ಮುಂಬೈ: ರಾಷ್ಟ್ರವ್ಯಾಪಿ ತೀವ್ರ ಗದ್ದಲವನ್ನುಂಟು ಮಾಡಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಾರ್ವಜನಿಕರು, ಸೆಲೆಬ್ರಿಟಿಗಳು ಕಿಡಿಕಾರುತ್ತಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿರುವ ಸೆಲೆಬ್ರಿಟಿಗಳು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಾಲಿವುಡ್ನ ಹಿರಿಯ ಶಬಾನಾ ಅಜ್ಮಿ, ದೇಶವನ್ನೇ ಬೆಚ್ಚಿಬೀಳಿಸಿದ್ದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರವೂ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ಹೀನ ಜನರ ಮನಸ್ಥಿತಿ ಬದಲಾಗದಿರುವುದು ಅತ್ಯಂತ ಅವಮಾನಕರ. ಇಂಥ ಪೈಶಾಚಿಕ ಕೃತ್ಯವನ್ನು ಬೇರು ಸಹಿತ ಕಿತ್ತೊಗೆಯಲು ಸಮಾಜ ಕಾರ್ಯಗತವಾಗಬೇಕು ಎಂದು ಕರೆ ನೀಡಿದ್ದಾರೆ.
ಈ ಎಲ್ಲಾ ಪ್ರಕರಣಗಳು ಅತ್ಯಂತ ಅಪಾಯಕಾರಿ. ಇಂಥ ಯಾವುದೇ ಘಟನೆ ನಡೆದಾಗ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಬೇಕು. ಆದರೆ ಅದು ಕೆಲವೊಂದು ಪ್ರಕರಣಗಳಿಗಷ್ಟೇ ಸೀಮಿತವಾಗಬಾರದು ಮತ್ತು ರಾಜಕೀಯಗೊಳಿಸಬಾರದು. ಹೀಗಾದಲ್ಲಿ ಸಮಸ್ಯೆಯ ಬೇರು ಮಟ್ಟಕ್ಕೆ ಇಳಿಯುವುದು ಅಸಾಧ್ಯವಾಗಿದೆ.
ಮಹಿಳೆಯರನ್ನು ಭೋಗದ ವಸ್ತು ಎಂದು ನೋಡುವ ಮನಸ್ಥಿತಿಯನ್ನು ಸಮಾಜದಿಂದ ಕಿತ್ತೊಗೆಯಬೇಕು. ಮಹಿಳೆಯರಿಗೂ ಬದುಕಲು ಸಮಾನ ಹಕ್ಕು ಇದೆ ಎಂಬ ವಾತಾವರಣವನ್ನು ಸಮಾಜದಲ್ಲಿ ಸ್ಥಾಪಿಸಬೇಕು. ಅತ್ಯಾಚಾರದಂತ ಪ್ರಕರಣಗಳಲ್ಲಿ ಅಪರಾಧಿಗೆ ಮರಣದಂಡನೆ ಸಹಿತ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಿಲ್ಲ. ಹೀಗಾಗಿ ಇದನ್ನು ಬೇರುಮಟ್ಟಕ್ಕಿಳಿದು ಕೆಲಸ ಮಾಡಬೇಕಿದೆ. ವರ್ಮಾ ಸಮಿತಿಯು ನೀಡಿರುವ ಕೆಲವೊಂದು ಮಾನದಂಡಗಳ ಮೇಲೆ ಕೆಲಸ ಮಾಡಬೇಕಿದೆ ಎಂದು ಬಾಲಿವುಡ್ನ ಹಿರಿಯ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ.