ಲಂಡನ್: ಇಂಗ್ಲೆಂಡ್ನ ಮಾಜಿ ಮಾಡೆಲ್ ಟ್ರೇಸಿ ಡಿಕ್ಸನ್ (54), ಪೊಲೀಸ್ ಪೇದೆಯೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆಕೆ ತನ್ನ ತೋಟದಲ್ಲಿ ಬೆತ್ತಲೆಯಾಗಿ ಸನ್ ಬಾತ್ ಮಾಡುವಾಗ, ಪೊಲೀಸ್ ಪೇದೆಯೊಬ್ಬ ಪೊಲೀಸ್ ಹೆಲಿಕಾಪ್ಟರ್ ಬಳಸಿಕೊಂಡು ಅವಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿರುವುದಾಗಿ ಟ್ರೇಸಿ ಆರೋಪಿಸಿದ್ದಾರೆ.
ಇಂಗ್ಲೆಂಡ್ನ ಯಾರ್ಕ್‌ಷೈರ್ ವಾಸಿ ಟ್ರೇಸಿ ಇತ್ತೀಚೆಗೆ ತಮ್ಮ ತೋಟದಲ್ಲಿ ಪೂರ್ತಿ ನಗ್ನರಾಗಿ ಸನ್ ಬಾತ್ ಮಾಡುತ್ತಿದ್ದರಂತೆ. ಈ ಸಮಯದಲ್ಲಿ ಅಲ್ಲಿ ಪೊಲೀಸ್ ಹೆಲಿಕಾಪ್ಟರ್ ಹಾರಾಡಿದೆ. ಅತ್ಯಂತ ಹೆಚ್ಚಿನ ಎಂಪಿ ಕ್ಯಾಮೆರಾಗಳನ್ನು ಹೊಂದಿರುವ ಹೆಲಿಕಾಪ್ಟರ್ನಲ್ಲಿ (ಲಂಡನ್ನಲ್ಲಿ ಇಂತಹ ಹೆಲಿಕಾಪ್ಟರ್ಗಳ ಮೂಲಕ ಗಾಡಿಯ ನಂಬರ್ ಪ್ಲೇಟ್ನ್ನೂ ಗುರುತಿಸಲಾಗುವುದು) ಈಕೆಯ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ. ಈಕೆಯ ಜತೆಗೆ ವಿದ್ಯಾಭ್ಯಾಸ ಮಾಡಿದ್ದ ಪೊಲೀಸ್ ಪೇದೆ ಆಡ್ರಿಯನ್ ಪೊಗ್ಮೋರ್ ಈ ಕೆಲಸ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಟ್ರೇಸಿ 2 ಕೋಟಿ ರೂಪಾಯಿ ಪರಿಹಾರ ಕೋರಿದ್ದಾಳೆ ಎನ್ನಲಾಗಿದೆ.
ಈ ಘಟನೆಯಾದ ಮೇಲೆ ನನಗೆ ಪೊಲೀಸರ ಮೇಲೆ ನಂಬಿಕೆಯೇ ಹೋಗಿದೆ. ಈತ ನನ್ನ ಸಹಪಾಠಿಯಾಗಿದ್ದರಿಂದ, ಎಷ್ಟು ವರ್ಷಗಳಿಂದ ನನ್ನನ್ನು ಹೀಗೆ ಫಾಲೋ ಮಾಡಿದ್ದಾನೆ ನನಗೆ ಗೊತ್ತಿಲ್ಲ. ಕಳ್ಳರನ್ನು ಹಿಡಿಯಲು ಕೊಟ್ಟಿರುವ ಹೆಲಿಕಾಪ್ಟರ್ನ್ನು ಮೋಜಿಗಾಗಿ ಬಳಸುತ್ತಿದ್ದಾನೆ. ಈ ಹಿಂದೆ ಒಂದು ಸೆಕ್ಸ್ ವಿಡಿಯೋವನ್ನೂ ಇದೇ ರೀತಿಯಲ್ಲಿ ಆತ ಶೂಟ್ ಮಾಡಿದ್ದಾನೆ ಎಂದು ಟ್ರೇಸಿ ಆರೋಪಿಸಿದ್ದಾರೆ.
ತಾನು ಟ್ರೇಸಿಯ ನಗ್ನ ಚಿತ್ರ ತೆಗೆದಿರುವುದಾಗಿ ಆಡ್ರಿಯನ್ ತಪ್ಪೊಪ್ಪಿಕೊಂಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)