ಸಾಂದರ್ಭಿಕ ಚಿತ್ರ 
ನ್ಯೂಸ್

ಸಿದ್ದರಾಮಯ್ಯ ಮತಾಂತರದ ರಾಯಭಾರಿ, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ: ಆರ್.ಅಶೋಕ್ ಆರೋಪ

ಚಿಕ್ಕಮಗಳೂರು: ಶಕ್ತಿ ಯೋಜನೆಯ ಫಲಾನುಭವಿಗಳ ಮೂಲಕ ಬಿಜೆಪಿ ವಿರುದ್ಧ ಧರ್ಮಾಸ್ತ್ರ ಪ್ರಯೋಗಿಸಿದ್ದ ಕಾಂಗ್ರೆಸ್​ಗೆ ಇದೀಗ ಬಿಜೆಪಿ ಮರಳಿ ಧರ್ಮಾಸ್ತ್ರವನ್ನೇ ಪ್ರಯೋಗ ಮಾಡಿದೆ. ಅರ್ಥಾತ್, ಮತ್ತೆ ಧರ್ಮಗಳನ್ನು ಬಳಸಿ ಎರಡೂ ಪಕ್ಷಗಳ ಪರಸ್ಪರ ವಾಗ್ದಾಳಿ ಮುಂದುವರಿದಿದೆ.

ಇಂದು ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಆರ್.ಅಶೋಕ್ ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಮತಾಂತರಕ್ಕೆ ಸಿದ್ದರಾಮಯ್ಯ ಅವರೇ ರಾಯಭಾರಿ ಎಂದಿರುವ ಅಶೋಕ್, ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದೂ ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹೀಗಾಗಿ ಮತಾಂತರಕ್ಕೆ ಅವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾದರೆ ಪಕ್ಕದ ಮನೆಯ ಅಮರನಾಥ್ ಅಬ್ದುಲ್ ಘನಿ ಆಗಬೇಕಾ? ಎಂದು ಪ್ರಶ್ನಿಸಿದ ಅಶೋಕ್, ಮತಾಂತರವಾದರೆ ಮಾತ್ರ ಕಾಂಗ್ರೆಸ್​​ಗೆ ಮತ ಬೀಳುತ್ತದೆ ಎಂದರು.

ಈ ದೇಶ ನಮ್ಮ ಕೈಯಲ್ಲಿ ಉಳಿಯಬೇಕು ಎಂದರೆ ಮತಾಂತರ ಆಗಬೇಕು ಅಂತ ಬ್ರಿಟಿಷರು ಹೇಳಿದ್ದರು. ಈ ದೇಶ ನಮ್ಮ ಕೈಗೆ ಬರಬೇಕಾದರೆ ಎಲ್ಲರೂ ಮುಸ್ಲಿಂ ಆಗಬೇಕು ಎಂದು ಬಾಬರ್-ಔರಂಗಜೇಬ್ ಹೇಳಿದ್ದರು. ಟಿಪ್ಪು ಲಕ್ಷಾಂತರ ಜನರನ್ನ ಕನ್ವರ್ಟ್ ಮಾಡಿದ. ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಅಶೋಕ್ ಹೇಳಿದರು.