ನ್ಯೂಸ್

ಶೆಟ್ಟರ್ v/s ಬಿಜೆಪಿ ಹೈಕಮಾಂಡ್!; ಹು-ಧಾ ಸೆಂಟ್ರಲ್​ನಲ್ಲಿ ರಂಗೇರಿದ ಚುನಾವಣಾ ಅಖಾಡ

Webdesk - Ravikanth

| ಪ್ರಕಾಶ ಎಸ್. ಶೇಟ್/ ಮಂಜುನಾಥ ಅಂಗಡಿ ಹುಬ್ಬಳ್ಳಿ

ಧಾರವಾಡ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಚುನಾವಣೆಗೂ ಮುನ್ನವೇ ಬಿಜೆಪಿ ಪತಾಕೆ ಎಲ್ಲೆಲ್ಲಿ ಹಾರುತ್ತದೆ ಎನ್ನುವುದು ಸ್ಪಷ್ಟವಾಗುತ್ತಿತ್ತು. ಆದರೆ, ಈ ಬಾರಿ ಕೋಟೆ ಉಳಿಸಿಕೊಳ್ಳಲು ಬಿಜೆಪಿ ದೊಡ್ಡ ಹೋರಾಟ ಮಾಡಬೇಕಾದ ಪ್ರಸಂಗ ಬಂದಿದೆ. ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತ ಬಂದಿರುವ ಸೆಂಟ್ರಲ್ ಕ್ಷೇತ್ರವೇ ಜಿಲ್ಲೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್.

ಹುಬ್ಬಳ್ಳಿಯ ಈದ್ಗಾ ಮೈದಾನ (ರಾಣಿ ಚನ್ನಮ್ಮ) ಹೋರಾಟದಿಂದ ಬಿಜೆಪಿ ಜಿಲ್ಲೆಯಲ್ಲಿ ಫೀನಿಕ್ಸ್​ನಂತೆ ಎದ್ದು ಬರಲು ಕಾರಣವಾಯಿತು. ಕಳೆದ ಸಲ 7ರಲ್ಲಿ 5 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರಿದೆ. ಕಾಂಗ್ರೆಸ್ 2 ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದೆ. ಆದರೆ, ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿರುವ ಪರಿಣಾಮ ಬಿಜೆಪಿ ಹೆಚ್ಚು ಉಟಕ್ ಬೈಠಕ್ ಮಾಡಬೇಕಾಗಿದೆ.

ಈಗಿನ ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್ ಅವರು ನಿರಂತರ 6 ಬಾರಿ ಆಯ್ಕೆಯಾಗಿದ್ದಾರೆ. ಈಗ 7ನೇ ಬಾರಿ ಕಣಕ್ಕಿಳಿದಿದ್ದಾರೆ, ಪಕ್ಷ ಮಾತ್ರ ಬದಲಾಗಿದೆ. ವೈಯಕ್ತಿಕ ವರ್ಚಸ್ಸು ಹಾಗೂ ಮತದಾರರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಆದರೆ, ಅನಾಯಾಸವಾಗಿ ಗೆಲ್ಲುತ್ತ ಬಂದಿದ್ದ ಜಗದೀಶ ಶೆಟ್ಟರ್ ಈ ಬಾರಿ ಅಗ್ನಿಪರೀಕ್ಷೆ ಎದುರಿಸಬೇಕಿದೆ.

ಎದುರಾಳಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಜಗದೀಶ ಶೆಟ್ಟರ್ ಅವರ ಶಿಷ್ಯ. ಮಹೇಶಗೆ ಟಿಕೆಟ್ ಕೊಡಿಸಬೇಕೆನ್ನುವ ಕಾರಣಕ್ಕೆ ಎಷ್ಟೇ ಡ್ಯಾಮೇಜ್ ಆದರೂ ಬಿಜೆಪಿ ವರಿಷ್ಠರು ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದೀಗ ಮಹೇಶ ಅವರನ್ನು ಗೆಲ್ಲಿಸಿಕೊಂಡು ಬರುವ ಇರಾದೆಯಿಂದ ಬಿಜೆಪಿಯ ದೊಡ್ಡ ಪಡೆಯೇ ಬೆನ್ನಿಗೆ ನಿಂತಿದೆ. ಸ್ವತಃ ಅಮಿತ್ ಷಾ ಮುತುವರ್ಜಿ ವಹಿಸಿರುವುದು ಗಮನಾರ್ಹ. ಮಹೇಶ ಅವರನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಅನ್ನು ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಲ್ಹಾದ ಜೋಶಿ ಅವರಿಗೆ ವಹಿಸಿದ್ದಾರೆ. ಲಿಂಗಾಯತ ಮತ ಧ್ರುವೀಕರಣಗೊಳ್ಳಬಾರದು ಎನ್ನುವ ತಾಕೀತು ಮಾಡಿದ್ದಾರೆ.

ಹುಬ್ಬಳ್ಳಿಗೆ ಬಂದಿದ್ದ ಯಡಿಯೂರಪ್ಪ ಮೊದಲು ಮಾಡಿದ್ದು ಲಿಂಗಾಯತ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ. ಮಹೇಶ ಟೆಂಗಿನಕಾಯಿ ಕೂಡ ಲಿಂಗಾಯತ, ಯುವ ಮುಖಂಡನನ್ನು ಬೆಳೆಸೋಣ ಎಂದು ಕರೆ ನೀಡಿದ್ದಾರೆ. ‘ರಕ್ತದಲ್ಲಿ ಬರೆದುಕೊಡುತ್ತೇನೆ ಜಗದೀಶ ಶೆಟ್ಟರ್ ಗೆಲ್ಲುವುದಿಲ್ಲ’ ಎನ್ನುವ ಜೋಶ್​ಭರಿತ ಹೇಳಿಕೆ ನೀಡಿ ಲಿಂಗಾಯತರನ್ನು ಸೆಳೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಚಿವೆ ಸ್ಮೃತಿ ಇರಾನಿ, ನಟ ಸುದೀಪ್ ಮುಖೇನ ಬಿಜೆಪಿ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಶೆಟ್ಟರ್ ಮಾತ್ರ ಬಿ.ಎಲ್. ಸಂತೋಷ, ಪ್ರಲ್ಹಾದ ಜೋಶಿ ವಿರುದ್ಧ ಸಿಡಿಯುತ್ತಿದ್ದಾರೆ. ತಾವು ಗೆದ್ದಾಗೊಮ್ಮೆ 20 ಸಾವಿರ ಮತಗಳ ಅಂತರವಿರುತ್ತಿತ್ತು. ಈ ಪೈಕಿ 10 ರಿಂದ 15 ಸಾವಿರ ಮತಗಳನ್ನು ಬಿಜೆಪಿ ಬದಲು ತಮ್ಮ ಪರ ತಿರುಗಿಸಿಕೊಂಡರೆ ಗೆಲುವಿನ ದಡ ಸೇರಬಹುದು ಎನ್ನುವ ಲೆಕ್ಕಾಚಾರವಿಟ್ಟುಕೊಂಡು ಕ್ಷೇತ್ರ ಸುತ್ತುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​ನ ಕೆಲ ನಾಯಕರು ಒಳಹೊಡೆತ ಕೊಡುತ್ತಿದ್ದಾರೆ ಎನ್ನುವ ಮಾತು ಕ್ಷೇತ್ರದಲ್ಲಿದೆ. ಇಂಥ ಸನ್ನಿವೇಶಗಳ ಮಧ್ಯೆ ಬಿಜೆಪಿ ಭದ್ರಕೋಟೆಯನ್ನು ಛಿದ್ರಮಾಡಿ ಪತಾಕೆ ಹಾರಿಸುವುದು ಶೆಟ್ಟರ್​ಗೆ ದೊಡ್ಡ ಟಾಸ್ಕ್. ಬಿಜೆಪಿ ಸಾಮ್ರಾಜ್ಯ ಉಳಿಸಿಕೊಳ್ಳುವುದೂ ಮಹೇಶಗೆ ಸವಾಲಾಗಿದೆ.

ಯಾರಾಗ್ತಾರೆ ಕಲಘಟಗಿ ಕಿಂಗ್?: ಬಳ್ಳಾರಿಯ ಗಣಿ ಧಣಿ ಸಂತೋಷ ಲಾಡ್ ನೆಲೆ ಕಂಡುಕೊಂಡ ಕ್ಷೇತ್ರ ಕಲಘಟಗಿ. ಕಳೆದ ಬಾರಿ ಸಚಿವರಾಗಿದ್ದರೂ ಸೋಲುಂಡಿರುವ ಲಾಡ್ ಬದಲು ತಮಗೆ ಟಿಕೆಟ್ ನೀಡಬೇಕೆಂದು ನಾಗರಾಜ ಛಬ್ಬಿ ಯತ್ನಿಸಿದ್ದರು. ಅದಕ್ಕೆ ಕಾಂಗ್ರೆಸ್ ಒಪ್ಪದ ಕಾರಣ ಛಬ್ಬಿ ಕಮಲ ಹಿಡಿದಿದ್ದಾರೆ. ಅದಲು ಬದಲು ರಾಜಕಾರಣದಲ್ಲಿ ಸಮಬಲದ ಹೋರಾಟವಿದೆ. ಕಲಘಟಗಿ ಕಿಂಗ್ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.

ಬಂಡಾಯದ ನಾಡಲ್ಲಿ ಯಾರಿಗೆ ಬೆಂಬಲ?: ನವಲಗುಂದ ಕೂಡ ಜಿದ್ದಾಜಿದ್ದಿಯಿಂದ ಕೂಡಿದೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದಾರೆ. ವಿನೋದ ಅಸೂಟಿ ಸೇರಿ ಹಲವು ಆಕಾಂಕ್ಷಿಗಳ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಮುನೇನಕೊಪ್ಪಗೆ ಸವಾಲಾಗಿದ್ದರೂ ಅಭಿವೃದ್ಧಿ ಕಾರ್ಯ ಮನೆ ಮಾತಾಗಿದೆ. ಮಾಜಿ ಸಚಿವ ಕೆ.ಎನ್.ಗಡ್ಡಿ ಕಾಂಗ್ರೆಸ್ ತೊರೆದು ಜೆಡಿಎಸ್​ನಿಂದ ಸ್ಪರ್ಧೆಯೊಡ್ಡಿದ್ದು ಕೈಪಕ್ಷಕ್ಕೇ ಪೆಟ್ಟು.

ಕುಂದಗೋಳ ಕಿಂಗ್​ಡಂ ಯಾರ ಪಾಲು?: 2018ರಲ್ಲಿ ಸಚಿವ ಸಿ.ಎಸ್. ಶಿವಳ್ಳಿ ವಿರುದ್ಧ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಕೇವಲ 634 ಮತಗಳ ಅಂತರದಿಂದ ಸೋಲನುಭವಿಸಿದ್ದರು. 2019ರ ಉಪ ಚುನಾವಣೆಯಲ್ಲಿ ಶಿವಳ್ಳಿ ಪತ್ನಿ ಕುಸುಮಾವತಿ ಎಸ್.ಐ.ಚಿಕ್ಕನಗೌಡ್ರ ವಿರುದ್ಧ 1,601 ಮತಗಳ ಅಂತರದಿಂದ ಅನುಕಂಪದ ಅಲೆಯಲ್ಲಿ ಗೆಲುವಿನ ದಡ ಸೇರಿದ್ದರು. ಕುಸುಮಾವತಿಯೇ ಪುನಃ ಅಭ್ಯರ್ಥಿ. ಬಿಜೆಪಿ ಈ ಬಾರಿ ಚಿಕ್ಕನಗೌಡ್ರ ಬದಲು ಎಂ.ಆರ್. ಪಾಟೀಲಗೆ ಮಣೆ ಹಾಕಿದೆ. ಬಂಡಾಯವೆದ್ದಿರುವ ಚಿಕ್ಕನಗೌಡ್ರ ಪಕ್ಷೇತರರಾಗಿ ಸ್ಪರ್ಧೆಗಿಳಿದಿರುವುದು ಬಿಜೆಪಿಗೆ ಸವಾಲಾಗಿದೆ.

ಪಶ್ಚಿಮ ಪಟ್ಟಕ್ಕೆ ಪೈಪೋಟಿ: ಅರವಿಂದ ಬೆಲ್ಲದ 2 ಬಾರಿ ಗೆದ್ದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಅದನ್ನು ತಪ್ಪಿಸಲು ಕಾಂಗ್ರೆಸ್ ಈ ಬಾರಿ ದೀಪಕ ಚಿಂಚೋರೆಗೆ ಟಿಕೆಟ್ ನೀಡಿದೆ. ಲಿಂಗಾಯತರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಬೆಲ್ಲದ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್​ನ 11 ಜನ ಆಕಾಂಕ್ಷಿಗಳಾಗಿದ್ದರು. ಟಿಕೆಟ್ ತಪ್ಪಿರುವ ಇಬ್ಬರು ಪಕ್ಷದಿಂದ ದೂರ ಸರಿದಿದ್ದಾರೆ. ದೀಪಕ ಚಿಂಚೋರೆ ಹೊಸ ಮುಖವಾದರೂ ಪಾಲಿಕೆ ಸದಸ್ಯ, ಉಪ ಮೇಯರ್ ಆಗಿರುವ ಅನುಭವಿ.

ಧಾರವಾಡ ಗದ್ದುಗೆಗೆ ಗುದ್ದಾಟ: ಗ್ರಾಮೀಣ ಮತ್ತು ಪಾಲಿಕೆ ವ್ಯಾಪ್ತಿಯ ಕೆಲ ವಾರ್ಡ್ ಗಳನ್ನೊಳಗೊಂಡ ಧಾರವಾಡ ಕ್ಷೇತ್ರದ ದೊರೆಯಾಗಲು ಅಮೃತ ದೇಸಾಯಿ, ವಿನಯ ಕುಲಕರ್ಣಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯದ ಆದೇಶ ಇರುವುದರಿಂದ ಜಿಲ್ಲೆಯ ಹೊರಗಿದ್ದುಕೊಂಡೇ ವಿನಯ ತಂತ್ರ ಹೆಣೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನಲಾಗುತ್ತಿದ್ದರೂ ಅದಕ್ಕೆ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.

ಪೂರ್ವದಲ್ಲಿ ಉದಯಿಸುವವರಾರು?: ಕಾಂಗ್ರೆಸ್ ಭದ್ರಕೋಟೆಯಂತಿರುವ ಪೂರ್ವದಲ್ಲಿ ಅಬ್ಬಯ್ಯ ಪ್ರಸಾದ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೊಸ ಮುಖ ಡಾ.ಕ್ರಾಂತಿಕಿರಣ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಪಕ್ಷ ತೊರೆದು ಜೆಡಿಎಸ್​ನಿಂದ ಸ್ಪರ್ಧೆಯೊಡ್ಡಿದ್ದಾರೆ. ಕೈ- ಕಮಲದ ಮಧ್ಯೆ ನೇರ ಸ್ಪರ್ಧೆ ಎನ್ನಲಾಗಿದೆ.