ನವದೆಹಲಿ: ಮುಘಲ್ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ "ಇಂಡಿಯಾ" ಆಗಿ ಬದಲಾಗಿದೆ. ಆದರೆ ಬ್ರಿಟಿಷರ ಹೆಸರು ನಮಗೆ ಬೇಡ. ನಮ್ಮ ದೇಶ ಒಂದೋ ಭಾರತವಾಗಲೀ ಇಲ್ಲವೇ ಹಿಂದೂಸ್ಥಾನವಾಗಲಿ ಎಂಬ ಮನವಿಯೊಂದಿಗೆ ಸುಪ್ರೀಂಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ 'ಇಂಡಿಯಾ” ಎಂಬ ಹೆಸರನ್ನು “ಭಾರತ” ಅಥವಾ “ಹಿಂದೂಸ್ಥಾನ” ಎಂದು ಬದಲಾಯಿಸುವಂತೆ ಕೋರಿ ದೆಹಲಿಯ ನಮಃ ಎಂಬುವವರು ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆಯು ಸುಪ್ರೀಂಕೋರ್ಟ್ ಇಂದು ನಡೆಸಲಿದೆ.
ಸಂವಿಧಾನದ 1 ನೇ ಪರಿಚ್ಛೇದವು "ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹಾರ" ಇದರ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿಯೇ ತಿದ್ದುಪಡಿ ತರುವ ಮೂಲಕ ನಮ್ಮ ದೇಶವನ್ನು "ಇಂಡಿಯಾ"ಮುಕ್ತ ಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಕಳೆದ ಶುಕ್ರವಾರ ಈ ಅರ್ಜಿಯು ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆದರೆ ಅವರು ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್ 2 (ಇವತ್ತಿಗೆ) ಮುಂದೂಡಲಾಗಿತ್ತು. ಆದ್ದರಿಂದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಇಂದು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
"ಇಂಡಿಯಾ" ಎನ್ನುವುದು ಇಂಗ್ಲಿಷ್ ಪದ. ಇದನ್ನು ತೆಗೆದು ಹಾಕಿ ಹಿಂದೂಸ್ಥಾನ ಅಥವಾ ಭಾರತ ಎಂದು ಮಾಡಿದರೆ ಎಲ್ಲರಲ್ಲಿಯೂ ರಾಷ್ಟ್ರೀಯತೆ ಭಾವ ಮೂಡುತ್ತದೆ. ಹೆಸರು ತೆಗೆಯುವುದು ಸಾಂಕೇತಿಕ ಎಂದು ಎನಿಸಿದರೂ ಹೆಸರು ಬದಲಾವಣೆಯಿಂದ ನಮ್ಮತನದ ಭಾವನೆ ಮೂಡುವ ಕಾರಣ ಇಂಗ್ಲಿಷರ ಶಬ್ದ ನಮಗೆ ಬೇಡ. ನಮ್ಮ ಪೂರ್ವಜರು ಸ್ವಾತಂತ್ರ್ಯ ತರಿಸಿಕೊಡಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಆದ್ದರಿಂದ ಇಂಗ್ಲಿಷರು ಆಳ್ವಿಕೆಯ ಹೆಸರನ್ನು ತೆಗೆದುಹಾಕಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
1948ರಲ್ಲಿ ಸಂವಿಧಾನದ 1ನೇ ಪರಿಚ್ಛೇದದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ದೇಶವನ್ನು 'ಭಾರತ’ ಅಥವಾ 'ಹಿಂದೂಸ್ಥಾನ" ಎಂದು ಮಾರ್ಪಾಟು ಮಾಡುವುದಕ್ಕೆ ಸಂಬಂಧಿಸಿದಂತೆ ಅನೇಕರು ಒಲವು ತೋರಿದ್ದರು. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ನಮ್ಮ ದೇಶವನ್ನು ಅದರ ಮೂಲ ಮತ್ತು ಅಧಿಕೃತ ಹೆಸರಿನಿಂದ ಗುರುತಿಸಬೇಕಿದ್ದು, ಕೋರ್ಟ್ ಅದನ್ನು ಮಾನ್ಯ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.