ಸಾಂದರ್ಭಿಕ ಚಿತ್ರ 
ನ್ಯೂಸ್

ಎಸ್‌ಯುವಿ ಮೇಲೆ ಟ್ರಕ್ ಪಲ್ಟಿಯಾಗಿ 7 ಮಂದಿ ಸಾವು

ಡೋಲ್: ಡಂಪರ್ ಟ್ರಕ್​ ಎಸ್​ಯುವಿ ಮೇಲೆ ಪಲ್ಟಿಯಾದ ಪರಿಣಾಮ ಏಳು ಜನರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಡೋಲ್​ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಬಳಿಯ ಸಿಧಿ-ಟಿಕಾರಿ ರಸ್ತೆಯಲ್ಲಿ ಇಂದು ಬೆಳಿಗ್ಗೆ 10ರ ಸುಮಾರು ಈ ಭೀಕರ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದು, ಗುರುತು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ಡಂಪರ್ ಟ್ರಕ್ ಮೊದಲು ಎಸ್‌ಯುವಿಗೆ ಡಿಕ್ಕಿ ಹೊಡೆದಿದ್ದು, ನಂತರ ಅದರ ಮೇಲೆ ಪಲ್ಟಿಯಾದ ಪರಿಣಾಮ ಏಳು ಜನರು ಮೃತಪಟ್ಟಿದ್ದಾರೆ ಎಂದು ಸಿಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳು, ಸದ್ಯ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸ್ಥಳೀಯ ಸರ್ಕಾರವು ಪರಿಹಾರ ಘೋಷಿಸಿದೆ.(ಏಜೆನ್ಸೀಸ್​)