ನ್ಯೂಸ್

ಪ್ರಿಯಾಂಕಾ ಗಾಂಧಿ ಪ್ರವಾಸದ ದಿನದಂದೇ ಹಲವು 'ಕೈ' ನಾಯಕರ ರಾಜೀನಾಮೆ!

ಪಣಜಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಹಲವಾರು ರಾಜಕೀಯ ಬದಲಾವಣೆಗಳು ನಡೆದಿವೆ. ಹಾಲಿ ಬಿಜೆಪಿ ನೇತೃತ್ವದ ಸರ್ಕಾರವಿರುವ ಈ ರಾಜ್ಯಕ್ಕೆ ಇಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರವಾಸ ಕೈಗೊಂಡಿದ್ದಾರೆ. ಆದರೆ, ಇದೇ ವೇಳೆಗೇ ಹಲವು ಕಾಂಗ್ರೆಸ್​ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ವರದಿಯಾಗಿದೆ.

ಗೋವಾದ ಪೊರ್ವೊರಿಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಗುಂಪೊಂದು ಇಂದು ಬೆಳಗ್ಗೆ ರಾಜೀನಾಮೆ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ ಎಂದು ಸ್ವತಂತ್ರ ಶಾಸಕ ರೋಹನ್ ಖೌಂಟೆ ಬೆಂಬಲಿತ ಗುಂಪು ಹೇಳಿಕೊಂಡಿದೆ. "ಕಾಂಗ್ರೆಸ್ ಪಕ್ಷ ಮುಂಬರುವ ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಲು ಗಂಭೀರ ಆಸಕ್ತಿ ತೋರುತ್ತಿಲ್ಲ. ಅದರ ಕೆಲವು ನಾಯಕರ ಧೋರಣೆಯಿಂದಾಗಿ ಈ ರೀತಿ ಆಗುತ್ತಿದೆ" ಎಂದು ಈ ಗುಂಪಿನ ನಾಯಕ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗುಪೇಶ್ ನಾಯ್ಕ್ ಹೇಳಿದ್ದಾರೆ.

ಮತ್ತೊಂದೆಡೆ, ದಕ್ಷಿಣ ಗೋವಾದ ಹಿರಿಯ ನಾಯಕ ಮೊರೆನೊ ರೆಬೆಲೊ ಕೂಡ ರಾಜೀನಾಮೆ ನೀಡಿದ್ದಾರೆ. ಪಕ್ಷದ ವಿರುದ್ಧ ಕೆಲಸ ಮಾಡಿದರೂ ಕರ್ಟೋರಿಮ್ ಕ್ಷೇತ್ರದಿಂದ ಹಾಲಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊವನ್ನು ಪಕ್ಷವು ಅಭ್ಯರ್ಥಿಯಾಗಿ ಘೋಷಿಸಿರುವ ಬಗ್ಗೆ ರಾಜೀನಾಮೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಚುನಾವಣೆ ಸಮಯದಲ್ಲಿ ಈ ರೀತಿ ಪಕ್ಷ ತೊರೆಯುತ್ತಿರುವ ನಾಯಕರ ಬಗ್ಗೆ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್​​ನ ಗೋವಾ ಇನ್​ಚಾರ್ಜ್​ ಆದ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. (ಏಜೆನ್ಸೀಸ್)