ನ್ಯೂಸ್

₹ 7 ಲಕ್ಷ ಮೌಲ್ಯದ ಕೂದಲು ಕಳ್ಳತನ ಮಾಡಿದ ಖದೀಮರು: ವಿಚಿತ್ರ ಘಟನೆಗೆ ಬೆಚ್ಚಿದ ಪೊಲೀಸರು!

ಹರಿಯಾಣ: ಇಲ್ಲಿನ ಫರಿದಬಾದ್ ನಗರದ ಮನೆಯೊಂದರಲ್ಲಿ 7ಲಕ್ಷ ರೂ. ಮೌಲ್ಯದ ಮಹಿಳಾ ಕೂದಲು ಮತ್ತು 2 ಲಕ್ಷ ರೂ ನಗದು ಕಳ್ಳತನ ಮಾಡಿದ ವಿಚಿತ್ರ ಘಟನೆಯೊಂದು ಇತ್ತೀಚಿಗೆ ನಡೆದಿದೆ.

ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಖದೀಮರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೂದಲಿನ ಬೆಲೆ ಕೇಳಿದ ಪೊಲೀಸರು ಬೆರಾಗಿದ್ದಾರೆ. ಸಂತ್ರಸ್ತರು ವಿಗ್​ ತಯಾರಿಕೆ ಮಾಡುತ್ತಿದ್ದು, ಅದಕ್ಕಾಗಿ ಕೂದಲನ್ನು ಕಚ್ಚ ವಸ್ತುವಾಗಿ ಬಳಕೆ ಮಾಡುತ್ತಿದ್ದರು. 150 ಕೆ.ಜಿ ಕೂದಲು(7 ಲಕ್ಷ ರೂ. ಮೌಲ್ಯ) ಜತೆಗೆ 2 ಲಕ್ಷ ರೂ. ನಗದು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳ್ಳತನ ಸಿಸಿಟಿವಿಯಲ್ಲಿ ಸೆರೆ

ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂವರು ದುಷ್ಕರ್ಮಿಗಳು ಮೆಟ್ಟಿಲುಗಳ ಮೂಲಕ ಮನೆಗೆ ಪ್ರವೇಶಿಸಿದ್ದಾರೆ. ಕೋಣೆಯ ಬೀಗವನ್ನು ಮುರಿದು ಕೂದಲು ಮತ್ತು ನಗದು ಹಣದೊಂದಿಗೆ ಪರಾರಿಯಾಗಿರುವ ಘಟನೆಯ ಕ್ಲಿಪ್​ಗಳ ವಿಡಿಯೋ ಇದೀಗ ಬಹಿರಂಗಗೊಂಡಿದೆ. ಈ ಘಟನೆಯು ಜ.14 ರಾತ್ರಿ 2:30 ರಿಂದ 3 ಗಂಟೆಯ ನಡುವೆ ನಡೆದಿದೆ ಎಂದು ವರದಿಯಾಗಿದೆ.

ವಿಗ್​ ಮಾರುಕಟ್ಟೆ ವಿಸ್ತಾರಗೊಂಡಿದೆ. ಈ ಹಿನ್ನೆಲೆ ದೇಶಿ ಮತ್ತು ಅಂತರಾಷ್ಟ್ರೀಯ ಮಾರ್ಕೆಟ್​ನಲ್ಲಿ ವಿಗ್​ಗಳಿಗೆ ಬಹುಬೇಡಿಕೆ ಇದೆ. ಹೀಗಾಗಿ, ಕೂದಲಿನ ದರ ಅಧಿಕವಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಆರೋಪಿಗಳ ಗುರುತಿನ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಅಧಿಕಾರಿಗಳು ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)