ನ್ಯೂಸ್

ಅಭಿಮಾನಿಗಳು ಸೇರಿದಂತೆ ಎಲ್ಲರನ್ನೂ ನೋಡಿ ದುಃಖ ಆಯಿತು: ನಟ Shivarajkumar ಭಾವುಕ ನುಡಿ

ಬೆಂಗಳೂರು: ನಟ ಶಿವರಾಜ್​ಕುಮಾರ್​ (Shivarajkumar) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸರ್ಜರಿಯ ಸಲುವಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಡಿಸೆಂಬರ್​ 24ರಂದು ಅವರಿಗೆ ಸರ್ಜರಿ ನಡೆಯಲಿದ್ದು, ಇಂದು (ಡಿಸೆಂಬರ್​ 18) ಪ್ರಯಾಣ ಬೆಳೆಸಿದ್ದಾರೆ. ಶಿವರಾಜ್​ಕುಮಾರ್ (Shivarajkumar) ಅವರು ವಿದೇಶಕ್ಕೆ ಪ್ರಯಾಣ ಬೆಳೆಸುವ ಮೊದಲು​ ಅನೇಕ ಗಣ್ಯರು, ಗೆಳೆಯರು, ಕುಟುಂಬದವರು ಭೇಟಿ ಮಾಡಿ ಶುಭ ಹಾರೈಸುತ್ತಿದ್ದಾರೆ.

ಇನ್ನೂ ಶಿವರಾಜ್​ಕುಮಾರ್​ ಅವರ ಮನೆಗೆ ಸುದೀಪ್​, ವಿನೋದ್​ ರಾಜ್​, ಬಿಸಿ ಪಾಟೀಲ್​ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡುತ್ತಿದ್ದು, ಶೀಘ್ರ ಚೇತರಿಕೆ ಕಾಣಲಿ ಎಂದು ಹಾರೈಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳು ನೆಚ್ಚಿನ ನಟ ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇನ್ನೂ ಈ ಬಗ್ಗೆ ಮಾತನಾಡಿರುವ ನಟ ಶಿವರಾಜ್​ಕುಮಾರ್​, ತುಂಬಾ ಎಮೋಷನಲ್​ ಆಗಿದ್ದೇನೆ. ಆಪರೇಷನ್​ ವಿಚಾರವಾಗಿ ಎಲ್ಲರಲ್ಲೂ ಆತಂಕ ಇದೆ. ಮನೆಯಿಂದ ಹೋಗುತ್ತಿರುವುದರಿಂದ ಕುಟುಂಬ, ಅಭಿಮಾನಿಗಳು ಸೇರಿದಂತೆ ಎಲ್ಲರನ್ನೂ ನೋಡಿ ದುಃಖ ಆಯಿತು. ಡಿಸೆಂಬರ್​ 24ರಂದು ಸರ್ಜರಿ ನಡೆಯಲಿದ್ದು, ನಾನು ಕಾನ್ಫಿಡೆಂಟ್​ ಆಗಿದ್ದೇನೆ. ಅದರ ಬಗ್ಗೆ ಏನು ಯೋಚನೆ ಇಲ್ಲ. 35 ದಿನಕ್ಕೂ ಹೆಚ್ಚಿನ ಕಾಲ ಮನೆಯಿಂದ ದೂರ ಇರುವುದು ತುಂಬಾ ನೋವಾಗುತ್ತಿದೆ. ಅಭಿಮಾನಿಗಳು ಸೇರಿದಂತೆ ಎಲ್ಲರೂ ವಿಶ್​ ಮಾಡಿದ್ದಾರೆ. ಮಾಧ್ಯಮಗಳು ನನಗೆ ಈ ರೀತಿಯಾಗಿರುವುದನ್ನ ವೈಭವೀಕರಿಸದೆ ತೋರಿಸಿರುವುದು ತುಂಬಾ ಖುಷಿ ನೀಡಿದೆ ಎಂದು ನಟ ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇನ್ನೂ ನಟ ಶಿವರಾಜ್​ಕುಮಾರ್​ ಅವರೊಂದಿಗೆ ಪತ್ನಿ ಗೀತಾ ಹಾಗೂ ಪುತ್ರಿ ನಿವೇದಿತಾ ತೆರಳುತ್ತಿದ್ದು, ಜನವರಿ 26ಕ್ಕೆ ನಟ ಶಿವರಾಜ್​ಕುಮಾರ್​ ಅಮೆರಿಕದಿಂದ ವಾಪಸ್​ ಬರುವ ಸಾಧ್ಯತೆ ಇದೆ. ಮಿಯಾಮಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಟ ಶಿವರಾಜ್​ಕುಮಾರ್​ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ.