ಬೆಂಗಳೂರು: ಎಲ್ಲರಿಗೂ ಧಾರ್ಮಿಕ ಹಕ್ಕು ಇದೆ. ಯಾವುದೇ ಸಂದರ್ಭದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರದ ಹಾಗೆ ನಡೆದುಕೊಳ್ಳಬೇಕು. ಆದರೆ ಚುನಾವಣಾ ಆಯೋಗ ಧಾರ್ಮಿಕ ಕೇಂದ್ರಗಳಲ್ಲಿ, ದೇವಸ್ಥಾನದಲ್ಲಿ ಪ್ರಸಾದ ಕೊಡುವುದಕ್ಕೂ ತಕರಾರು ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಪ್ರಸಾದ ಕೊಡುವ ವಿಚಾರಕ್ಕೆ ಚುನಾವಣಾ ಆಯೋಗ ತಕರಾರು ಮಾಡಿರುವ ವಿಚಾರವಾಗಿ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ಧಾರ್ಮಿಕ ಆಚರಣೆ ಹೆಚ್ಚು ನಡೆಯುವ ಸಮಯವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೋತ್ಸವ, ಕರಾವಳಿ ಭಾಗದಲ್ಲಿ ದೈವಾರಾಧನೆ, ನೇಮೋತ್ಸವ ನಡೆಯುತ್ತಿದೆ. ಆದರೆ ಚುನಾವಣಾ ಆಯೋಗದ ಕೆಲ ನಿಯಮಗಳಿಂದ ಧಾರ್ಮಿಕ ಆಚರಣೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಕೊಡಗಿನಲ್ಲಿ ದೇವಸ್ಥಾನವೊಂದರಲ್ಲಿ ಪ್ರಸಾದ ಹಂಚಿದ್ದಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ನಮ್ಮ ಧಾರ್ಮಿಕ ಭಾವನೆಯ ಜತೆಗೆ ದೇವಸ್ಥಾನದಲ್ಲಿ ಅನ್ನ ಪ್ರಸಾದ ಪ್ರಮುಖವಾದುದು. ಬಹಳಷ್ಟು ಜನ ವರ್ಷದ ಹಿಂದೆಯೇ ಅನ್ನದಾನ ಮಾಡಲು ಹರಕೆ ಹೊತ್ತಿರುತ್ತಾರೆ. ಚುನಾವಣೆ ಎಂದು ಅದನ್ನೇ ನಿಷೇಧ ಮಾಡಿದರೆ, ಅವರು ಮತ್ತೆ ಅನ್ನದಾನ ಮಾಡುವುದು ಕಷ್ಟ. ದೂರಿದಿಂದ ಮತ್ತೆ ಬಂದು ಅನ್ನದಾನ ಮಾಡಲು ಕಷ್ಟವಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.