ನ್ಯೂಸ್

44 ಅಂತಸ್ತಿನ ಬಹುಮಡಿ ಕಟ್ಟಡಕ್ಕೆ ನುಗ್ಗಿ ಗುಂಡಿನ ದಾಳಿ: ನಾಲ್ವರು ಸಾವು |Shootout

Shootout: ಅಮೆರಿಕಾದ ನ್ಯೂಯಾರ್ಕ್​ನಲ್ಲಿ ದುಷ್ಕರ್ಮಿಯೊಬ್ಬ ಬಹುಮಡಿ ಕಟ್ಟಡಕ್ಕೆ ನುಗ್ಗಿ ಓರ್ವ ಪೊಲೀಸ್ ಅಧಿಕಾರಿ ಸೇರಿ ನಾಲ್ವರನ್ನು ಗುಂಡಿಟ್ಟು ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ( ಜು.28) ರಾತ್ರಿ ನಡೆದಿದೆ.

ಮ್ಯಾನ್​ ಹ್ಯಾಟ್​ನಲ್ಲಿರುವ ಪಾರ್ಕ್​ ಅವೆನ್ಯೂ ಗಗನಚುಂಬಿ ಕಟ್ಟಡದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ.

ಕೊಲೆಯಾದ ಅಧಿಕಾರಿ ದಿದರುಲ್‌ ಇಸ್ಲಾಂ(36) ಎಂದು ಗುರುತಿಸಲಾಗಿದೆ. ಅಮೆರಿಕಕ್ಕೆ ವಲಸೆ ಬಂದ ಬಾಂಗ್ಲಾ ಪ್ರಜೆ. ನ್ಯೂಯಾರ್ಕ್‌ ನಗರದಲ್ಲಿ ಸುಮಾರು 3 ವರ್ಷದಿಂದ ಪೊಲೀಸ್‌‍ ಅಧಿಕಾರಿಯಾಗಿ ಕೆಲಸ ಮಾಡ್ತಿದ್ದರು ಎಂದು ಪೊಲೀಸ್‌‍ ಆಯುಕ್ತ ಜೆಸ್ಸಿಕಾ ಟಿಶ್‌ ಹೇಳಿದ್ದಾರೆ.

ಆರೋಪಿ ಮೊದಲು ಕಟ್ಟಡಕ್ಕೆ ಉದ್ಧನೆಯ ಬಂದೂಕು ಹಿಡಿದು ಪ್ರವೇಶಿಸುವುದು ಸಿಸಿಟಿಯಲ್ಲಿ ದಾಖಲಾಗಿದೆ. ಮೊದಲು ಪೊಲೀಸ್ ಅಧಿಕಾರಿ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ರಕ್ಷಣೆಗೆ ಪ್ರಯತ್ನಿಸಿದ ಮಹಿಳೆಗೆ ಗುಂಡು ಹಾರಿಸಿದ್ದಾನೆ. ನಂತರ ಲಾಬಿಯ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಇನ್ನು ಕಟ್ಟಟದ ಲಿಫ್ಟ್​ನಲ್ಲಿ ಬ್ಯಾಂಕ್​ಗೆ ಹೋಗಿ ಅಲ್ಲಿನ ಭದ್ರತಾ ಸಿಬ್ಬಂದಿ ಸೇರಿ ಇಬ್ಬರ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಹೇಳಿದ್ದಾರೆ.

ಆರೋಪಿ ಲಾಸ್ ವೇಗಾಸ್‌ನ 27 ವರ್ಷದ ಶೇನ್ ಟಮುರಾ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆರೋಪಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಉದ್ದೇಶ ಏನಿತ್ತೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ, ಏನಾಯಿತು ಎಂಬುದನ್ನು ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಮೇಯರ್‌ ಎರಿಕ್‌ ಆಡಮ್ಸೌ ಹೇಳಿದ್ದಾರೆ.

ಸುಮಾರು 40 ಮಹಡಿಯ ಕಟ್ಟಡದಲ್ಲಿ ದೇಶದ ಕೆಲವು ಉನ್ನತ ಹಣಕಾಸು ಸಂಸ್ಥೆಗಳು ಮತ್ತು ರಾಷ್ಟ್ರೀಯ ಫುಟ್‌ಬಾಲ್‌‍ ಪ್ರಧಾನ ಕಚೇರಿ ಹೊಂದಿದೆ. ಘಟನೆಯಿಂದ ಸ್ಥಳದಲ್ಲಿದ್ದ ನೂರಾರು ಜನರು ಆತಂಕಗೊಂಡಿದ್ದರು. ಈ ಕಟ್ಟಡವು ಬ್ಲಾಕ್‌ಸ್ಟೋನ್‌ ಮತ್ತು ಐರ್ಲೆಂಡ್‌ನ ಕಾನ್ಸುಲೇಟ್‌ ಜನರಲ್‌ ಕಚೇರಿಗಳನ್ನು ಸಹ ಒಳಗೊಂಡಿದೆ. (ಎಜೆನ್ಸೀಸ್)