ನ್ಯೂಸ್

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತೆಗೆ ಲೈಂಗಿಕ ದೌರ್ಜನ್ಯ, ಅಪರಿಚಿತ ವೈದ್ಯನಿಂದಲೇ ಹೀನಕೃತ್ಯ

ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿನ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರಿಗೆ ಮಸಿ ಬಳಿಯುವ ಹೇಯಕೃತ್ಯಕ್ಕೆ ದೃಷ್ಕರ್ಮಿಯೊಬ್ಬ ಯತ್ನಿಸಿದ್ದು, ಸಂತ್ರಸ್ತ ಮಹಿಳೆ ಕೋವಿಡ್ ಕೇರ್ ನೋಡಲ್ ಅಧಿಕಾರಿಗೆ ವಾಟ್ಸ್ಆ್ಯಪ್ ಮೂಲಕ ದೂರು ನೀಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತ ಮಹಿಳೆ‌ ಮೇಲೆ ಅಪರಿಚಿತ ವೈದ್ಯನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಜು.30ರಂದು ಎಫ್​ಐಆರ್​ ದಾಖಲಾಗಿದೆ.

ಕೋವಿಡ್ ಸೋಂಕಿತರ ವಾರ್ಡಿಗೆ ಜು.25ರ ರಾತ್ರಿ 10 ಗಂಟೆ ಸುಮಾರಿನಲ್ಲಿ ಬಂದ ಪಿಪಿಇ ಕಿಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂದೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆಯು ಕೋವಿಡ್ ಕೇರ್ ನೋಡಲ್ ಅಧಿಕಾರಿಗೆ ವಾಟ್ಸ್ಆ್ಯಪ್ ಮೂಲಕ ದೂರು ನೀಡಿದ್ದಾರೆ. ಈ ಬಗ್ಗೆ ನೋಡಲ್ ಆಫೀಸರ್​ನಿಂದ ಆಸ್ಪತ್ರೆಯ ಟ್ರಾಮಕೇರ್ ವಿಶೇಷ ಅಧಿಕಾರಿಗೆ ದೂರು ನೀಡಲಾಗಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆ ‌ಟ್ರಾಮಕೇರ್ ವಿಶೇಷ ಅಧಿಕಾರಿ ಬಾಲಾಜಿ ಪೈ ಅವರು ವಿವಿ ಪುರಂ ಠಾಣೆಯಲ್ಲಿ ಜು.30ರಂದು ಕೇಸು ದಾಖಲಿಸಿದ್ದಾರೆ.

ತನಿಖೆ ಮುಂದುವರಿಸಿರುವ ಪೊಲೀಸರು ವೈದ್ಯನ ಸೋಗಿನಲ್ಲಿ ಬಂದು ಕರೊನಾ ಸೋಂಕಿತೆಗೆ ಲೈಂಗಿಕ ಕಿರುಕುಳ ಕೊಟ್ಟ ದುಷ್ಕರ್ಮಿಗಾಗಿ ಬಲೆ ಬೀಸಿದ್ದಾರೆ.