ನ್ಯೂಸ್

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ: ಐಎಎಸ್​ ಅಧಿಕಾರಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಪತ್ನಿ!

ಹೈದರಾಬಾದ್​: ಐಎಎಸ್​ ಅಧಿಕಾರಿ ವಿರುದ್ಧ ಅವರ ಪತ್ನಿ ದೂರು ದಾಖಲಿಸಿರುವುದು ತೆಲಂಗಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ವರದಕ್ಷಿಣ ಕಿರುಕುಳ ಮಾತ್ರವಲ್ಲದೆ, ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಐಎಎಸ್​ ಅಧಿಕಾರಿ ಪತ್ನಿ ಕೋರ್ಟ್​ ಮೆಟ್ಟಿಲೇರಿದ್ದು, ಆರೋಪಿ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಕೋರ್ಟ್​ ಆದೇಶಿಸಿದೆ.

ಪ್ರಕರಣದ ವಿವರಣೆಗೆ ಬರುವುದಾದರೆ, ತೆಲಂಗಾಣ ಕೇಡರ್​ನ 2014ರ ಬ್ಯಾಚಿನ ಐಎಎಸ್​ ಅಧಿಕಾರಿ ಸಂದೀಪ್​ ಕುಮಾರ್​ ಝಾ ವಿರುದ್ಧ ಈ ಆರೋಪ ಕೇಳಿಬಂದಿದೆ. ಇವರು ಬಿಹಾರದ ದರ್ಭಾಂಗ ಜಿಲ್ಲೆಯ ನಿವಾಸಿ. 2021ರಲ್ಲಿ ಛತ್ತೀಸ್​ಗಢದ ಕೊರ್ಬಾ ಜಿಲ್ಲೆಯ ಮಹಿಳೆಯನ್ನು ಮದುವೆಯಾಗಿದ್ದಾರೆ.

ಎಸ್​ಪಿಗೆ ದೂರು

ಆ ಸಮಯದಲ್ಲೇ ಹುಡುಗಿಯ ಪಾಲಕರು ವರದಕ್ಷಿಣೆಗಾಗಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಇತ್ತೀಚೆಗಷ್ಟೇ ಪತಿಯ ವಿರುದ್ಧ ಸಂತ್ರಸ್ತ ಪತ್ನಿ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಕೊರ್ಬಾ ಎಸ್ಪಿಗೆ ದೂರು ನೀಡಿದ್ದು, ಮದುವೆಯ ನಂತರ ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ, ಕೌಟುಂಬಿಕ ಹಿಂಸಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಯನ್ನು ಹೊಂದಲು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮದುವೆಗೆ 1 ಕೋಟಿಗೂ ಅಧಿಕ ಖರ್ಚು

ಈಗಾಗಲೇ ವರದಕ್ಷಿಣೆಯಾಗಿ ಬ್ರ್ಯಾಂಡೆಡ್ ಬಟ್ಟೆಗಳು, ಫ್ರಿಡ್ಜ್​, ವಾಷಿಂಗ್ ಮೆಷಿನ್, ಟೆಲಿವಿಷನ್ ಮತ್ತು ಪೀಠೋಪಕರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತ ಪತ್ನಿ ಆರೋಪಿಸಿದ್ದಾರೆ. ವರದಕ್ಷಿಣೆ ಹೊರತುಪಡಿಸಿ, ಕುಟುಂಬವು ಮದುವೆಗೆ 1 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ.

ಕೋರ್ಟ್​ ಆದೇಶ

ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಛತ್ತೀಸ್‌ಗಢದ ಕೊರ್ಬಾ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂದೀಪ್ ಕುಮಾರ್ ಝಾ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಕೋರ್ಟ್ ಹೊಸದಾಗಿ ಆದೇಶ ಹೊರಡಿಸಿದೆ. ಸಂದೀಪ್ ಕುಮಾರ್ ಪ್ರಸ್ತುತ ತೆಲಂಗಾಣ ಐಟಿ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)