ನ್ಯೂಸ್

ಭಾರತದಲ್ಲಿ ಶೇಖ್ ಹಸೀನಾ ವಾಸ್ತವ್ಯ.. ಕೇಂದ್ರದ ಬಗ್ಗೆ ಕಾಂಗ್ರೆಸ್​ ಸಂಸದ ಶಶಿತರೂರ್ ಏನಂದ್ರು ಗೊತ್ತಾ?

ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತದಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಕಾಂಗ್ರೆಸ್ ನ ಹಿರಿಯ ಸಂಸದ ಶಶಿ ತರೂರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಶೇಖ್ ಹಸೀನಾ ಅವರಿಗೆ ಕೇಂದ್ರ ಸರ್ಕಾರ ಆಶ್ರಯ ನೀಡಿರುವುದನ್ನು ಶ್ಲಾಘಿಸಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾರೆ.

ಭಾರತವು ಶೇಖ್ ಹಸೀನಾಗೆ ಸಹಾಯ ಮಾಡದಿದ್ದರೆ ಅದು ನಾಚಿಕೆಗೇಡಿನ ಸಂಗತಿಯಾಗುತ್ತಿತ್ತು. ನಾವು ಸ್ನೇಹಿತರನ್ನು ಕೆಟ್ಟದಾಗಿ ನಡೆಸಿಕೊಂಡರೆ ಮತ್ತೆ ಯಾರೂ ನಮ್ಮ ಸ್ನೇಹಿತರಾಗಲು ಬಯಸುವುದಿಲ್ಲ. ಶೇಖ್ ಹಸೀನಾ ಭಾರತದ ಸ್ನೇಹಿತೆ. ಭಾರತ ಅವರ ಆಪ್ತ ಸ್ನೇಹಿತ ದೇಶ. ಸ್ನೇಹಿತರಿಗೆ ತೊಂದರೆಯಾದರೆ, ಸಹಾಯ ಮಾಡಲು ಒಂದು ಕ್ಷಣವೂ ಯೋಚಿಸಬಾರದು. ಒಬ್ಬ ಭಾರತೀಯನಾಗಿ ನಾನು ಕೇಂದ್ರ ಸರ್ಕಾರ ಮಾಡಿದ ಕೆಲಸವನ್ನು ಪ್ರಶಂಸಿಸುತ್ತೇನೆ. ಆಕೆಗೆ ಭದ್ರತೆ ಒದಗಿಸಿ ಇಲ್ಲಿಗೆ ಕರೆತರುವ ಮೂಲಕ ಭಾರತ ಸರಿಯಾದ ಕೆಲಸ ಮಾಡಿದೆ ಎಂದು ಶಶಿ ತರೂರ್ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

ನೆರೆಯ ದೇಶದಲ್ಲಿ ಅಧಿಕಾರ ಹಸ್ತಾಂತರ ಭಾರತಕ್ಕೆ ಯಾವುದೇ ಆತಂಕ ಉಂಟು ಮಾಡುವುದಿಲ್ಲ. ಭಾರತವು ಬಾಂಗ್ಲಾದೊಂದಿಗೆ ಸ್ವಾಭಾವಿಕವಾಗಿ ಸ್ನೇಹ ಸಂಬಂಧವನ್ನು ಹೊಂದಿದೆ. ಬಾಂಗ್ಲಾ ಜನರ ಕಲ್ಯಾಣವೇ ಭಾರತದ ಮೊದಲ ಗುರಿ. ಆದ್ಯತೆಯ ವಿಷಯದಲ್ಲಿ ಆ ದೇಶ ಎರಡನೇ ಸ್ಥಾನದಲ್ಲಿದೆ. ನಾವು ಯಾವಾಗಲೂ ಬಾಂಗ್ಲಾ ಜನರೊಂದಿಗೆ ಇರುತ್ತೇವೆ. 1971 ರ ಯುದ್ಧದ ಸಮಯದಲ್ಲಿ ನಾವು ಅವರೊಂದಿಗೆ ಇದ್ದೆವು. ತೊಂದರೆ ಮತ್ತು ಸಂತೋಷದ ಸಮಯದಲ್ಲಿ ನಾವು ಬಾಂಗ್ಲಾ ಜನರೊಂದಿಗೆ ಇದ್ದೇವೆ. ಯಾವುದೇ ಸರ್ಕಾರವಿದ್ದರೂ ಭಾರತದೊಂದಿಗೆ ಸ್ನೇಹದಿಂದ ಇರುತ್ತಾರೆ. ಭಾರತವೂ ಆ ಸಂಬಂಧವನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಮುಂಬರುವ ದಿನಗಳಲ್ಲಿ ಉಭಯ ದೇಶಗಳ ಬಾಂಧವ್ಯದಲ್ಲಿ ಯಾವುದೇ ಇಳಿಕೆಯಾಗಬಾರದು ಎಂದು ಅವರು ಹೇಳಿದ್ದಾರೆ.

ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ರಚನೆಯಾಗಿರುವ ಮಧ್ಯಂತರ ಸರ್ಕಾರದ ಬಗ್ಗೆ ಭಾರತ ಚಿಂತಿಸಬೇಕಾಗಿಲ್ಲ. ಅವರು ಅತ್ಯಂತ ಗೌರವಾನ್ವಿತ ವ್ಯಕ್ತಿ. ಅವರು ಜಮಾತ್-ಎ-ಇಸ್ಲಾಮಿ ಅಥವಾ ಪಾಕಿಸ್ತಾನಿ ಐಎಸ್‌ಐಗಿಂತ ಅಮೆರಿಕಕ್ಕೆ ಹತ್ತಿರವಾಗಿದ್ದಾರೆ. ಬಾಂಗ್ಲಾದಲ್ಲಿ ಪ್ರಬಲವಾದ ಅಸ್ತಿತ್ವ ಹೊಂದಿರುವ ಚೀನಿಯರಿಗೆ ಈ ಬೆಳವಣಿಗೆ ಮತ್ತಷ್ಟು ಭದ್ರಪಡಿಸಿಕೊಳ್ಳಲು ಒದಗಿ ಬಂದ ಅವಕಾಶ ಎಂದು ವಿಶ್ಲೇಷಿಸಿದ್ದಾರೆ.

ದೇಶದ ಶಾಂತಿ ಮತ್ತು ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಹಂಗಾಮಿ ಸರ್ಕಾರದ ಮುಖ್ಯಸ್ಥರಿಗೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.