ನ್ಯೂಸ್

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ತಲಾ ಒಂದು ಉದ್ಯೋಗ: ಸಿಎಂ ಶಿವರಾಜ್​ ಸಿಂಗ್​ ಚೌಹಾಣ್

ಭೋಪಾಲ್: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳು ಮತದಾರರ ಓಲೈಕೆಯಲ್ಲಿ ನಿರತವಾಗಿವೆ. ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಭರ್ಜರಿ ಘೋಷಣೆಗಳನ್ನು ಮಾಡುತ್ತಿದೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಗೆ ಒಂದು ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಘೋಷಿಸಿದ್ದಾರೆ.

ಮಧ್ಯಪ್ರದೇಶದ ಅಲಿರಾಜ್​ಪುರ ಜಿಲ್ಲೆಯಲ್ಲಿ ಸಮಾವೇಶವನ್ನುದದ್ದೇಶಿಸಿ ಮಾತನಾಡಿದ ಚೌಹಾಣ್​, ನಾವು ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಜನತೆಯ ಕಷ್ಟಗಳನ್ನು ನಿವಾರಿಸುತ್ತೇವೆ. ಜನರು ಕೆಲಸ ಅರಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ಮೊದಲು ತಡೆಗಟ್ಟುತ್ತೇವೆ. ಸರ್ಕಾರದ ವತಿಯಿಂದ ಪ್ರತಿ ಒಂದು ಕುಟುಂಬಕ್ಕೂ ಒಂದು ಉದ್ಯೋಗವನ್ನು ನೀಡಲಾಗುವುದು.

ಜನರ ಜೀವನವನ್ನು ಬದಲಾಯಿಸಲು ಹಗಳಿರುಳು ತಮ್ಮ ಸರ್ಕಾರ ಶ್ರಮಿಸುತ್ತಿದ್ದು, ತಾವು ಸಾರ್ವಜನಿಕರ ಸೇವೆ ಮಾಡಲು ಮುಖ್ಯಮಂತ್ರಿಯಾಗಿದ್ದೇನೆ. ಯಾರನ್ನೋ ಓಲೈಸಲೋ, ವೋಟ್​ ಬ್ಯಾಂಕ್​ ರಾಜಕಾರಣಕ್ಕಾಗಿ ಅಲ್ಲ ಪರೋಕ್ಷವಾಗಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​ ಕಾಂಗ್ರೆಸ್​ಗೆ ಚಾಟಿ ಬೀಸಿದ್ದಾರೆ.