ದ. ಮಗುವನ್ನು ನೋಡಿಕೊಳ್ಳುತ್ತೇನೆ, ನೀನು ಹತ್ತಿ ಬಿಡಿಸಲು ಹೋಗು ಎಂದು ಹೆಂಡತಿಯನ್ನು ಕಳಿಸಿದ್ದ. ಮಗು ಎಚ್ಚರವಾಗಿ ಜೋರಾಗಿ ಅಳುತ್ತಿತ್ತು. ಮಗುವನ್ನು ಸಂತೈಸಲು ಪ್ರಯತ್ನಿಸಿದ್ದಾನೆ. ಮಗು ಅಳುವುದನ್ನು ನಿಲ್ಲಿಸದ ಕಾರಣ ನಶೆಯಲ್ಲಿ ಸಣ್ಣ ಹಗ್ಗವನ್ನ ಕೊರಳಿಗೆ ಬಿಗಿದು ಉಸಿರು ನಿಲ್ಲಿಸಿದ್ದಾನೆ.
ನಂತರ ಮಗು ನಿದ್ದೆ ಮಾಡುತ್ತಿದೆ ಎಂದು ಹೇಳಿ ಪಕ್ಕದ ಮನೆಯ ಅಜ್ಜಿಯ ಕೈಯಲ್ಲಿ ಶವ ಕೊಟ್ಟು, ಜಮೀನಿನತ್ತ ಹೋಗಿದ್ದಾನೆ. ಮಗು ಮಲಗಿದೆಯಾ? ಎಂದು ಪತ್ನಿ ಕೇಳಿದಾಗ, ತಾನು ಮಾಡಿದ ಕೃತ್ಯದ ಬಗ್ಗೆ ಪತ್ನಿಗೆ ವಿವರಿಸುತ್ತಾ, ಅಜ್ಜಿ ಕೈಗೆ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾನೆ.
ಇದರಿಂದ ದಿಗ್ಭ್ರಮೆಗೊಂಡ ಪತ್ನಿ, ಮನೆಗೆ ಓಡಿ ಹೋಗಿ ನೋಡಿದಾಗ ಮಗು ಸತ್ತಿರುವುದು ಗೊತ್ತಾಗಿದೆ. ಹೆಂಡತಿ ನೀಡಿದ ದೂರಿನ ಮೇರೆಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾಮುನನ್ನು ಬಂಧಿಸಿದ್ದಾರೆ.