ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​

delhiweb
Published on

ನವದೆಹಲಿ: ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿರುವ ಕರೊನಾ ವೈರಸ್​ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ನಿದ್ದೆ ಗೆಡಿಸಿದೆ. 18,549 ಸೋಂಕಿತರು, ಒಂದೂ ಗುಣಮುಖವಾಗದ ಕೇಸ್​, 416 ಮಂದಿಯ ಸಾವು... ಇದು ಮುಖ್ಯಮಂತ್ರಿಯನ್ನು ಕಂಗೆಡಿಸಿದೆ.

ದೆಹಲಿಗೆ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಿರುವ ಕಾರಣ, ಅದರಲ್ಲಿಯೂ ಈಗ ಲಾಕ್​ಡೌನ್​ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಸದ್ಯ ಗಡಿಯನ್ನು ಮುಚ್ಚಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್​, ಸದ್ಯ ಒಂದು ವಾರದ ಮಟ್ಟಿಗೆ ದೆಹಲಿಯ ಗಡಿಯನ್ನು ಮುಚ್ಚಲಾಗುವುದು. ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಅದನ್ನು ಹೊರತುಪಡಿಸಿದರೆ ಮತ್ತೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಗಡಿ ಬಂದ್​ ಒಂದು ವಾರ ಇರುತ್ತದೆ. ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ನಾಗರಿಕರ ಹಾಗೂ ತಜ್ಞರ ಸಲಹೆಯ ಮೆರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದರು.

ಲಾಕ್​ಡೌನ್​ ಸಡಿಲಿಕೆ ಅಗಿರುವ ಹಿನ್ನೆಲೆಯಲ್ಲಿ, ಇಲ್ಲಿಯವರೆಗೆ ಮುಚ್ಚಲಾಗಿದ್ದ ಅಂಗಡಿಗಳನ್ನು ತೆರೆಯಲು ಅವರು ಅವಕಾಶ ಕಲ್ಪಿಸಿದ್ದಾರೆ. ಹಿಂದಿನ ಆದೇಶದಂತೆ ಆಟೋ ರಿಕ್ಷಾ ಹಾಗೂ ಇ- ರಿಕ್ಷಾಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಇವೂ ಸೇರಿದಂತೆ ಇತರ ವಾಹನಗಳಲ್ಲಿ ಪ್ರಯಾಣಿಸುವವರ ಮೇಲಿನ ನಿರ್ಬಂಧವನ್ನು ತೆಗೆದು ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಕ್ಷೌರಿಕ ಅಂಗಡಿ ಹಾಗೂ ಸಲೂನ್‌ಗಳನ್ನು ತೆರೆಯಲೂ ಅವರು ಅವಕಾಶ ಕಲ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net