ನ್ಯೂಸ್

"ಎಲ್ಲರಿಗೂ ನಮಸ್ಕಾರ, ಪ್ರತಿ ಕ್ಷಣ..." ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಮೊದಲ ಸಂದೇಶ | Shubhanshu Shukla

Shubhanshu Shukla: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಇತರ ಮೂವರು ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶ ಪ್ರವಾಸ ಕೈಗೊಂಡಿರುವುದು ಸಂಗತಿ ಎಲ್ಲಿರಿಗೂ ತಿಳಿದೇ ಇದೆ. ಭಾರತೀಯ ಕಾಲಮಾನದ ಪ್ರಕಾರ, ಬುಧವಾರ (ಜೂನ್​.25) ಮಧ್ಯಾಹ್ನ 12.01ಕ್ಕೆ, ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಫಾಲ್ಕನ್-9 ರಾಕೆಟ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾಯಿಸಲಾಯಿತು. ಪ್ರಸ್ತುತ ಪ್ರಯಾಣದಲ್ಲಿರುವ ಶುಕ್ಲಾ, ಬಾಹ್ಯಾಕಾಶದಿಂದಲೇ ಸಂದೇಶವೊಂದನ್ನು ರವಾನಿಸಿದ್ದಾರೆ.

ಇಂದು (ಜೂ.26) ಸಂಜೆ 4.30ಕ್ಕೆ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿರುವ ಶುಕ್ಲಾ, ಪ್ರಸ್ತುತ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಯನ್ನು ಸುತ್ತುತ್ತಿದ್ದಾರೆ. ಬಾಹ್ಯಾಕಾಶದಿಂದ ನೇರ ಕರೆಯಲ್ಲಿ ಮಾತನಾಡಿದ ಅವರು, ಪ್ರಯಾಣದ ಕ್ಷಣವನ್ನು ಆನಂದಿಸುತ್ತಿದ್ದಾರೆ. ಶುಭಾಂಶು ಮತ್ತು ಅವರ ತಂಡ ಮಾತನಾಡಿದ ತುಣುಕನ್ನು ಸ್ಪೇಸ್‌ಎಕ್ಸ್ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ತಮ್ಮ ಸಹ ಗಗನಯಾತ್ರಿಗಳೊಂದಿಗೆ ನೇರ ಕರೆಯಲ್ಲಿ 15 ನಿಮಿಷಗಳ ಕಾಲ ಮಾತನಾಡಿದ ಶುಭಂಶು ಶುಕ್ಲಾ, "ಎಲ್ಲರಿಗೂ ನಮಸ್ಕಾರ. ನನ್ನ ಸಹ ಗಗನಯಾತ್ರಿಗಳೊಂದಿಗೆ ಇಲ್ಲಿಗೆ ಬಂದಿರುವುದು ನನಗೆ ಅತೀವ ಸಂತೋಷ ಉಂಟುಮಾಡಿದೆ. ವಾಹ್, ಎಂತಹ ಅದ್ಭುತ ಪ್ರಯಾಣವಿದು. ನಾನು ಉಡಾವಣಾ ಪ್ಯಾಡ್‌ನಲ್ಲಿರುವ ಕ್ಯಾಪ್ಸುಲ್‌ನಲ್ಲಿ ಕುಳಿತಾಗ, ನನ್ನ ಮನಸ್ಸಿನಲ್ಲಿದ್ದ ಒಂದೇ ಒಂದು ಆಲೋಚನೆ.. ಹೋಗೋಣ ಅಷ್ಟೇ. ಇದು ಒಂದು ಉತ್ತಮ ಪ್ರಯಾಣ. ಸಂತೋಷ (ಒಂದು ಆಟಿಕೆ) ನಮ್ಮೊಂದಿಗೆ ಸವಾರಿಗೆ ಬಂದಿತು. ಭಾರತೀಯ ಸಂಪ್ರದಾಯದಲ್ಲಿ, ಹಂಸವನ್ನು ಜ್ಞಾನವಾಗಿ ಪ್ರತಿನಿಧಿಸಲಾಗುತ್ತದೆ. ನಾವು ಇದೀಗ ಭಾರತದ ಸ್ಥಿತಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯಬೇಕು, ಹೇಗೆ ತಿನ್ನಬೇಕು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಹೇಳಿದರು.

"ನಾನು ಮಗುವಿನಂತೆ ಪ್ರತಿಯೊಂದನ್ನು ಕಲಿಯುತ್ತಿದ್ದೇನೆ. ನಾನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಾಧ್ಯವಾದಷ್ಟು ಸಮಯವನ್ನು ಕಳೆಯುತ್ತೇನೆ. ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ" ಎಂದು ಶುಭಾಂಶು ಶುಕ್ಲಾ ತಮ್ಮ ಉತ್ಸಾಹ ಮತ್ತು ಅನುಭವವನ್ನು ಹಂಚಿಕೊಂಡಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ,(ಏಜೆನ್ಸೀಸ್).