ನವದೆಹಲಿ: ಸದ್ಯದಲ್ಲೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅದಕ್ಕೆ ಸಂಸದ ಶಶಿ ತರೂರ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಮಾತ್ರವಲ್ಲ, ಶಶಿ ಇಂಗಿತಕ್ಕೆ ಸೋನಿಯಾ ಕೂಡ ತಲೆಯಾಡಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ.
ಇಂದು ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಶಶಿ ತರೂರ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆಗ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಯಾರು ಕೂಡ ಸ್ಪರ್ಧಿಸಲು ಮುಕ್ತರು ಎಂದು ಸೋನಿಯಾ ಹೇಳಿದ್ದು, ಆ ಮೂಲಕ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಮನೆಯಲ್ಲಿ ಇಂದು ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಕುರಿತ ಮಾತುಕತೆಗೆ ಕಾಂಗ್ರೆಸ್ ನಾಯಕರಾದ ದೀಪೆಂದರ್ ಹೂಡ, ಜೈಪ್ರಕಾಶ್ ಅಗರ್ವಾಲ್, ವಿಜೇಂದ್ರ ಸಿಂಗ್ ಅವರೊಂದಿಗೆ ತರೂರ್ ಹಾಜರಾಗಿ ಪಾಲ್ಗೊಂಡಿದ್ದರು.
ಮತ್ತೊಂದೆಡೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರು ನವರಾತ್ರಿಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಅ. 17ರಂದು ನಡೆಯಲಿದೆ.