ಮಾನವರಿಗೆ, ‘ನಾವು ಭಗವಂತನನ್ನು ನೋಡಬಹುದೇ?’ ಎಂಬ ಪ್ರಶ್ನೆ ಬರುವುದು ಸಹಜ. ನಾವೇಕೆ ನೋಡಲಾಗುತ್ತಿಲ್ಲ? ಅವನನ್ನು ಕಾಣಲು ಏನೆಲ್ಲ ಮಾಡಬೇಕು? ಎಷ್ಟು ಕಾಲ ಸಾಧನೆ ಮಾಡಬೇಕು? ಇತ್ಯಾದಿ ಪ್ರಶ್ನೆಗಳು ಒಬ್ಬ ಅಧ್ಯಾತ್ಮ ಜೀವಿಗೆ ಬರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಅತ್ಯಂತ ಸ್ಪಷ್ಟವಾಗಿ ಉತ್ತರ ನೀಡುತ್ತಾರೆ. ಅನೇಕ ಸಮಯದಲ್ಲಿ ನಾನಾ ರೀತಿಯ ಭಕ್ತರು ಪರಮಹಂಸರ ದಿವ್ಯವಾಣಿಯನ್ನು ಆಲಿಸುತ್ತ ಈ ತೆರನಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಪರಮಹಂಸರು ವ್ಯಕ್ತಿಯ ಮಾನಸಿಕ ಶಕ್ತಿ ಹಾಗೂ ಹಿನ್ನೆಲೆಯನ್ನು ಅರಿತು ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತಿದ್ದರು. ಅವರ ಪ್ರಕಾರ, ‘ಚಿತ್ತಶುದ್ಧಿ ಆಗುವವರೆಗೂ ಭಗವಂತನ ದರ್ಶನ ದೊರೆಯುವ ಹಾಗಿಲ್ಲ. ಕಾಮ, ಕ್ರೋಧ, ಲೋಭ ಇವನ್ನೆಲ್ಲ ಜಯಿಸಿದರೆ ಮಾತ್ರ ಅವನ ಕೃಪೆ ಒದಗುತ್ತದೆ; ಆತನ ದರ್ಶನ ದೊರೆಯುತ್ತದೆ.’ ಈ ತೆರನಾಗಿ ವಿವರಿಸುತ್ತ ತಮ್ಮದೇ ಪ್ರಥಮ ಅನುಭವವನ್ನು ವಿವರಿಸುತ್ತಾರೆ. ‘ನನ್ನ ಹತ್ತೋ ಹನ್ನೊಂದನೇ ವಯಸ್ಸಿನಲ್ಲಿ ಊರಿನಲ್ಲಿದ್ದಾಗ ನನಗೆ ಸಮಾಧಿಯ ಅನುಭವ ದೊರೆಯಿತು. ಗದ್ದೆಬಯಲಿನಲ್ಲಿ ಹೋಗುತ್ತಿದ್ದಾಗ, ಏನೋ ಒಂದನ್ನು ನೋಡಿ ವಿಹ್ವಲನಾಗಿಬಿಟ್ಟೆ. ಭಗವಂತನ ದರ್ಶನ ದೊರೆತಿರುವುದಕ್ಕೆ ಕೆಲವು ಲಕ್ಷಣಗಳಿವೆ. ಜ್ಯೋತಿ ಕಾಣಿಸಿಕೊಳ್ಳುತ್ತದೆ; ಆನಂದ ಉಂಟಾಗುತ್ತದೆ; ಎದೆಯ ಒಳಗೆ ಮಹಾವಾಯು ಆಕಾಶದ ಹಾಗೆ ಸುರ್ ಸುರ್ ಎಂದು ಊರ್ಧ್ವಮುಖವಾಗಿ ಏರಲಾರಂಭಿಸುತ್ತದೆ.’ ಈ ರೀತಿಯ ಅನುಭವವನ್ನು ಭಕ್ತರೊಂದಿಗೆ ಹಂಚಿಕೊಂಡ ಪರಮಹಂಸರು ಯಾರು ಬೇಕಾದರೂ ಭಗವದ್ದರ್ಶನ ಪಡೆಯಬಹುದು ಎನ್ನುತ್ತಾರೆ.
ವಿಜಯಕೃಷ್ಣ ಗೋಸ್ವಾಮಿಯ ಬಳಿ ಮಾತನಾಡುವಾಗ (14 ಡಿಸೆಂಬರ್ 1882) ಇದೇ ವಿಚಾರವಾಗಿ ಅವರು ಮತ್ತೂ ಸ್ಪಷ್ಟವಾಗಿ ತಿಳಿಸುತ್ತಾರೆ; ‘ಹೇ ಭಗವಂತ, ನೀನು ಪ್ರಭು-ನಾನು ದಾಸ, ನೀನು ಭಗವಂತ-ನಾನು ಭಕ್ತ. ಯಾರು ಸಾಕ್ಷಾತ್ಕಾರ ಬಯಸುತ್ತಾರೆಯೋ ಅವರಿಗೆ ಭಗವಂತನ ಸಾಕ್ಷಾತ್ಕಾರ ದೊರೆತ ನಂತರವೂ ಈ ಭಾವ ಇರುತ್ತದೆ. ಆತನ ಅಹಂ ಪೂರ್ಣವಾಗಿ ಹೊರಟುಹೋಗದು. ಈ ವಿಧದ ಭಾವವನ್ನು ಕಾರ್ಯತಃ ಆಚರಣೆಗೆ ತರುತ್ತ ಕೊನೆಗೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಇದಕ್ಕೆ ಭಕ್ತಿಯೋಗ ಎಂದು ಹೆಸರು.’ ಪರಮಹಂಸರು ಈ ರೀತಿ ವಿವರಿಸುತ್ತಿದ್ದ ಸಂದರ್ಭದಲ್ಲಿ ವಿಜಯಕೃಷ್ಣ ಗೋಸ್ವಾಮಿಗೆ ಒಂದು ಸಂದೇಹ ಮೂಡುತ್ತದೆ. ಅದೇನೆಂದರೆ, ‘ವೇದಾಂತ ವಿಚಾರ ಮಾಡುವವರೂ ಆತನನ್ನೇ ಕೊನೆಗೆ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರಲ್ಲವೇ?’
ಪರಮಹಂಸರು: ‘ಹೌದು, ವಿಚಾರಮಾರ್ಗದಿಂದಲೂ ಆತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು. ಇದಕ್ಕೆ ಜ್ಞಾನಯೋಗ ಎಂದು ಹೆಸರು.’ ಹೀಗೆ ವಿವರಿಸುತ್ತ ಅಂತ್ಯದಲ್ಲಿ ತಿಳಿಸುತ್ತಾರೆ, ‘ಈ ಕಲಿಯುಗಕ್ಕೆ ಭಕ್ತಿಯೋಗವೇ ಒಳ್ಳೆಯದು. ಇದು ಬಹಳ ಸುಲಭವಾದುದು.’
ಇದನ್ನೂ ಓದಿ: ನಿರೀಕ್ಷಿಸಿ.. ಇನ್ನೊಂದು ಹಣಕಾಸಿನ ಪ್ಯಾಕೇಜ್!
‘ಕಾಟಾಚಾರದ ಭಕ್ತಿಯಿಂದ ಭಗವಂತನನ್ನು ಪಡೆಯಲಾಗುವುದಿಲ್ಲ. ಪ್ರೇಮಭಕ್ತಿಯಿಲ್ಲದೆ ಆತನ ಸಾಕ್ಷಾತ್ಕಾರ ಮಾಡಿಕೊಳ್ಳಲಾಗುವುದಿಲ್ಲ. ಪ್ರೇಮಭಕ್ತಿಗೆ ಮತ್ತೊಂದು ಹೆಸರು ರಾಗಭಕ್ತಿ ಎಂದು. ಪ್ರೇಮ, ಅನುರಾಗ ಇಲ್ಲದೆ ಭಗವಂತನ ಸಾಕ್ಷಾತ್ಕಾರ ದೊರೆಯದು. ಭಗವಂತನಲ್ಲಿ ಪ್ರೀತಿ ಉಂಟಾಗದ ಹೊರತು ಆತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಾಗುವುದಿಲ್ಲ. ಭಗವದ್ದರ್ಶನಕ್ಕಾಗಿ ಹಂಬಲಿಸುತ್ತಿರಬೇಕು.’ ಈ ಅಂಶವನ್ನು ಮತ್ತೂ ಸ್ಪಷ್ಟೀಕರಿಸಲು ಪರಮಹಂಸರು ಈ ಉದಾಹರಣೆ ನೀಡುತ್ತಾರೆ. ‘ಒಬ್ಬ ಗುರು ಒಂದು ದಿನ ಕೆರೆಯ ದಡದ ಮೇಲೆ ಹೋಗುತ್ತಿದ್ದನು. ಭಕ್ತನೊಬ್ಬನು ಅವನನ್ನು ಸಮೀಪಿಸಿ, ‘‘ಹೇ ಗುರುದೇವ! ದೇವರನ್ನು ಹೇಗೆ ಪಡೆಯಬಹುದು?’’ ಎಂದು ಕೇಳಿದನು. ತಕ್ಷಣವೇ ಆ ಗುರುವು ಈ ಭಕ್ತನ ಕೈಹಿಡಿದು ಕೆರೆಯ ನೀರಿನಲ್ಲಿ ಕೆಲವು ಕ್ಷಣ ಮುಳುಗಿಸಿಬಿಟ್ಟನು. ಕೆಲವು ಘಳಿಗೆ ನೀರಿನಲ್ಲಿ ಹಿಡಿದುಕೊಂಡು ನಂತರ ಬಿಟ್ಟನು. ಕೈಗಳಿಂದ ಅವನನ್ನು ಎಚ್ಚರಿಸಿ ‘‘ಹೇಗಿತ್ತು?’’ ಎಂದನು. ಭಕ್ತನು ‘‘ನನ್ನ ಕೊನೆಗಾಲ ಬಂದಂತೆ ಇತ್ತು, ಅವಸ್ಥೆ ತುಂಬ ದಾರುಣವಾಗಿತ್ತು! ಒಂದು ಕ್ಷಣ ಉಸಿರಾಟ ನಿಂತಾಗ್ಯೂ ನಾನು ಸತ್ತೇಹೋಗುತ್ತಿದ್ದೆ’’ ಎಂದೆಲ್ಲ ದುಗುಡದಿಂದ ವಿವರಿಸಿದನು. ಆಗ ಗುರುವು ತಿಳಿಸಿದ; ‘‘ನೀನು ಕ್ಷಣಕಾಲ ಉಸಿರಾಡುವುದಕ್ಕೆ ಹೇಗೆ ಹಂಬಲಿಸುತ್ತಿದ್ದೆಯೋ ಅದರಂತೆ ಭಗವಂತನಿಗಾಗಿ ಹಂಬಲಿಸಿದರೆ ಖಂಡಿತ ಭಗವದ್ದರ್ಶನವಾಗುತ್ತದೆ’’. ಈ ಉದಾಹರಣೆಯ ಮೂಲಕ ಭಗವದ್ದರ್ಶನ ಬೇಕೇ ಬೇಕು ಎಂಬ ಆಕಾಂಕ್ಷೆಯಿಂದ ಸಾಧನೆ ನಡೆಸುವವನಿಗೆ ಖಂಡಿತ ಸಾಕ್ಷಾತ್ಕಾರ ದೊರೆಯುತ್ತದೆಂದು ತಿಳಿಸುತ್ತಾರೆ.
ಆಗ ಭಕ್ತನೊಬ್ಬ ‘ಯಾವುದರ ಮೂಲಕ ನಾವು ಭಗವಂತನನ್ನು ಕಾಣಬಹುದು?’ ಎಂದು ಪ್ರಶ್ನಿಸುತ್ತಾನೆ. ಪರಮಹಂಸರು: ‘ಅತಿ ತೀವ್ರ ವ್ಯಾಕುಲತೆಯಿಂದ ನೀನು ಅವನಿಗಾಗಿ ಕಣ್ಣೀರು ಸುರಿಸಬಲ್ಲೆಯಾ? ಮನುಷ್ಯರು ಪ್ರಾಪಂಚಿಕ ವಿಷಯಗಳಿಗೆ, ಅಂತಸ್ತು, ಐಶ್ವರ್ಯ, ಮಾನ್ಯತೆ ಇತ್ಯಾದಿಗಳಿಗೆ ಕೊಡದಷ್ಟು ಕಣ್ಣೀರನ್ನು ಸುರಿಸುತ್ತಾರೆ. ಆದರೆ ದೇವರಿಗಾಗಿ ಯಾರು ಅಳುವರು? ಮಗು ಆಟಿಕೆಗಳಲ್ಲಿ ಸಂಪೂರ್ಣ ಮಗ್ನವಾಗಿರುವ ತನಕ ತಾಯಿ ಅಡುಗೆಮನೆ ಹಾಗೂ ಇತರ ಕೆಲಸಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ. ಆದರೆ ಯಾವಾಗ ಮಗುವಿಗೆ ಆಟಿಕೆಗಳಲ್ಲಿ ಬೇಸರವಾಗಿ ಅವುಗಳನ್ನು ದೂರ ದೂರ ಎಸೆದು ಜೋರಾಗಿ ತಾಯಿಗಾಗಿ ಕೂಗಲು ಆರಂಭಿಸುವುದೋ, ಆಗ ತಾಯಿ ಏನೇ ಮಾಡುತ್ತಿರಲಿ ಓಡಿ ಬಂದುಬಿಡುತ್ತಾಳೆ. ಒಲೆಯ ಮೇಲಿನ ಅನ್ನದ ಪಾತ್ರೆಯನ್ನು ತತ್ಕ್ಷಣ ಕೆಳಗಿಳಿಸಿ ಓಡಿ ಬಂದು ಮಗುವನ್ನು ಎತ್ತಿಕೊಂಡು ಸಂತೈಸುತ್ತಾಳೆ.’ ಸಾಧಕನು ಇದೇ ತೆರನಾಗಿ ಭಗವಂತನ ದರ್ಶನಕ್ಕಾಗಿ ಸದಾ ವ್ಯಾಕುಲನಾಗಿರಬೇಕು ಎಂದು ಪರಮಹಂಸರು ಉಪದೇಶಿಸುತ್ತಾರೆ.
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)