ನ್ಯೂಸ್

'ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ..': ಸಂಯುಕ್ತಾ ಹೆಗ್ಡೆಗೆ ಶೋಭಾ ಕರಂದ್ಲಾಜೆ ಬೆಂಬಲ

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಸಂಯುಕ್ತಾ ಹೆಗ್ಡೆ ನಿನ್ನೆ ಪಾರ್ಕ್​ನಲ್ಲೂ ಗಲಾಟೆ ಮಾಡಿಕೊಂಡಿದ್ದಾರೆ. ತುಂಡುಡುಗೆ ತೊಟ್ಟು ವ್ಯಾಯಾಮ ಮಾಡುತ್ತಿದ್ದ ಸಂಯುಕ್ತಾ ವಿರುದ್ಧ ಅಲ್ಲಿಯೇ ಇದ್ದ ಮಹಿಳೆ ಹಾಗೂ ಕೆಲವು ಸ್ಥಳೀಯರು ಕಿಡಿಕಾರಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಪಾರ್ಕ್​​ನಲ್ಲಿಯೇ ಲಾಕ್​ ಮಾಡಿದ್ದರು.

ಸಂಯುಕ್ತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್​ ಬಂದು, ಪಾರ್ಕ್​ಗೆ ಬಂದಿದ್ದವರ ವಿರುದ್ಧ ಆರೋಪ ಮಾಡಿದ್ದರು. ಇವರಿಗೆಲ್ಲ ಏನು ಪ್ರಾಬ್ಲಂ ಎಂದು ಪ್ರಶ್ನಿಸಿದ್ದರು. ನಂತರ ಟ್ವೀಟ್ ಮಾಡಿ, ಈಗ ಏನಾಗುತ್ತಿದೆಯೋ ಅದು ದೇಶದ ಭವಿಷ್ಯದ ಪ್ರತಿಬಿಂಬ. ನಮ್ಮನ್ನು ಕವಿತಾ ರೆಡ್ಡಿ ನಿಂದಿಸಿದ್ದಾರೆ...ಅಪಹಾಸ್ಯ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಈ ಘಟನೆಯ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು, ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಯುಕ್ತಾರಿಗೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ – ಕೆಕೆಆರ್ ಮುಖಾಮುಖಿ..?

ಸಂಯುಕ್ತಾ ಹೆಗ್ಡೆಯವರನ್ನು ಹೀಗೆಲ್ಲ ನಡೆಸಿಕೊಂಡಿದ್ದು ನಿಜಕ್ಕೂ ದುರದೃಷ್ಟಕರ. ಇಂಥ ನೈತಿಕ ಪೊಲೀಸ್​ಗಿರಿಗೆಲ್ಲ ಅವಕಾಶವಿಲ್ಲ. ಸಂಯುಕ್ತಾ ಮತ್ತು ಅವರ ಸ್ನೇಹಿತರನ್ನು ನಿಂದಿಸಿ, ಹಲ್ಲೆ ಮಾಡಿದ ಕವಿತಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿ, ಶಿಕ್ಷೆ ನೀಡಬೇಕು ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)