ನ್ಯೂಸ್

40 ವರ್ಷದ ನಂತ್ರ ISS​ನತ್ತ ಭಾರತ: ಮೇನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿರುವ ಶುಭಾಂಶು ಶುಕ್ಲಾ ಯಾರು? Shubhanshu Shukla

Shubhanshu Shukla : ಸುದೀರ್ಘ 40 ವರ್ಷಗಳ ಕಾಯುವಿಕೆ ಕೊನೆಗೂ ಫಲ ನೀಡುವ ಹಂತಕ್ಕೆ ಬಂದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗಳನ್ನು ಸಾಧಿಸುವತ್ತ ಭಾರತ ಹೆಜ್ಜೆ ಇಡುತ್ತಿರುವುದು ಗೊತ್ತೇ ಇದೆ. ಇದೀಗ ಬರೋಬ್ಬರಿ 4 ದಶಕಗಳ ನಂತರ, ಬಾಹ್ಯಾಕಾಶ ಪ್ರಯಾಣದಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿ ಮಾಡಲು ಸಿದ್ಧವಾಗುತ್ತಿದೆ. ಮುಂದಿನ ತಿಂಗಳು ಅಂದರೆ, ಮೇನಲ್ಲಿ ಭಾರತೀಯ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ.

ಶುಕ್ರವಾರ (ಏಪ್ರಿಲ್ 18) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭವಿಷ್ಯದ ಯೋಜನೆಗಳ ಕುರಿತು ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಮೊದಲ ಭಾರತೀಯ ರಾಕೇಶ್ ಶರ್ಮ. 1984 ರಲ್ಲಿ ಸೋವಿಯತ್ ಬಾಹ್ಯಾಕಾಶ ನೌಕೆಯಲ್ಲಿ ಅವರು ಪ್ರಯಾಣಿಸಿದರು. ಇದಾದ 4 ದಶಕಗಳ ನಂತರ ಮೊದಲ ಭಾರತೀಯ ಗಗನಯಾತ್ರಿ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ. ಈ ಪರಿಶೀಲನಾ ಸಭೆಯಲ್ಲಿ, ಬಾಹ್ಯಾಕಾಶ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಮುಂಬರುವ ವಿವಿಧ ಬಾಹ್ಯಾಕಾಶ ಕಾರ್ಯಾಚರಣೆಗಳ ಕುರಿತು ವಿವರಿಸಿದರು.

ಗ್ರೂಪ್ ಕ್ಯಾಪ್ಟನ್ ಶುಕ್ಲಾ ಮುಂದಿನ ತಿಂಗಳು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಐಎಸ್‌ಎಸ್‌ಗೆ ಹೋಗಲಿದ್ದಾರೆ. ಈ ಖಾಸಗಿ ಕಾರ್ಯಾಚರಣೆಗಾಗಿ ಬಜೆಟ್ ಅನ್ನು ಆರಂಭಿಕ ವೆಚ್ಚ 1.1 ಬಿಲಿಯನ್​ ಡಾಲರ್​ನಿಂದ 2.32 ಬಿಲಿಯನ್‌ ಡಾಲರ್​ಗೆ ದ್ವಿಗುಣಗೊಳಿಸಲಾಗಿದೆ. ಐಎಸ್‌ಎಸ್‌ನಲ್ಲಿ ಶುಕ್ಲಾ ಅವರ ಅನುಭವವು ಇಸ್ರೋಗೆ ಸಹಾಯ ಮಾಡುತ್ತದೆ.

ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗುವುದು. ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ಈ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ. 39 ವರ್ಷದ ಶುಕ್ಲಾ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸುಮಾರು ಎರಡು ವಾರಗಳ ಕಾಲ ಅಲ್ಲಿಯೇ ಇರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ, ಅವರು ಸಂಶೋಧನೆಯ ಜೊತೆಗೆ ಹಲವಾರು ಪ್ರಯೋಗಗಳನ್ನು ನಡೆಸಲಿದ್ದಾರೆ.

ಯಾರು ಈ ಶುಭಾಂಶು ಶುಕ್ಲಾ?

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತರಬೇತಿ ಪಡೆದ ವಾಯುಪಡೆಯ ಪೈಲಟ್. ಅವರನ್ನು ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ (HSP) ಅಡಿಯಲ್ಲಿ ಆಯ್ಕೆ ಮಾಡಲಾಯಿತು. ಅವರು ಭಾರತದ ಮೊದಲ ಸ್ಥಳೀಯವಾಗಿ ಮಾನವಸಹಿತ ಗಗನಯಾನ ಕಾರ್ಯಾಚರಣೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. 2006ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದರು. ಸುಖೋಯ್-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ನಂತಹ ವಿಮಾನಗಳನ್ನು ಹಾರಿಸಿದ್ದಾರೆ. ಆಗಸದಲ್ಲಿ 2,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಿದ ಅನುಭವವನ್ನು ಹೊಂದಿದ್ದಾರೆ. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾಗಿ ಶುಕ್ಲಾ ಸೈನ್ಯಕ್ಕೆ ಸೇರಿದರು.

ಭಾರತೀಯ ವಾಯುಪಡೆಯ (IAF) ಪೈಲಟ್ ಆಗಿರುವ ಶುಕ್ಲಾ, ಮಾಜಿ ನಾಸಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವದ ಸಿಬ್ಬಂದಿಯನ್ನು ಶೀಘ್ರದಲ್ಲೇ ಸೇರಲಿದ್ದಾರೆ. ಅವರೊಂದಿಗೆ ಇಬ್ಬರು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಜ್ ಉಜ್ನಾನ್ಸ್ಕಿ ಮತ್ತು ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಸಹ ಇರುತ್ತಾರೆ.

2006, ಜೂನ್ ತಿಂಗಳಲ್ಲಿ ಐಎಎಫ್ ಫೈಟರ್ ವಿಂಗ್ ಸೇರುವ ಮೂಲಕ ಶುಕ್ಲಾ ಅವರ ಪ್ರಯಾಣ ಪ್ರಾರಂಭವಾಯಿತು. 2024, ಮಾರ್ಚ್ ತಿಂಗಳಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು. 2019ರಲ್ಲಿ ಶುಕ್ಲಾ ಅವರಿಗೆ ಇಸ್ರೋದಿಂದ ಕರೆ ಬಂತು. ರಷ್ಯಾದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಶುಕ್ಲಾ ಕಠಿಣ ತರಬೇತಿಯನ್ನು ಪಡೆದರು. (ಏಜೆನ್ಸೀಸ್​)